ರಾಷ್ಟ್ರೀಯ

ತಾವು ಸರಳ ವ್ಯಕ್ತಿ, ಆಕೆ ದೆಹಲಿ ಮಾಡರ್ನ್ ಮಹಿಳೆ, ನಮ್ಮದು ಸರಿಹೊಂದದ ಜೋಡಿ: ಮದುವೆಯಾಗಿ 6 ತಿಂಗಳಿಗೆ ವಿಚ್ಛೇಧನ ಅರ್ಜಿ ಸಲ್ಲಿಸಿದ ಲಾಲು ಪುತ್ರ

Pinterest LinkedIn Tumblr


ನವದೆಹಲಿ: ಪತ್ನಿ ಐಶ್ವರ್ಯಾ ರೈ ರಿಂದ ವಿವಾಹ ವಿಚ್ಛೇದನ ಅರ್ಜಿ ಸಲ್ಲಿಸಿರುವ ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ಯಾದವ್ “ತಾವು ಸರಳ ವ್ಯಕ್ತಿ, ಆದರೆ ಆಕೆ ದೆಹಲಿ ಮಾಡರ್ನ್ ಮಹಿಳೆ ನಮ್ಮಿಬ್ಬರದು ಸರಿಹೊಂದದ ಜೋಡಿ ಎಂದು ತೇಜ್ ಪ್ರತಾಪ್ ತಿಳಿಸಿದ್ದಾರೆ.

ಬೋಧಗಯಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ತೇಜ್ ಪ್ರತಾಪ್ ಯಾದವ್ ” ನನ್ನ ಪೋಷಕರಿಗೆ ನಾನು ಈ ಸಂದರ್ಭದಲ್ಲಿ ಮದುವೆ ಬೇಡ ಎಂದು ಹೇಳಿದ್ದೆ ಆದರೆ ಯಾರು ನನ್ನ ಮಾತು ಕೇಳಲಿಲ್ಲ. ನಾನು ಸರಳ ಹವ್ಯಾಸಗಳನ್ನು ಹೊಂದಿರುವ ಸಿಂಪಲ್ ವ್ಯಕ್ತಿಯಾಗಿದ್ದರೆ, ಆಕೆ ಮಾರ್ಡನ್ ಮಹಿಳೆ ದೆಹಲಿಯಲ್ಲಿ ಅಧ್ಯಯನ ಮಾಡಿ ಮೆಟ್ರೋಪಾಲಿಟನ್ ಜೀವನವನ್ನು ನಡೆಸುವಂತವಳು ಆದ್ದರಿಂದ ನಮ್ಮಿಬ್ಬರದು ಸರಿಹೊಂದದ ಜೋಡಿ” ಎಂದು ತೇಜ್ ಪ್ರತಾಪ್ ತಿಳಿಸಿದ್ದಾರೆ.

ಇದಕ್ಕೂ ಮೊದಲು ತೇಜ್ ಪ್ರತಾಪ್ ಮಾಧ್ಯಮಗಳ ಜೊತೆ ಮಾತನಾಡುತ್ತಾ “ನಾನು ಮನವಿಯೊಂದನ್ನು ಸಲ್ಲಿಸಿರುವುದು ನಿಜ ಘುತ್-ಘುತ್ ಕೆ ಜೀನ್ ಸೆ ತೋ ಕೊಯಿ ಫೈಯೆದಾ ಹೈ ನಹಿ (ನಿರ್ಭಂದಿತ ಜೀವನವನ್ನು ನಡೆಸುವುದರಲ್ಲಿ ಯಾವುದೇ ಅರ್ಥವಿಲ್ಲ).”ಎಂದು ಹೇಳಿದ್ದರು.

ಆರ್ಜೆಡಿ ಮುಖಂಡ ಲಾಲು ಪ್ರಸಾದ್ ಯಾದವ್ ಮತ್ತು ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ ಅವರ ಮಗ ತೇಜ್ ಪ್ರತಾಪ್ ಅವರು ಈ ವರ್ಷದ ಮೇ 12 ರಂದು ಪಾಟ್ನಾದಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಹಿರಿಯ ಆರ್ಜೆಡಿ ನಾಯಕ ಚಂದ್ರಿಕಾ ರೈ ಅವರ ಪುತ್ರಿ ಐಶ್ವರ್ಯಾ ರೈ ಅವರನ್ನು ಮದುವೆಯಾಗಿದ್ದರು.

ಮದುವೆಯಾದ ಆರು ತಿಂಗಳಲ್ಲೇ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿರುವ ಆರ್​ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್​ ಯಾದವ್​ ಅವರ ಹಿರಿಯ ಮಗ ತೇಜ್​ ಪ್ರತಾಪ್​ ಯಾದವ್​, ‘ನಾನು ಅವಳ ಜೊತೆ ಬದುಕಲು ಸಾಧ್ಯವಿಲ್ಲ’ ಎಂದು ಶನಿವಾರ ತಿಳಿಸಿದ್ದಾರೆ.

ತೇಜ್​ ಪ್ರತಾಪ್​ ತನ್ನ ಹೆಂಡತಿ ಐಶ್ವರ್ಯ ಅವರಿಂದ ವಿಚ್ಚೇದನ ಕೋರಿ ಶುಕ್ರವಾರ ಪಾಟ್ನಾದ ಸಿವಿಲ್ ನ್ಯಾಯಾಲದಲ್ಲಿ ವಿಚ್ಚೇದನ ಅರ್ಜಿ ಸಲ್ಲಿಸಿದ್ದರು.ಇಂದು ಅವರ ತಂದೆ ಲಾಲೂ ಪ್ರಸಾದ್ ಯಾದವ್​ರನ್ನು ಭೇಟಿ ಮಾಡಲು ಜಾರ್ಖಂಡ್​ನ ರಾಂಚಿಗೆ ಹೊರಟಿರುವ ಅವರು, ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ‘ಹೌದು, ನಾನು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ನನಗೆ ಅವಳ ಜೊತೆ ಬದುಕಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.

