ರಾಷ್ಟ್ರೀಯ

4 ತೃತೀಯಲಿಂಗಿಗಳಿಂದ ಅಯ್ಯಪ್ಪಸ್ವಾಮಿ ದರ್ಶನ!

Pinterest LinkedIn Tumblr


ಶಬರಿಮಲೆ: ಎರಡು ತಿಂಗಳಿಂದ ವಿವಾದದ ಕೇಂದ್ರವಾಗಿರುವ ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಇಂದು ನಾಲ್ವರು ತೃತೀಯ ಲಿಂಗಿಗಳು ಪೂಜೆ ಸಲ್ಲಿಸಿದ್ದಾರೆ. ಈ ಮೊದಲು ಹಿಂದು ಕಾರ್ಯಕರ್ತರಿಂದ ತಡೆಯಲ್ಪಟ್ಟಿದ್ದ ಈ ನಾಲ್ವರು ಇಂದು ಪೊಲೀಸ್​ ಭದ್ರತೆಯಲ್ಲಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ಶಬರಿಮಲೆ ದೇಗುಲಕ್ಕೆ 10ರಿಂದ 50 ವರ್ಷದೊಳಗಿನ ಮಹಿಳೆಯರ ಪ್ರವೇಶಕ್ಕೆ ನಿಷೇಧ ಹೇರಲಾಗಿತ್ತು. ಆದರೆ, ಈ ಬಗ್ಗೆ ಸೆಪ್ಟೆಂಬರ್​ ತಿಂಗಳಲ್ಲಿ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್​ ನ್ಯಾ. ದೀಪಕ್​ ಮಿಶ್ರಾ ನೇತೃತ್ವದ ನ್ಯಾಯಪೀಠ ಎಲ್ಲ ವಯೋಮಾನದ ಮಹಿಳೆಯರಿಗೂ ಶಬರಿಮಲೆ ಪ್ರವೇಶಕ್ಕೆ ಅವಕಾಶ ನೀಡುವಂತೆ ಆದೇಶ ಹೊರಡಿಸಿತ್ತು. ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದ ಹಿಂದು ಕಾರ್ಯಕರ್ತರು ಮತ್ತು ಶಬರಿಮಲೆ ಭಕ್ತರ ಅರ್ಜಿಯನ್ನು ಜನವರಿಗೆ ಮುಂದೂಡಿರುವುದರಿಂದ ಸದ್ಯಕ್ಕೆ ಎಲ್ಲ ವಯೋಮಾನದವರಿಗೂ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ.

ಆದರೆ, ಹಿಂದು ಕಾರ್ಯಕರ್ಯರು ಶಬರಿಮಲೆ ಬೆಟ್ಟಕ್ಕೆ ಮಹಿಳೆಯರು ಪ್ರವೇಶಿಸದಂತೆ ತಡೆಯುತ್ತಿರುವ ಹಿನ್ನೆಲೆಯಲ್ಲಿ ಎಲ್ಲ ವಯೋಮಾನದ ಮಹಿಳೆಯರು ಬೆಟ್ಟ ಹತ್ತಲು ಸಾಧ್ಯವಾಗುತ್ತಿಲ್ಲ. ಇದೀಗ, ಇಂದು ನಾಲ್ವರು ತೃತೀಯ ಲಿಂಗಿಗಳು ಅಯ್ಯಪ್ಪಸ್ವಾಮಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ.

ಅನನ್ಯ, ತೃಪ್ತಿ, ರೆಂಜುಮೊಲ್ ಹಾಗೂ ಅವಂತಿಕಾ ಎಂಬ ತೃತೀಯ ಲಿಂಗಿಗಳು ಶಬರಿಮಲೆಯ ಸಂಪ್ರದಾಯದಂತೆ ಕಪ್ಪು ಸೀರೆ ಧರಿಸಿ, ಇರುಮುಡಿ ಹೊತ್ತು ಶಬರಿಮಲೆ ಬೆಟ್ಟ ಹತ್ತಿದ್ದಾರೆ. ದೇವರ ದರ್ಶನಕ್ಕೆ ಬಂದಿದ್ದ ಇವರಿಗೆ ನಿಲಕ್ಕಲ್​ನಿಂದ ಪಂಪಾನದಿಯವರೆಗೂ ಪೊಲೀಸರು ಭದ್ರತೆ ನೀಡಿದ್ದಾರೆ. ಪೊಲೀಸ್​ ಭದ್ರತೆಯಲ್ಲಿಯೇ ಈ ನಾಲ್ವರು ಅಯ್ಯಪ್ಪಸ್ವಾಮಿಗೆ ಪೂಜೆ ಸಲ್ಲಿಸಿದ್ದಾರೆ.

ಇದನ್ನೂ ಓದಿ: ರೈತರ ಬೆಳೆಸಾಲ ಮನ್ನಾ ಮಾಡುವವರೆಗೂ ಮೋದಿಗೆ ನಿದ್ದೆ ಮಾಡಲು ಬಿಡಲ್ಲ; ಗುಡುಗಿದ ರಾಹುಲ್​ ಗಾಂಧಿ

ಪೂಜೆ ಮಾಡುವ ಅವಕಾಶ ದೊರೆತಿರುವ ಬಗ್ಗೆ ಸಂತೋಷ ವ್ಯಕ್ತಪಡಿಸಿರುವ ನಾಲ್ವರು ತೃತೀಯ ಲಿಂಗಿಗಳು ಶಬರಿಮಲೆಗೆ ಬರುವುದು ತಮ್ಮ ಜೀವನದ ಗುರಿಯಾಗಿತ್ತು. ಆ ಅಭಿಲಾಷೆ ಈಡೇರಿದಂತಾಗಿದೆ ಎಂದು ಹೇಳಿಕೊಂಡಿದ್ದಾರೆ.

ಇದುವರೆಗೂ ಹನ್ನೆರಡಕ್ಕೂ ಹೆಚ್ಚು ಮಹಿಳೆಯರು ಅಯ್ಯಪ್ಪಸ್ವಾಮಿ ಬೆಟ್ಟ ಹತ್ತಲು ಪ್ರಯತ್ನಿಸಿದ್ದರು. ಆದರೆ, ಹಿಂದು ಕಾರ್ಯಕರ್ತರ ವಿರೋಧದ ಬಿಸಿ ಜೋರಾಗಿದ್ದರಿಂದ ವಿಫಲರಾಗಿ ಹಿಂತಿರುಗಿದ್ದರು. ಈ ತೃತೀಯ ಲಿಂಗಿಗಳು ಕೇರಳ ಹೈಕೋರ್ಟ್ ನಿಯೋಜಿತ ಡಿಜಿಪಿ ಎ. ಹೇಮಚಂದ್ರನ್ ಹಾಗೂ ಐಜಿಪಿ ಮನೋಜ್ ಅಬ್ರಾಹಂ ಅವರನ್ನು ಭೇಟಿ ಮಾಡಿದ ನಂತರ ದೇವಾಲಯಕ್ಕೆ ಬರಲು ಅವಕಾಶ ನೀಡಲಾಗಿದೆ.

Comments are closed.