
ಮುಜಾಫರ್ನಗರ: ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಹನುಮಂತ ದೇವರನ್ನು ದಲಿತ ಎಂದು ಕರೆದಿದ್ದರು. ಅದರಂತೆ ದೇಶದಲ್ಲಿರುವ ಎಲ್ಲಾ ಆಂಜನೇಯ ದೇವಾಲಯಗಳಿಗೆ ದಲಿತ ಅರ್ಚಕರನ್ನು ನೇಮಿಸಿ ಎಂದು ಭಾನುವಾರ ಭೀಮ್ ಆರ್ಮಿಯ ಮುಖ್ಯಸ್ಥ ಚಂದ್ರಶೇಖರ್ ಆಗ್ರಹಿಸಿದ್ದಾರೆ.
ಮಂಗಳವಾರ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ಮಾತನಾಡಿದ್ದ ಆದಿತ್ಯನಾಥ್, ಹನುಮಂತ ಬುಡಕಟ್ಟು ಸಮುದಾಯದಲ್ಲಿ ಬೆಳೆದವನು. ಎಲ್ಲ ಸೌಲಭ್ಯಗಳಿಂದ ವಂಚಿತನಾಗಿ ಕಾಡಿನಲ್ಲಿ ಅಲೆಯುತ್ತಿದ್ದವನು. ಅದೇ ಆಂಜನೇಯ ನಮ್ಮ ದೇಶದ ಎಲ್ಲ ಸಮುದಾಯವನ್ನೂ ಒಗ್ಗೂಡಿಸಲು ಸೇತುವೆಯಾದ. ರಾಮನ ಆದೇಶದಂತೆ ದಕ್ಷಿಣ, ಉತ್ತರ, ಪೂರ್ವ, ಪಶ್ಚಿಮ ಭಾಗದ ಜನರನ್ನು ಒಂದುಗೂಡಿಸಿದ ಹೆಗ್ಗಳಿಕೆ ಆಂಜನೇಯನಿಗೆ ಸೇರುತ್ತದೆ ಎಂದು ಹೇಳಿದ್ದರು.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಚಂದ್ರಶೇಖರ್, “ದೇಶದಲ್ಲಿರುವ ಎಲ್ಲಾ ಆಂಜನೇಯ ದೇವಸ್ಥಾನಗಳನ್ನು ದಲಿತರು ಸ್ವಾಧೀನಪಡಿಸಿಕೊಳ್ಳಬೇಕು ಮತ್ತು ದಲಿತರನ್ನು ಅರ್ಚಕರನ್ನಾಗಿ ನೇಮಿಸಬೇಕು” ಎಂದು ಹೇಳಿದರು. ಹನುಮಂತನನ್ನು ದಲಿತ ಎಂದು ಕರೆದಿದ್ದಕ್ಕೆ ಕ್ಷಮೆ ಯಾಚಿಸುವಂತೆ ರಾಜಸ್ಥಾನದ ಬಲಪಂಥೀಯ ಸಂಘಟನೆ ಯೋಗಿ ಆದಿತ್ಯನಾಥ್ಗೆ ನೋಟಿಸ್ ಕಳಿಸಿತ್ತು.
ರಾಜಸ್ಥಾನದ ದಲಿತರ ಮತಗಳನ್ನು ಪಡೆಯಲು ಆಂಜನೇಯ ಕೂಡ ದಲಿತ ಬುಡಕಟ್ಟು ಸಮುದಾಯಕ್ಕೆ ಸೇರಿದವನು ಎನ್ನುವ ಮೂಲಕ ಜಾತಿಯ ಹೆಸರು ಹೇಳಿ ಯೋಗಿ ಆದಿತ್ಯನಾಥ್ ದಲಿತರನ್ನು ತಮ್ಮತ್ತ ಸೆಳೆಯುವ ಪ್ರಯತ್ನ ಮಾಡಿದ್ದರು. ನಾವೆಲ್ಲ ಪೂಜಿಸುವ ದೇವರು ಹನುಮಾನ್ ಕೂಡ ದಲಿತ ಬುಡಕಟ್ಟು ವರ್ಗಕ್ಕೆ ಸೇರಿದವನು. ಅಲ್ವರ್ ಕ್ಷೇತ್ರದಿಂದ ಬಿಜೆಪಿಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಅಭ್ಯರ್ಥಿಗೆ ದಲಿತ ಸಮುದಾಯದವರು ಮತ ಚಲಾಯಿಸುವ ಮೂಲಕ ತಮ್ಮ ಸಮುದಾಯದ ಅಭ್ಯರ್ಥಿಗೆ ಗೆಲುವು ದೊರಕಿಸಿಕೊಡಬೇಕು ಎಂದು ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು.
ಕಳೆದ ವಾರ ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗದ ಮುಖ್ಯಸ್ಥ ನಂದಕುಮಾರ್ ಸಾಯಿ ಹನುಮಂತ ದೇವರನ್ನು ಬುಡಕಟ್ಟು ಸಮುದಾಯಕ್ಕೆ ಸೇರಿದವನು ಎಂದು ಹೇಳಿದ್ದರು.
Comments are closed.