ಕರ್ನಾಟಕ

ರೈತ ಮಹಿಳೆ ಕುರಿತು ಮುಖ್ಯಮಂತ್ರಿ ಹೇಳಿಕೆ; ತಿರುಗೇಟು ನೀಡಿದ ಲಕ್ಷ್ಮೀ ಹೆಬ್ಬಾಳ್ಕರ್​

Pinterest LinkedIn Tumblr


ಬೆಳಗಾವಿ: ಸಿಎಂ ಕುಮಾರಸ್ವಾಮಿ ರೈತ ಮಹಿಳೆ ಬಗ್ಗೆ ನೀಡಿರುವ ಹೇಳಿಕೆಗೆ ಕಾಂಗ್ರೆಸ್​​ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್​ ತಿರುಗೇಟು ನೀಡಿದ್ದಾರೆ. ಇಂದು ಬೆಳಗಾವಿಯಲ್ಲಿ ಮಾತನಾಡಿದ ಅವರು, ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ರೈತ ಮಹಿಳೆಯನ್ನೇ ಅವರ ಪಕ್ಷದ ಚಿಹ್ನೆಯನ್ನಾಗಿ ಇಟ್ಟುಕೊಂಡು ಈ ರೀತಿ ಹೇಳಿಕೆ ನೀಡಿರುವುದು ಎಷ್ಟರ ಮಟ್ಟಿಗೆ ಸರಿ. ಪಕ್ಷದ ಚಿಹ್ನೆ ದೇವರಿದ್ದ ಹಾಗೆ, ಆರಾಧಿಸುತ್ತೇವೆ. ಕುಮಾರಸ್ವಾಮಿ ರೈತ ಮಹಿಳೆ ಬಗ್ಗೆ ಈ ರೀತಿ ಅವಹೇಳಕಾರಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಂತರ, ಉದ್ವೇಗದಲ್ಲಿ ಸಿಎಂ ಮಾತನಾಡಿರಬೇಕು. ಈ ಬಗ್ಗೆ ಅವರು ಸ್ಪಷ್ಟನೆ ನೀಡಿದ್ದಾರೆ ಎಂದೂ ಕೂಡ ಹೇಳಿದರು.

ಕೆಲವು ದಿನಗಳ ಹಿಂದೆ ರೈತ ಹೋರಾಟಗಾರರು ಬೆಳಗಾವಿಯ ಸುವರ್ಣ ಸೌಧದ ಗೇಟಿನ ಬೀಗ ಜಡಿದು ಕಬ್ಬಿನ ಲಾರಿ ಒಳ ನುಗ್ಗಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದಕ್ಕೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದ ಸಿಎಂ ಕುಮಾರಸ್ವಾಮಿ, ಅವರು ರೈತರೆಲ್ಲ ಗೂಂಡಾಗಳು ಎಂದು ಅವಹೇಳ ಮಾಡಿದ್ದರು. ಜೊತೆಗೆ ತಮ್ಮನ್ನು ಪ್ರಶ್ನಿಸಿದ್ದ ರೈತ ಮಹಿಳೆ ಜಯಶ್ರೀ ಬಗ್ಗೆ 4 ವರ್ಷಗಳಿಂದ ನೀನು ಎಲ್ಲಿ ಮಲಗಿದ್ದೆಯಮ್ಮ? ಎಂದು ಸಿಎಂ ಹೇಳಿಕೆ ನೀಡಿದ್ದು, ರೈತ ಸಮುದಾಯದ ಆಕ್ರೋಶಕ್ಕೆ ಕಾರಣವಾಗಿತ್ತು.

ನಂತರ ಬಿಜೆಪಿ ನಾಯಕರು ಕೂಡ ಸಿಎಂ ಹೇಳಿಕೆ ಖಂಡಿಸಿ ಸಮ್ಮಿಶ್ರ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಧುಮುಕಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್​.ಯಡಿಯೂರಪ್ಪ ಕೂಡ ಸಿಎಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ರಾಜ್ಯಾದ್ಯಂತ ಪ್ರತಿಭಟನೆಗಳು ನಡೆದಿದ್ದವು.

ಸಿಎಂ ಕುಮಾರಸ್ವಾಮಿ ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿದ್ದರು. ನಾನು ರೈತರ ವಿರುದ್ಧ ಯಾವುದೇ ತಪ್ಪು ಮಾಡಿಲ್ಲ. ನನ್ನ ಮಾತನ್ನು ತಪ್ಪಾಗಿ ಅರ್ಥೈಸಲಾಗಿದೆ. ರೈತ ಮಹಿಳೆ ಬಗ್ಗೆ ನಾನು ಕೆಟ್ಟದಾಗಿ ಮಾತಾಡಿಲ್ಲ. ನಮ್ಮ ಆಡುಭಾಷೆಯಲ್ಲಿ ಮಾತನಾಡಿದ್ದೇನೆ ಅಷ್ಟೆ. ಯಾರ ಮನಸ್ಸನ್ನು ನೋವು ಮಾಡುವ ಉದ್ದೇಶ ನನ್ನದಲ್ಲ ಎಂದು ಹೇಳಿದ್ದರು.

Comments are closed.