
ಬಳ್ಳಾರಿ: ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು ಎನ್ನುವ ಗಾದೆಯಿದೆ. ಆದ್ರೆ ಕನಸಿನ ಮನೆ ಕಟ್ಟೋಕೆ ಸೈಟ್ ಖರೀದಿಸಲು ಹಣ ಕಟ್ಟಿದ ಸಾವಿರಾರು ಜನರಿಗೆ ವಂಚಿಸಿದ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ನೆರೆಯ ಆಂಧ್ರದಿಂದ ಇಲ್ಲಿಗೆ ಬಂದು ಮೋಸ ಮಾಡುವುದು ಇವರಿಗೆ ನೀರು ಕುಡಿದಷ್ಟು ಸುಲಭ. ಬಳ್ಳಾರಿಯ ಶ್ರೀ ಶಿವಸಾಯಿ ಡವಲಪರ್ಸ್ ಸಂಸ್ಥೆಯು ಕಡಿಮೆ ರೇಟಿಗೆ ಸೈಟ್ ನೀಡುವುದಾಗಿ ಹೇಳಿ ಲಕ್ಷ ಲಕ್ಷ ಹಣ ಸಂಗ್ರಹಿಸಿ ಸಾವಿರಾರು ಜನರಿಗೆ ಟೋಪಿ ಹಾಕಿದೆ. ಕೇವಲ ಸೈಟು ಕಳೆದುಕೊಳ್ಳುವುದಲ್ಲ ಜೀವವನ್ನೇ ಕಳೆದುಕೊಂಡು ಹಣವೂ ಇಲ್ಲದೆ ಪರದಾಡುತ್ತಿದ್ದಾರೆ.
ಮನೆ ಕಟ್ಟೋಕೆ ಕಡಿಮೆ ರೇಟಿಗೆ ಸೈಟ್ ಸಿಗುತ್ತೆ ಎಂದು ಆಸೆಬಿದ್ದು ಬಳ್ಳಾರಿಯ ಸುಮಾರು ಆರು ಸಾವಿರಕ್ಕೂ ಅಧಿಕ ಜನರು ಶ್ರೀ ಶಿವಸಾಯಿ ಡವಲಪರ್ಸ್ ಬಳಿ ಸೈಟಿಗಾಗಿ ಪ್ರತಿ ತಿಂಗಳು ಕಂತಿನ ಪ್ರಕಾರ ಹಣ ಕಟ್ಟಿದ್ದರು. ತಿಂಗಳಿಗೆ ಸಾವಿರ ರೂಪಾಯಿಯಂತೆ 60 ತಿಂಗಳು ಕಾಲ ಹಣ ಕಟ್ಟಿದ್ರೆ ಸೈಟ್ ನೀಡುವುದಾಗಿ ಹೇಳಿ ಸಾವಿರಾರು ಜನರಿಂದ ಶಿವಸಾಯಿ ಡೆವಲಪರ್ಸ್ ಕಂಪನಿ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿತ್ತು. ಆದ್ರೆ ಕಳೆದ 2004ರಿಂದ ಸೈಟ್ ಹೆಸರಿನಲ್ಲಿ ಹಣ ಕಟ್ಟಿದ ಆರು ಸಾವಿರಕ್ಕೂ ಅಧಿಕ ಜನರಿಗೆ ಇದೀಗ ಸೈಟ್ ನೀಡದೇ ಹಣವನ್ನೂ ಮರಳಿಸದೇ ವಂಚಿಸಿದೆ.
ಸೈಟ್ ಆಸೆಗೆ ಮಗಳನ್ನ ಕಳೆದುಕೊಂಡ ದಂಪತಿ:
ಬಳ್ಳಾರಿಯ ಹಾವಂಭಾವಿ ಪ್ರದೇಶದ ಕಾಂಚನಮ್ಮ ಹಾಗೂ ಮಲ್ಲಿಕಾರ್ಜುನ್ ತಮ್ಮ ಮಗಳು ಕವಿತಾ ಮದುವೆಗೆಂದು ಅಳಿಯನಿಗೆ ಇದೇ ಸೈಟ್ ಕೊಡುವುದಾಗಿ ಹೇಳಿದ್ದರು. ಆದರೆ ಪೋಷಕರಿಗೆ ಸೈಟ್ ಸಿಗಲಿಲ್ಲ. ಗಂಡನ ಮನೆಯವರ ಕಿರುಕುಳಕ್ಕೆ ಮಗಳು ಆತ್ಮಹತ್ಯೆ ಮಾಡಿಕೊಳ್ಳಬೇಕಾಯಿತು. ಕೇವಲ ಮೋಸ ಹೋಗಿದ್ದಷ್ಟೇ ಅಲ್ಲ, ಇದ್ದೊಬ್ಬ ಮಗಳನ್ನೂ ಕಳೆದುಕೊಳ್ಳಬೇಕಾಯಿತು. ಇಂಥವರನ್ನು ಸುಮ್ಮನೆ ಬಿಡಬಾರದು ಎಂದು ಕಾಂಚನಮ್ಮ ಮತ್ತು ಮಲ್ಲಿಕಾರ್ಜುನ್ ದಂಪತಿ ಆಕ್ರೋಶದ ಕಂಬಿನಿ ಮಿಡಿಯುತ್ತಿದ್ದಾರೆ.
