
ಬೆಂಗಳೂರು: ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಹು ನಿರೀಕ್ಷಿತಾ ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾವನ್ನು ಮಾಜಿ ಸೈನಿಕರ ಜೊತೆ ನಗರದ ಸೆಂಟ್ರಲ್ ಸ್ಪಿರಿಟ್ ಮಾಲ್ ನಲ್ಲಿ ನೋಡಿದ್ದು, ಸಿನಿಮಾ ನೋಡಿದ ಬಳಿಕ ‘ಹೈ ಜೋಷ್’ ಎಂದು ಬರೆದು ಟ್ವೀಟ್ ಮಾಡಿದ್ದಾರೆ.
ಮಾಲ್‍ಗೆ ಪ್ರವೇಶ ನೀಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಸಾರ್ವಜನಿಕರು ಬೆಂಗಳೂರಿಗೆ ಸ್ವಾಗತ ಎಂದು ಶುಭಕೋರಿದರು. ಅಲ್ಲದೇ ಭಾರತ್ ಮಾತಾ ಕೀ ಜೈ, ವಂದೇ ಮಾತರಂ ಘೋಷಣೆಗಳನ್ನು ಕೂಗಿದರು. ಆದಿತ್ಯ ಧಾರ್ ನಿರ್ದೇಶನದ ಉರಿ ದ ಸರ್ಜಿಕಲ್ ಸ್ಟ್ರೈಕ್ ಸಿನಿಮಾಗೆ ಜನರಿಂದ ಉತ್ತಮ ಪ್ರತಿಕ್ರಿಯೆ ಲಭಿಸಿದ್ದು, ಉಗ್ರರರನ್ನು ಹತ್ಯೆಗೈದ ಭಾರತೀಯ ಯೋಧರ ರೋಚಕ ಕಥೆಯನ್ನು ಸಿನಿಮಾವನ್ನಾಗಿ ರೂಪಿಸಲಾಗಿದೆ.
ಸಿನಿಮಾ ನೋಡಿ ಮತ್ತಷ್ಟು ಉಲ್ಲಾಸಗೊಂಡಿದ್ದ ಸಚಿವೆ ನಿರ್ಮಲಾ ಅವರು, ‘ವಾಟ್ ಎ ಪವರ್ ಪ್ಯಾಕ್ಡ್ ಮೂವಿ’ ಎಂದಿದ್ದಾರೆ. ಅಲ್ಲದೇ ಸಿನಿಮಾದಲ್ಲಿ ನಟನೆ ಮಾಡಿರುವ ವಿಕಿ ಕೌಶಲ್, ಯಾಮಿ ಗೌತಮ್, ಮೋಹಿತ್ ರೈನಾ, ಮತ್ತು ಪರೇಶ್ ರಾವಲ್ ಅವರು ಉತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದ್ದಾರೆ. ಅವರಿಗೆ ಧನ್ಯವಾದ ಎಂದು ತಿಳಿಸಿದ್ದಾರೆ. ಇದಕ್ಕು ಮುನ್ನ ಟ್ವೀಟ್ ಮಾಡಿದ್ದ ಸಚಿವರು, ಕೊನೆಗೂ ಸಿನಿಮಾ ನೋಡಲು ಸಮಯವನ್ನ ಪಡೆದಿದ್ದಾಗಿ ಬರೆದುಕೊಂಡಿದ್ದರು.
2016ರಲ್ಲಿ ಉರಿಯಲ್ಲಿ ನಡೆದ ಭಯೋತ್ಪಾದಕರ ದಾಳಿಯ ಪ್ರತಿಕವಾಗಿ ಭಾರತೀಯ ಸೈನ್ಯ ಪಾಕ್ ಆಕ್ರಮಿತ ಕಾಶ್ಮೀರ ನಸುಕಿನ ವೇಳೆ ನುಗ್ಗಿ ಸರ್ಜಿಕಲ್ ಸ್ಟ್ರೈಕ್ ಕೈಗೊಂಡು ಉಗ್ರರನ್ನು ಹೊಡೆದುರುಳಿಸಿತ್ತು. ಭಾರತೀಯ ಸೇನೆಗೆ ಗೌರವ ಸಲ್ಲಿಸುವ ಸಲುವಾಗಿ ನಿರ್ಮಾಣಗೊಂಡಿರುವ ಈ ಚಿತ್ರದಲ್ಲಿ ‘ಹೌ ಇಸ್ ದಿ ಜೋಷ್’ ಎಂದು ಕೇಳುವಾಗ ಪ್ರತಿಕ್ರಿಯೆಯಾಗಿ ‘ಹೈ ಸರ್’ ಎಂದು ಕೇಳುವುದೇ ರೋಮಾಂಚನವಾಗಿರುತ್ತದೆ.
Comments are closed.