ಮನೋರಂಜನೆ

ಚಿತ್ರೀಕರಣ ಸಂದರ್ಭದಲ್ಲಿ ತನಗೆ ಕಿರುಕುಳ, ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿದ್ದ ನಟಿ ಸಂಜನಾರಿಂದ ಬಹಿರಂಗ ಕ್ಷಮೆಯಾಚನೆ

Pinterest LinkedIn Tumblr

 

ಗಂಡ ಹೆಂಡತಿ ನಿರ್ದೇಶಕ ರವಿ ಶ್ರೀವತ್ಸಾ ಅವರು ತನಗೆ ಚಿತ್ರೀಕರಣ ಸಂದರ್ಭದಲ್ಲಿ ಸಾಕಷ್ಟು ಕಿರುಕುಳ, ಬೆದರಿಕೆ ಒಡ್ಡಿದ್ದಾರೆ ಎಂದು ಆರೋಪಿಸಿ ಹೊಸ ವಿವಾದಕ್ಕೆ ಕಾರಣರಾಗಿದ್ದ ನಟಿ ಸಂಜನಾ, ಇದೀಗ ಬಹಿರಂಗ ಕ್ಷಮೆಯಾಚಿಸುವ ಮೂಲಕ ವಿವಾದಕ್ಕೆ ಪರದೆ ಎಳೆದಿದ್ದಾರೆ.

ನಿರ್ದೇಶಕರ ಸಂಘದ ಅಧ್ಯಕ್ಷ ಹಾಗೂ ಗೀತ ರಚನೆಕಾರ ನಾಗೇಂದ್ರ ಪ್ರಸಾದ್ ಅವರ ಜತೆಗಿನ ವೀಡಿಯೋವೊಂದನ್ನು ಮಾಧ್ಯಮಗಳಿಗೆ ಕಳುಹಿಸಿರುವ ಸಂಜನಾ, ವೀಡಿಯೋದಲ್ಲಿ ಕ್ಷಮೆ ಕೋರಿದ್ದಾರೆ. ತನ್ನ ಮಾತುಗಳಿಂದ ಅವರಿಗೆ ತೊಂದರೆಯಾಗಿದ್ದರೆ, ನೋವಾಗಿದ್ದರೆ ಕ್ಷಮೆ ಇರಲಿ ಎಂದಿದ್ದಾರೆ.

“ನನ್ನ ಅನುಭವದಲ್ಲಿ ಪ್ರತಿಯೊಂದನ್ನೂ ಸತ್ಯವನ್ನೇ ಹೇಳಿಕೊಂಡಿದ್ದೇನೆ. ಈ ಅನುಭವ ಆದಾಗ ನನಗೆ ತುಂಬಾ ಚಿಕ್ಕ ವಯಸ್ಸು. ನನಗೆ ಆಗ ಮಾತನಾಡಲು ಧೈರ್ಯ ಇರಲಿಲ್ಲ. ಈಗ ಮಿ ಟೂ ಅಭಿಯಾನ ಬಂದಾಗ ನನ್ನ ಮನಸ್ಸಿನ ನೋವನ್ನು ಹೇಳಿಕೊಳ್ಳಲು ಮುಂದೆ ಬಂದೆ. ಗಂಡ ಹೆಂಡತಿ ಚಿತ್ರದಲ್ಲಿ ನಡೆದದ್ದೆಲ್ಲ ನಿಜ. ಯಾರ ಮನಸ್ಸಿಗೂ ನೋವು ಮಾಡಬೇಕು ಎಂಬ ಉದ್ದೇಶದಿಂದ ನಾನು ಆ ರೀತಿ ಹೇಳಿಲ್ಲ. ನನಗಾದ ನೋವನ್ನು ವ್ಯಕ್ತಪಡಿಸಿದ್ದೆ. ಅಂಬರೀಶ್, ರಾಕ್‌ಲೈನ್ ವೆಂಕಟೇಶ್, ದೊಡ್ಡಣ್ಣ ಅವರ ಮಾತು ಕೇಳಿ ನಾನು ಈ ನಿರ್ಧಾರಕ್ಕೆ ಬಂದಿದ್ದು ಕ್ಷಮೆ ಯಾಚಿಸುತ್ತಿದ್ದೇನೆ” ಎಂದಿದ್ದಾರೆ.

ಸಂಜನಾ ಮಾಡಿದ್ದ ಆರೋಪಗಳನ್ನು ತಳ್ಳಿಹಾಕಿದ್ದ ರವಿ ಶ್ರೀವತ್ಸ, ತಾನು ಕಾನೂನು ಹೋರಾಟ ಮಾಡುವುದಾಗಿ ತಿಳಿಸಿದ್ದರು. ಇದೀಗ ಸಂಜನಾ ಕ್ಷಮೆ ಕೋರುವ ಮೂಲಕ ವಿವಾದ ತಣ್ಣಗಾಗಿದೆ. ಗಂಡ ಹೆಂಡತಿ ಚಿತ್ರೀಕರಣದಲ್ಲಿ ತನಗೆ ಕಿರುಕುಳ ನೀಡಿದ್ದರು. ಒಂದೇ ಒಂದು ಕಿಸ್ಸಿಂಗ್ ಸೀನ್ ಎಂದು ಹೇಳಿ ಸಾಕಷ್ಟು ಸಲ ಅದನ್ನೇ ಮಾಡಿಸಿದರು ಎಂಬ ಆರೋಪ ಮಾಡಿದ್ದರು.

ಮಾಡಲ್ಲ ಎಂದರೆ, “ಏನೆಂದುಕೊಂಡಿದ್ದೀರಾ? ನಿರ್ದೇಶಕರು ಎಂದರೆ ಗುರುಗಳಿದ್ದಂತೆ. ಗುರುಗಳಿಲ್ಲದೆ ನೀವು ಹೆಂಗೆ ಕಲಿತುಕೊಂಡು ಬಿಡ್ತೀರಾ? ನಾಳೆ ಬೆಳಗ್ಗೆ ನೀನು ದೊಡ್ಡ ಸ್ಟಾರ್ ಆಗ್ತೀಯ. ಒಂದ್ ಸೆಕ್ಸಿ ಸೀನ್ ಮಾಡಿದರೆ ಏನಾಗಲ್ಲ ಮಾಡು. ಹಾಗೆ ಹೀಗೆ ಎಂದು ಹೆದರಿಸಲು ಆರಂಭಿಸಿದರು. ಆ ರೀತಿಯ ಸೀನ್ ಬೇಡ ಎಂದು ನಿರ್ಮಾಪಕರಿಗೆ ಹೇಳಿದರೆ, ಮಾಡ್ಲೇ ಬೇಕಮ್ಮಾ, ನಿನಗಾಗಿ, ನಮಗಾಗಿ ಮಾಡ್ತಿಲ್ಲ. ಸಿನಿಮಾಗಾಗಿ ಮಾಡ್ತಿದ್ದೀರಾ, ಮಾಡಿ. ಸಿನಿಮಾ ಗೆಲ್ಲೋದು ಹೇಗೆ? ಎನ್ನುತ್ತಿದ್ದರು. ಒಟ್ಟಾರೆ ಭಯದ ವಾತಾವರಣದಲ್ಲೇ ಕೆಲಸ ಮಾಡುವಂತಾಯಿತು. ಯಾಕಾದರೂ ಈ ಸಿನಿಮಾ ಒಪ್ಪಿಕೊಂಡೆನೋ ಅನ್ನಿಸಿತ್ತು” ಎಂಬ ಆರೋಪಗಳನ್ನು ಮಾಡಿದ್ದರು.

Comments are closed.