ಮಾಲೀಕರ ಬಂಧನವಾದರೂ ಬಗೆಹರಿದಿಲ್ಲ ಸಮಸ್ಯೆ:
ಬಳ್ಳಾರಿಯ ತಾಳೂರು ರಸ್ತೆ, ಹೊಸಪೇಟೆಯ ವೇಣಿವೀರಾಪುರ ಹಾಗೂ ಬಳ್ಳಾರಿಯ ಮಧ್ಯಭಾಗದಲ್ಲಿ ಸೈಟ್ ನೀಡುವುದಾಗಿ ಹಣ ಪಡೆದ ಶಿವಸಾಯಿ ಡವಲಪರ್ಸ್ ಇದುವರೆಗೂ ಒಬ್ಬರಿಗೂ ಸೈಟ್ ನೀಡಿಲ್ಲ. ಗ್ರಾಹಕರ ದೂರಿನ ಮೇರೆಗೆ ಪೊಲೀಸರು ಶಿವಸಾಯಿ ಡೆವಲಪರ್ಸ್ನ ಮಾಲೀಕರಾದ ಮಾಧವರಾವ್, ರಾಮಬಾಬು, ರವಿಕಾಂತರನ್ನ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇವರೆಲ್ಲ ಮೂಲತಃ ನೆರೆಯ ಆಂಧ್ರಪ್ರದೇಶದ ಕಮ್ಮಂ ಪ್ರದೇಶದವರು. ಬಳ್ಳಾರಿಯಲ್ಲಿ ತಾತ್ಕಾಲಿಕ ಕಚೇರಿ ತೆರೆದು ಪ್ರತಿ ತಿಂಗಳು ತಪ್ಪದೇ ಹಣ ಕಟ್ಟಿದ ಸಾವಿರಾರು ಜನರಿಂದ ಹಣ ಪಡೆದು ಅತ್ತ ಸೈಟ್ ಕೊಡದೆ, ಕಟ್ಟಿದ ಹಣವೂ ನೀಡದೆ ಮೋಸ ಮಾಡಿದ್ದಾರೆ. ಸೈಟ್ ನೀಡುವುದಾಗಿ ಹಣ ಪಡೆದು ವಂಚಿಸಿದ ಶಿವಸಾಯಿ ಡೆವಲಪರ್ಸ್ ವಿರುದ್ದ ಹಲವರು ಈಗಾಗಲೇ ಬಳ್ಳಾರಿಯ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇಲ್ಲಿಯವರೆಗೆ ಹಲವು ದೂರುಗಳು ಬಂದಿವೆ. ವಂಚನೆಗೊಳಗಾದವರು ಸ್ವಂಪ್ರೇರಿತವಾಗಿ ದೂರು ನೀಡುವಂತೆ ಬಳ್ಳಾರಿ ಜಿಲ್ಲಾ ಎಸ್ಪಿ ಅರುಣ ರಂಗರಾಜನ್ ಮನವಿ ಮಾಡಿದ್ದಾರೆ.
ಆಂಧ್ರದ ಮೂಲದ ಮಾಲಿಕರು ಶಿವಸಾಯಿ ಡೆವಲಪರ್ಸ್, ಸತ್ಯಸಾಯಿ ಡೆವಲಪರ್ಸ್ ಎನ್ನುವ ಹೆಸರಿನಲ್ಲಿ ರಾಜ್ಯದ ಬಳ್ಳಾರಿ ಸೇರಿದಂತೆ ವಿವಿಧ ಜಿಲ್ಲೆಗಳು ಹಾಗೂ ಆಂಧ್ರದಲ್ಲೂ ಸಹ ಸೈಟ್ ನೀಡುವುದಾಗಿ ವಂಚಿಸಿದೆ. ಈ ಸಂಸ್ಥೆ ವಿರುದ್ದ ಈಗಾಗಲೇ ವಿವಿಧ ಪೊಲೀಸ್ ಠಾಣೆಯಲ್ಲಿ ಹಲವು ದೂರು ದಾಖಲಾಗಿವೆ. ಹಲವು ಸಲ ಬಂಧಿಸಿದರೂ ಜಾಮೀನಿನ ಮೇಲೆ ಹೊರಬಂದು ತಮ್ಮ ಆಟಾಟೋಪ ಮುಂದುವರೆಸುತ್ತಾರೆ. ಕಡಿಮೆ ದರಕ್ಕೆ ಸೈಟ್ ಸಿಗುತ್ತೆ ಎಂದು ಲಕ್ಷಾಂತರ ರೂಪಾಯಿ ಹಣ ಕಟ್ಟಿದ ಸಾವಿರಾರು ಜನರು ಇದೀಗ ಅತ್ತ ಹಣವೂ ಇಲ್ಲದೇ ಇತ್ತ ಸೈಟ್ ಸಿಗದೇ ಪರದಾಡುತ್ತಿದ್ದಾರೆ. ಇನ್ನಾದರೂ ಕಡಿಮೆ ದರಕ್ಕೆ ಸೈಟ್ ನೀಡುವುದಾಗಿ ಹೇಳುವ ಡೆವಲಪರ್ಸ್ಗಳ ಬಗ್ಗೆ ಗ್ರಾಹಕರು ಎಚ್ಚೆತ್ತುಕೊಳ್ಳಬೇಕಾಗಿದೆ.
Comments are closed.