
ಶ್ರೀನಗರ: ಫೇಸ್ಬುಕ್ ಮೂಲಕ ಯುವಜನರನ್ನು ಭಯೋತ್ಪಾದನೆಯೆಡೆಗೆ ಸೆಳೆಯುತ್ತಿದ್ದ ಮಹಿಳೆಯೊಬ್ಬಳನ್ನು ಭದ್ರತಾ ಸಂಸ್ಥೆಗಳು ಬಂಧಿಸಿವೆ. ಶಾಜಿಯಾ ಎಂದು ಗುರುತಿಸಲಾಗಿರುವ ಬಂಧಿತ ಮಹಿಳೆಯು ಉತ್ತರ ಕಾಶ್ಮೀರದ ಬಂಡೀಪೋರ್ನ ಸಂಬಲ್ ಪ್ರದೇಶದವಳೆನ್ನಲಾಗಿದೆ. ಈಕೆಯ ಹಿಂದೆ ಜೈಷೆ ಮೊಹಮ್ಮದ್ ಮೊದಲಾದ ಉಗ್ರ ಸಂಘಟನೆಯ ನೆಟ್ವರ್ಕ್ ಕೆಲಸ ಮಾಡುತ್ತಿರುವ ಶಂಕೆ ಇದೆ. ಈ ಮಹಿಳೆಯು ಕಣಿವೆ ರಾಜ್ಯದ ಯುವಕರನ್ನು ಜಿಹಾದ್ ಕಡೆಗೆ ಸೆಳೆದು, ಯುದ್ಧ ಸಾಮಗ್ರಿಗಳನ್ನು ರವಾನಿಸುತ್ತಿದ್ದಳು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧಿತ ಶಾಜಿಯಾಳಿಂದ ಪೊಲೀಸರು ಮದ್ದು ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ. ವಿಚಾರಣೆ ವೇಳೆ ಈಕೆ ಕೆಲ ಶಸ್ತ್ರಾಸ್ತ್ರಗಳನ್ನ ಇಬ್ಬರಿಗೆ ಸರಬರಾಜು ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಈಕೆಯಿಂದ ಸ್ಫೋಟಕ ಪಡೆದ ಇಬ್ಬರಲ್ಲಿ ಒಬ್ಬಾತನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸ್ ಇನ್ಫಾರ್ಮರ್ ಎಂಬ ನಾಟಕ:
ಪೊಲೀಸ್ ಇನ್ಫಾರ್ಮರ್ ಹೆಸರಿನಲ್ಲಿ ಪೊಲೀಸರಿಗೇ ಮಣ್ಣೆರಚಿ ಉಗ್ರರಿಗೆ ಸಹಾಯ ಮಾಡುವ ದೊಡ್ಡ ನೆಟ್ವರ್ಕ್ ಕೂಡ ಈ ಪ್ರಕರಣದಿಂದ ಅನಾವರಣಗೊಂಡಿದೆ. 30ರ ಆಸುಪಾಸಿನ ವಯಸ್ಸಿನ ಶಜಿಯಾ ವಿವಾಹಿತೆಯಾಗಿದ್ದು, ಈಕೆಗೆ ಇಬ್ಬರು ಮಕ್ಕಳಿದ್ದಾರೆನ್ನಲಾಗಿದೆ. ಈಕೆಯ ಫೇಸ್ಬುಕ್ ಚಟುವಟಿಕೆ ಬಗ್ಗೆ ಅನುಮಾನಗೊಂಡಿದ್ದ ಗುಪ್ತಚರ ಸಂಸ್ಥೆಗಳು ಹಲವು ದಿನಗಳಿಂದ ನಿಗಾ ಇಟ್ಟಿದ್ದವು. ಈಕೆ ಪೊಲೀಸ್ ಇನ್ಫಾರ್ಮರ್ ಎಂದು ಹೇಳಿ ವಿಡಿಯೋವೊಂದು ಕೆಲ ತಿಂಗಳ ಹಿಂದೆ ಫೇಸ್ಬುಕ್ನಲ್ಲಿ ಹರಿದಾಡತೊಡಗಿತ್ತು. ಹಾಗೆಯೇ ಇಬ್ಬರು ಯುವಕರು ಉಗ್ರಗಾಮಿ ಚಟುವಟಿಕೆ ನಡೆಸುತ್ತಿದ್ದಾರೆಂದು ಪೊಲೀಸರಿಗೆ ಈಕೆಯೇ ಖುದ್ದಾಗಿ ಮಾಹಿತಿ ಕೊಟ್ಟಿದ್ದೂ, ಆ ಇಬ್ಬರನ್ನು ಪೊಲೀಸರು ಬಂಧಿಸಿ ಬುದ್ಧಿ ಹೇಳಿ ಬಿಡುಗಡೆಗೊಳಿಸದ ಘಟನೆಯೂ ನಡೆಯಿತು. ತಾನು ಪೊಲೀಸ್ ಇನ್ಫಾರ್ಮರ್ ಎಂದು ಬಿಂಬಿಸಿಕೊಳ್ಳಲು ಈಕೆ ಮಾಡಿದ ನಾಟಕ ಅದಾಗಿತ್ತು. ಪೊಲೀಸ್ ಮತ್ತು ಭದ್ರತಾ ಸಂಸ್ಥೆಗಳಿಂದ ಯಾವುದೇ ಅನುಮಾನ ಬಾರದಂತೆ ಮಾಹಿತಿ ಪಡೆದು ಅದನ್ನು ಉಗ್ರ ಸಂಘಟನೆಗಳಿಗೆ ರವಾನಿಸುವ ಕೆಲಸ ಈಕೆಯದ್ದಾಗಿತ್ತು. ತಾನು ಉಗ್ರರನ್ನು ಬಂಧಿಸಲು ನೆರವಾಗುವುದಾಗಿ ಹೇಳಿ ಪೊಲೀಸ್ ಅಧಿಕಾರಿಗಳಿಂದ ತನಗೆ ಬೇಕಾದ ಕೆಲಸಗಳನ್ನ ಈಕೆ ಮಾಡಿಸಿಕೊಳ್ಳುತ್ತಿದ್ದಳೆನ್ನಲಾಗಿದೆ. ಉಗ್ರ ಸಂಘಟನೆಗಳು ಇಷ್ಟೆಲ್ಲಾ ಷಡ್ಯಂತ್ರ ರಚಿಸಿ ಈಕೆಯನ್ನು ಮುಂದೆ ಬಿಟ್ಟಿದ್ದರು.
