
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆಂಬ ಕುತೂಹಲಕ್ಕೆ ಬಹುತೇಕ ತೆರೆಬೀಳುತ್ತಿದೆ. ನ್ಯೂಸ್18 ಕನ್ನಡಕ್ಕೆ ಸಿಕ್ಕ ಮಾಹಿತಿ ಪ್ರಕಾರ ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಸ್ವತಃ ದೇವೇಗೌಡರೇ ಈ ಮಾಹಿತಿಯನ್ನು ಬಿಜೆಪಿ ಸಂಸದ ಪ್ರತಾಪ್ ಸಿಂಹ ಬಳಿ ತಿಳಿಸಿದರೆನ್ನಲಾಗಿದೆ. ಒಂದೇ ವಿಮಾನದಲ್ಲಿ ಪ್ರಯಾಣ ಮಾಡುವ ವೇಳೆ ಪ್ರತಾಪ್ ಸಿಂಹ ಅವರು ದೇವೇಗೌಡರೊಂದಿಗೆ ಮಾತಿಗಿಳಿದು, ಲೋಕಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತೀರಾ ಎಂದು ಕೇಳಿದಾಗ ಗೌಡರು ಬೆಂಗಳೂರು ಉತ್ತರ ಕ್ಷೇತ್ರದ ಹೆಸರು ಹೇಳಿದ್ದಾರೆ.
ಅದಾದ ನಂತರ ಪ್ರತಾಪ್ ಸಿಂಹ ಅವರು ಕೂಡಲೇ ಮಾಜಿ ಮುಖ್ಯಮಂತ್ರಿ ಡಿವಿ ಸದಾನಂದಗೌಡರಿಗೆ ಮಾಹಿತಿ ರವಾನಿಸಿದ್ದಾರೆ. ಪ್ರತಾಪ್ ಸಿಂಹ ನೀಡಿದ ಮಾಹಿತಿ ಕೇಳಿ ಡಿವಿಎಸ್ ದಂಗಾಗಿದ್ದಾರಂತೆ. ಅದಕ್ಕೆ ಕಾರಣವೂ ಇದೆ. ಡಿವಿಎಸ್ ಅವರು ಬೆಂಗಳೂರು ಉತ್ತರ ಕ್ಷೇತ್ರದ ಹಾಲಿ ಸಂಸದರಾಗಿದ್ದಾರೆ. ಒಂದು ವೇಳೆ ದೇವೇಗೌಡರು ಬೆಂಗಳೂರು ಉತ್ತರಕ್ಕೆ ಕಾಲಿಟ್ಟರೆ ಜಯಮಾಲೆ ಅವರದೆಯೇ ಆಗಲಿದೆ. ಒಕ್ಕಲಿಗರ ಪ್ರಾಬಲ್ಯವಿರುವ ಈ ಕ್ಷೇತ್ರದಲ್ಲಿ ದೇವೇಗೌಡರಿಗೆ ಗೆಲುವು ಕಷ್ಟವೇನಲ್ಲ.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸುಮಾರು 20 ಲಕ್ಷ ಮತದಾರರಿದ್ದಾರೆ. ಇದರಲ್ಲಿ 7 ಲಕ್ಷ ಒಕ್ಕಲಿಗ ಮತಗಳಿವೆ. 7 ಲಕ್ಷ ಒಬಿಸಿ ಮತಗಳಿವೆ. ಡಿವಿಎಸ್ ಮಂಗಳೂರು ಸೀಮೆಯ ಒಕ್ಕಲಿಗರಾದರೂ ದೇವೇಗೌಡರಿಗೆ ಬಹುತೇಕ ಒಕ್ಕಲಿಗರ ಬೆಂಬಲ ಸಿಗಲಿರುವುದು ಸುಳ್ಳಲ್ಲ. ಹಾಗೆಯೇ, ಕಾಂಗ್ರೆಸ್ ಜೊತೆ ಮೈತ್ರಿ ಹೊಂದಿರುವ ಜೆಡಿಎಸ್ ಪಕ್ಷಕ್ಕೆ ಓಬಿಸಿ ಮತಗಳು ಸಿಗುವುದು ದುರ್ಲಭವೂ ಅಲ್ಲ. ಹೀಗಾಗಿ, ಡಿವಿ ಸದಾನಂದಗೌಡರು ಈಗ ರಾಜಕೀಯ ಭವಿಷ್ಯದ ಬಗ್ಗೆ ಚಿಂತಿತರಾಗುವ ಕಾಲ ಬಂದಿದೆ.
ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಉತ್ತರ ಬಿಟ್ಟರೆ ಡಿವಿಎಸ್ಗೆ ಹೆಚ್ಚೇನೂ ಆಯ್ಕೆಗಳಿಲ್ಲ. ಅನಂತಕುಮಾರ್ ನಿಧನದಿಂದ ತೆರವಾಗಿರುವ ಬೆಂಗಳೂರು ದಕ್ಷಿಣ ಕ್ಷೇತ್ರ ಮಾತ್ರ ಬಿಜೆಪಿ ಪಾಲಿಗೆ ಸೇಫ್ ಆಗಿದೆ. ಆ ಕ್ಷೇತ್ರಕ್ಕೆ ಪೈಪೋಟಿ ನಡೆಸುತ್ತಿರುವ ಬಿಜೆಪಿ ನಾಯಕರ ದೊಡ್ಡ ದಂಡೇ ಇದೆ. ಡಿವಿಎಸ್ ಅವರು ಉತ್ತರ ಬಿಟ್ಟು ದಕ್ಷಿಣ ಮುಖಿಯಾದರೆ ಮತ್ತೊಮ್ಮೆ ಸಂಸತ್ ಪ್ರವೇಶಿಸಲು ಸಾಧ್ಯವಾಗುತ್ತದೆ. ಇಲ್ಲವಾದರೆ ತಮ್ಮ ಮೂಲ ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ಗೆ ಸದಾನಂದಗೌಡರು ಪ್ರಯತ್ನಿಸಬೇಕಾಗುತ್ತದೆ.
ದೇವೇಗೌಡರು ಬೆಂಗಳೂರು ಉತ್ತರ ಕ್ಷೇತ್ರ ಆಯ್ಕೆ ಮಾಡಿಕೊಳ್ಳಲೂ ಒಂದು ಲಾಜಿಕ್ ಇದೆ. ಹಾಸನ ಮತ್ತು ಮಂಡ್ಯ ಜೆಡಿಎಸ್ನ ಭದ್ರಕೋಟೆಗಳಾಗಿವೆ. ಅಲ್ಲಿ ಜೆಡಿಎಸ್ನಿಂದ ಸಾಧಾರಣ ಅಭ್ಯರ್ಥಿ ಹಾಕಿದರೂ ಗೆಲುವು ಶತಃ ಸಿದ್ಧ. ಹೀಗಾಗಿ, ಅವೆರಡು ಬಿಟ್ಟು ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ತಾವು ಸ್ಪರ್ಧಿಸಿ ಗೆದ್ದರೆ ಜೆಡಿಎಸ್ಗೆ ಒಂದು ಹೆಚ್ಚುವರಿ ಕ್ಷೇತ್ರ ದಕ್ಕಿದಂತಾಗುತ್ತದೆ ಎಂಬುದು ಗೌಡರ ಲೆಕ್ಕಾಚಾರವಾಗಿರಲು ಸಾಧ್ಯ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ಎದುರಾದರೆ ಜೆಡಿಎಸ್ಗೆ ಒಂದೊಂದು ಲೋಕಸಭಾ ಕ್ಷೇತ್ರವೂ ಬಹಳ ಮುಖ್ಯವಾಗುತ್ತದೆ. ಹೀಗಾಗಿ, ಎಷ್ಟು ಸಾಧ್ಯವೋ ಅಷ್ಟು ಕ್ಷೇತ್ರಗಳನ್ನು ಗೆಲ್ಲುವ ಎಣಿಕೆಯಲ್ಲಿದ್ದಾರೆ ಗೌಡರು.
Comments are closed.