ಜಗತ್ತಿನಾದ್ಯಂತ ಮಲ್ಬರಿಯನ್ನು ತಿನ್ನುವವರ ಸಂಖ್ಯೆ ಅಧಿಕವಾಗಿದೆ. ನಮ್ಮ ಆಡುಭಾಷೆಯಲ್ಲಿ ಹಿಪ್ಪುನೇರಳೆ ಹಣ್ಣು ಎಂದು ಕರೆಯುವ ಮಲ್ಬರಿ ಹಣ್ಣು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಒಮ್ಮೆ ತಿಂದರೆ ಮತ್ತೆಮತ್ತೆ ತಿನ್ನಬೇಕೆಂಬ ರುಚಿಯುಳ್ಳ ಹಿಪ್ಪುನೇರಳೆಯಲ್ಲಿ ಬಹಳಷ್ಟು ಔಷಧಿ ಗುಣಗಳಿವೆ. ’ಮಾರುಸ್ ಆಲ್ಫಾ’ ವೃಕ್ಷಕ್ಕೆ ಬಿಡುವ ಈ ಹಣ್ಣುಗಳು ಮತ್ತು ವೃಕ್ಷ ಸಹ ಅಧಿಕ ಪ್ರಮಾಣದಲ್ಲಿ ಪೋಷಕಾಂಶಗಳನ್ನು ಹೊಂದಿದೆ.
ರಕ್ತವನ್ನು ಸರಬರಾಜು ಮಾಡುವ ಧಮನಿಗಳಲ್ಲಿ ಏರ್ಪಡುವ ಅಡ್ಡಿಯನ್ನು ಕಡಿಮೆ ಮಾಡುವಲ್ಲಿ ಮಲ್ಬರಿ ಸೊಪ್ಪಿನ ರಸ ಸಹಕಾರಿ. ವಯಸ್ಸನ್ನು ಪ್ರಭಾವಿಸುವಲ್ಲಿ, ನಿತ್ಯ ಉಲ್ಲಾಸವಾಗಿ ಇರಲು ಈ ಹಣ್ಣುಗಳು ಸಹಕರಿಸುತ್ತವೆ. ಇದಕ್ಕೆ ಕಾರಣ ಇವುಗಳಲ್ಲಿ ಇರುವ ರೆಸ್ವೆಟ್ರಾಲ್ ಎಂಬ ಆಂಟಿ ಆಕ್ಸಿಡೆಂಟ್ ಕಾರಣ. ರಕ್ತದಲ್ಲಿನ ಸಕ್ಕರೆ ಪ್ರಮಾಣ ಸಮತೋಲನದಲ್ಲಿರುವಂತೆ ಹಿಪ್ಪುನೇರಳೆಯಲ್ಲಿನ ಸಂಯೋಜನೆಗಳು ಸಹಕರಿಸುತ್ತವೆ. ಸಕ್ಕರೆ ಪ್ರಮಾಣ ಸಾಮಾನ್ಯ ಸ್ಥಿತಿಗೆ ತರಲು ಚೀನಾದಲ್ಲಿ ಹಿಪ್ಪುನೇರಳೆಯನ್ನು ಔಷಧವಾಗಿ ಬಳಸುತ್ತಾರೆ.
ಅಷ್ಟೇ ಅಲ್ಲದೆ ಚರ್ಮದ ಮೇಲೆ ಏರ್ಪಡುವ ಕೆಂಪುಮಚ್ಚೆಗಳನ್ನು ಹಿಪ್ಪುನೇರಳೆ ಸೊಪ್ಪು ರಸ ಹಚ್ಚಿದರೆ ಕಡಿಮೆಯಾಗುತ್ತದೆ. ಕರ್ಕುಮಿನ್ ಮತ್ತು ಹಿಪ್ಪುನೇರಳೆ ಎಲೆಗಳನ್ನು ಬೆರೆಸಿ ತಯಾರಿಸಿದ ಮಿಶ್ರಣವನ್ನು ಚರ್ಮದ ಮೇಲೆ ಉಂಟಾಗುವ ನವೆಯನ್ನು ಕಡಿಮೆ ಮಾಡುತ್ತದೆಂದು ರೋಮೇನಿಯನ್ ಅಧ್ಯಯನಗಳು ಹೇಳುತ್ತವೆ. ಒಣಗಿನ ಹಿಪ್ಪುನೇರಳೆ ಹಣ್ಣು ಪ್ರೋಟೀನ್, ವಿಟಮಿನ್ ಸಿ, ಕೆ, ಫೈಬರ್ ಮತ್ತು ಐರನ್‌ಗಳನ್ನು ಹೊಂದಿರುತ್ತದೆ. ಹಾಗಾಗಿ ಇದನ್ನು ಸ್ನ್ಯಾಕ್ ಆಗಿಯೂ ಬಳಸಬಹುದು. ಹಿಪ್ಪುನೇರಳೆಯಲ್ಲಿನ ಆಲ್ಕಲಾಯಿಡ್‌ಗಳು ಬಿಳಿ ರಕ್ತಕಣಗಳನ್ನು ಉದ್ದೀಪನಗೊಳಿಸುತ್ತವೆ. ಈ ರಕ್ಷಕ ಕಣಗಳು ರೋಗನಿರೋಧಕ ವ್ಯವಸ್ಥೆಯನ್ನು ಜಾಗೃತಗೊಳಿಸಿ ಅಪಾಯದಿಂದ ಕಾಪಾಡುತ್ತವೆ. ಆರೋಗ್ಯವಾಗಿರುವಂತೆ ಮಾಡುತ್ತವೆ.

Comments are closed.