ಕರಾವಳಿ

ನಡುರಸ್ತೆಯಲ್ಲಿ ಕಾಲೇಜು ವಿದ್ಯಾರ್ಥಿಗೆ ರಾಡ್‌ನಿಂದ ಹಲ್ಲೆ ಪ್ರಕರಣ: ಓರ್ವ ಬಂಧನ

Pinterest LinkedIn Tumblr

ಕುಂದಾಪುರ: ಕುಂದಾಪುರದ ಭಂಡಾರ್ಕಾರ್ಸ್ ಕಾಲೇಜಿಗೆ ತೆರಳುವ ಮಾರ್ಗಮಧ್ಯೆ ನಡುರಸ್ತೆಯಲ್ಲಿ ಜ.೨೮ ಸೋಮವಾರ ಕಾಲೇಜು ವಿದ್ಯಾರ್ಥಿಗಳಿಗೆ ರಾಡ್‌ನಿಂದ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಸಮೀಪದ ನಿವಾಸಿ ಸುಬ್ರಮಣ್ಯ ಶೆಟ್ಟಿ (19) ಬಂಧಿತ ಆರೋಪಿ.

ಕುಂದಾಪುರದ ಪ್ರತಿಷ್ಟಿತ ಕಾಲೇಜಾದ ಭಂಡಾರ್ಕಾರ್ಸ್ ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳ ಮೇಲೆ ಯುವಕರ ತಂಡವೊಂದು ಪೂರ್ವದ್ವೇಶದ ಹಿನ್ನೆಲೆಯಲ್ಲಿ ದಾಳಿ ನಡೆಸಿತ್ತು. ನಡುರಸ್ತೆಯಲ್ಲಿ ನೆರೆದಿದ್ದ ಸಾರ್ವಜನಿಕರ ಎದುರು ಮನಸ್ಸೋ‌ಇಚ್ಚೆ ರಾಡು, ಹೆಲ್ಮೆಟ್ ಮೊದಲಾದವುಗಳಿಂದ ವಿದಾರ್ಥಿಗಳಿಗೆ ಥಳಿಸಲಾಗಿದ್ದು ಓರ್ವ ವಿದ್ಯಾರ್ಥಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ. ಈ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕವಾದ ಚರ್ಚೆಗೆ ಗ್ರಾಸವಾಗಿತ್ತು.

ಪ್ರಕರಣದ ಬೆನ್ನತ್ತಿದ ಕುಂದಾಪುರ ಠಾಣೆ ಪಿ‌ಎಸ್‌ಐ ಹರೀಶ್ ಆರ್. ನಾಯ್ಕ್ ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನು ರಚಿಸಿದ್ದರು. ಅದರಂತೆಯೇ ಗುರುವಾರ ಸಂಜೆ ಇದೇ ಪ್ರಕರಣದ ಸಲುವಾಗಿ ವಿಶೇಷ ಕರ್ತವ್ಯದಲ್ಲಿದ್ದ ಸಿಬ್ಬಂದಿಗಳಾದ ಚೇತನ್ ಹಾಗೂ ಪ್ರಸನ್ನ ಕೋಟೆಶ್ವರ ಹಾಲಾಡಿ ಜಂಕ್ಷನ್ ಬಳಿ ಆರೋಪಿ ಸುಬ್ರಮಣ್ಯ ಶೆಟ್ಟಿಯನ್ನು ಬಂಧಿಸಿದ್ದಾರೆ. ಆರೋಪಿಯು ವಿಚಾರಣೆ ವೇಳೆ ಅಂದಿನ ಘಟನೆ ಬಗ್ಗೆ ಸಂಪೂರ್ಣ ವಿವರಣೆ ನೀಡಿದ್ದು ಮಾತ್ರವಲ್ಲದೇ ತಪ್ಪೊಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಬಳಿಕ ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

Comments are closed.