ಈ ಬಗ್ಗೆ ಅನುಮಾನವಿದ್ದ ಭದ್ರತಾ ಸಂಸ್ಥೆಗಳು ಶಾಜಿಯಾಳ ಮೇಲೆ ಒಂದು ಕಣ್ಣಿಟ್ಟಿದ್ದವು. ಈಕೆಯ ಫೇಸ್ಬುಕ್ ಪ್ರೊಫೈಲ್ ಮೇಲೆ ನಿಗಾ ಇಟ್ಟಾಗ ಈಕೆಯ ಚಟುವಟಿಕೆಯ ಸುಳಿವು ಸಿಕ್ಕಿದೆ. ಈಕೆ ಉಗ್ರ ಚಟುವಟಿಕೆಗಳಿಗೆ ಪೂರಕವಾಗಿ ಕೆಲಸ ಮಾಡುತ್ತಿರುವುದು ಕಂಡುಬಂದ ನಂತರ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆನ್ನಲಾಗಿದೆ.
ಕಾಶ್ಮೀರದಲ್ಲಿ ಒಂದು ವಾರದ ಹಿಂದೆ ಇದೇ ರೀತಿ ಉಗ್ರಗಾಮಿ ಚಟುವಟಿಕೆ ನಡೆಸುತ್ತಿದ್ದ ಮತ್ತೊಬ್ಬ ಮಹಿಳೆಯ ಬಂಧನವಾಗಿದ್ದನ್ನ ಇಲ್ಲಿ ಗಮನಿಸಬೇಕು. 28 ವರ್ಷದ ಆಶಿಯಾ ಜಾನ್ ಎಂಬಾಕೆಯು ಶ್ರೀನಗರದ ಲವಾಯ್ಪೋರ್ನಲ್ಲಿ 20 ಗ್ರೆನೇಡ್ಗಳನ್ನು ಸಾಗಿಸುವಾಗ ಸಿಕ್ಕಿಬಿದ್ದಿದ್ದಳು. ಈ ಘಟನೆಯಲ್ಲಿ ಆಕೆಯ ಜೊತೆ ಆಕೆಯ ಇಬ್ಬರು ಸೋದರರನ್ನೂ ಪೊಲೀಸರು ಬಂಧಿಸಿದ್ದರು.
ಕಾಶ್ಮೀರದಲ್ಲಿ ಶಸ್ತ್ರಾಸ್ತ್ರ ಸಾಗಣೆ ಮತ್ತು ಸರಬರಾಜು ಸೇರಿದಂತೆ ಭಯೋತ್ಪಾದನೆ ಕೃತ್ಯಕ್ಕೆ ಮಹಿಳೆಯರನ್ನು ಬಳಸಿಕೊಳ್ಳಲಾಗುತ್ತಿದೆ ಎಂಬ ಆತಂಕಕಾರಿ ಮಾಹಿತಿಯನ್ನು ಗುಪ್ತಚರ ಸಂಸ್ಥೆಗಳು ಈಗಾಗಲೇ ಬಹಿರಂಗಪಡಿಸಿ ಸರಕಾರವನ್ನು ಎಚ್ಚರಿಸಿದ್ದವು. ಈ ಎಚ್ಚರಿಕೆಗೆ ಪೂರಕವಾಗಿ ಈ ಎರಡು ಘಟನೆಗಳು ಬೆಳಕಿಗೆ ಬಂದಿದ್ದು, ಕಾಶ್ಮೀರದಲ್ಲಿ ಉಗ್ರ ಚಟುವಟಿಕೆಯನ್ನು ನಿಗ್ರಹಿಸುವ ಭದ್ರತಾ ಸಂಸ್ಥೆಗಳ ಕಾರ್ಯವು ಅಂದುಕೊಂಡಷ್ಟು ಸುಲಭವಾಗಿಲ್ಲ ಎಂಬುದು ಸ್ಪಷ್ಟವಾಗಿದೆ.
Comments are closed.