ತೇಜ್​ ಪ್ರತಾಪ್​ ಆರು ತಿಂಗಳ ಹಿಂದೆಯಷ್ಟೇ ಬಿಹಾರದ ಮಾಜಿ ಸಚಿವರ ಮಗಳು ಐಶ್ವರ್ಯಾ ರೈ ಅವರನ್ನು ಅದ್ದೂರಿಯಾಗಿ ವಿವಾಹವಾಗಿದ್ದರು. ಈ ವಿಷಯ ತಿಳಿಯುತ್ತಿದ್ದಂತೆ ಐಶ್ವರ್ಯಾ ರೈ ಮತ್ತು ಅವರ ಪೋಷಕರು ತೇಜ್ ಪ್ರತಾಪ್ ಯಾದವ್​​ರ ತಾಯಿ ರಾಬ್ರಿ ದೇವಿಯನ್ನು ಅವರ ನಿವಾಸದಲ್ಲಿ ಭೇಟಿಯಾಗಲು ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೆಲ ದಿನಗಳ ಹಿಂದೆಯೇ ತೇಜ್ ಪ್ರತಾಪ್ ವಿಚ್ಚೇದನ ಅರ್ಜಿ ಸಲ್ಲಿಸಿದ್ದರು. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ನಿನ್ನೆ ಮತ್ತೆ ಹೊಸದಾಗಿ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಆದಾಗ್ಯೂ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ತೇಜ್ ಪ್ರತಾಪ್ ಯಾದವ್ ಕುಟುಂಬಸ್ಥರು ನಿರಾಕರಿಸಿದ್ದಾರೆ.

ಈ ಬಗ್ಗೆ ತೇಜ್ ಪ್ರತಾಪ್ ಯಾದವ್ ಅವರ ವಕೀಲ ಯಶವಂತ್ ಕುಮಾರ್ ಶರ್ಮಾ ಮಾತನಾಡಿದ್ದು, ಇಬ್ಬರ ನಡುವೆ ಸಾಂಸರಿಕ ಜೀವನ ಚೆನ್ನಾಗಿರಲಿಲ್ಲ ಎಂದು ದೃಢಪಡಿಸಿದ್ದಾರೆ. ಜೊತೆಗೆ ತೇಜ್ ಪ್ರತಾಪ್ ಯಾದವ್ ಅವರ ಪರವಾಗಿ ಹಿಂದೂ ಮದುವೆ ಕಾಯ್ದೆಯಡಿಯಲ್ಲಿ ಅರ್ಜಿ ಸಲ್ಲಿಸಲಾಗಿದೆ. ಇದನ್ನು ಬಿಟ್ಟು ಈ ಸಂದರ್ಭದಲ್ಲಿ ಬೇರೆ ಯಾವುದನ್ನೂ ಹೇಳಲಾರೆ ಎಂದು ತಿಳಿಸಿದ್ದಾರೆ. ಈ ಸಂಬಂಧ ಪಾಟ್ನಾದ ಸಿವಿಲ್​ ನ್ಯಾಯಾಲಯ ನವೆಂಬರ್​ 19 ಕ್ಕೆ ಅರ್ಜಿ ವಿಚಾರಣೆ ನಿಗದಿಪಡಿಸಿದೆ.

ಬಹುಕೋಟಿ ಮೇವು ಹಗರಣದಲ್ಲಿ ಲಾಲೂ ಪ್ರಸಾದ್ ಯಾದವ್ ರಾಂಚಿಯ ಜೈಲಿನಲ್ಲಿದ್ದಾರೆ. ತೇಜ್ ಪ್ರತಾಪ್ ಹೆಂಡತಿ ಐಶ್ವರ್ಯ ತಂದೆ ಕೂಡಾ ಹಾಲಿ ಆರ್ ಜೆಡಿ ಶಾಸಕರಾಗಿದ್ದಾರೆ. ಮೇ ತಿಂಗಳಲ್ಲಿ ನಡೆದ ಅದ್ದೂರಿ ವಿವಾಹ ಸಮಾರಂಭದಲ್ಲಿ ಅನೇಕ ಗಣ್ಯರು ಪಾಲ್ಗೊಂಡಿದ್ದರು.

ತೇಜ್ ಪ್ರತಾಪ್ ವೈಶಾಲಿ ಜಿಲ್ಲೆಯ ಮಾನ್ಹಾ ಕ್ಷೇತ್ರದ ಶಾಸಕರಾಗಿದ್ದು, ಮಹಾಮೈತ್ರಿ ಸರ್ಕಾರದಲ್ಲಿ ತೇಜ್ ಪ್ರತಾಪ್ ಆರೋಗ್ಯ ಸಚಿವರಾಗಿದ್ದರು. ಲಾಲೂ ಪ್ರಸಾದ್ ಯಾದವ್ ಅನುಪಸ್ಥಿತಿಯಲ್ಲಿ ಪಕ್ಷ ಮುನ್ನಡೆಸುತ್ತಿರುವ ತೇಜಸ್ವಿ ಯಾದವ್ ಜೊತೆಗೆ ತೇಜ್ ಪ್ರತಾಪ್ ಉತ್ತಮ ಸಂಬಂಧ ಹೊಂದಿಲ್ಲ ಎಂಬುದು ತಿಳಿದುಬಂದಿದೆ.

Comments are closed.