ಕುಂದಾಪುರ: ಕರಾವಳಿಯ ಜನತೆ ಹಿಂದುತ್ವಕ್ಕೆ ಬಲಿಯಾಗುತ್ತಿದ್ದು, ಅಮಾಯಕ ಹಿಂದೂ, ಮುಸಲ್ಮಾನರು ಜೀವ ಕಳೆದುಕೊಳ್ಳುತ್ತಿದ್ದಾರೆ. ಅಮಾಯಕರ ಜೀವ ತೆಗೆದು ಅಧಿಕಾರಕ್ಕೆ ಬರುವ ಬಿಜೆಪಿಗಿಂತ ನಾವು ಒಳ್ಳೆಯ ಹಿಂದುತ್ವ ಪಾಲಿಸುತ್ತಿದ್ದೇವೆ. ಹಿಂದುತ್ವದಲ್ಲಿ ನಾವು ಬಿಜೆಪಿಗಿಂತ ಒಂದು ಹೆಜ್ಜೆ ಮುಂದೆ ಇದ್ದೇವೆ. ಹಿಂದಿನಿಂದಲೂ ಬಿಜೆಪಿ ಭಾವನಾತ್ಮಕ ವಿಚಾರವನ್ನು ಜನರ ಮುಂದಿಡುತ್ತಾ ಚುನಾವಣೆ ಎದುರಿಸಿ ಅಧಿಕಾರದ ಗದ್ದುಗೆ ಹಿಡಿಯುತ್ತಿದೆ. ಹಿಂದುತ್ವದ ಹೆಸರಲ್ಲಿ ಆಯ್ಕೆಯಾದವರು ಜನರ ಕಷ್ಟಗಳನ್ನು ಕೇಳಲು ಬರಲ್ಲ. ಸದನದಲ್ಲಿಯೂ ಧ್ವನಿ ಎತ್ತುವುದಿಲ್ಲ. ಅವರಿಗೆ ಜನರ ಮೇಲೆ ನಿಜವಾಗಿಯೂ ಕಾಳಜಿ ಇಲ್ಲ ಎಂದು ಸಿಎಂ ಎಚ್.ಡಿ. ಕುಮಾರಸ್ವಾಮಿ ಬಿಜೆಪಿಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಅವರು ಮಂಗಳವಾರ ಇಲ್ಲಿನ ತ್ರಾಸಿ ಕೊಂಕಣಿ ಖಾರ್ವಿ ಸಭಾಭವನದಲ್ಲಿ ನಡೆದ ಶಿವಮೊಗ್ಗ ಲೋಕಸಭಾ ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ಮಧುಬಂಗಾರಪ್ಪನವರ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.

ಸರಕಾರ ಬೀಳಲ್ಲ..!
ಉಪಚುನಾವಣೆಯ ಬಳಿಕ ಮೈತ್ರಿ ಸರ್ಕಾರ ಬೀಳಲಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಮನೆಗೆ ಹೋಗುತ್ತಾರೆ ಎಂದು ಬಿಎಸ್‌ವೈ ಹೇಳಿಕೆ ನೀಡಿದ್ದಾರೆ. ಬಿಎಸ್‌ವೈ ಮಾತು ಸತ್ಯವಾಗಲ್ಲ. ಉಪಚುನಾವಣೆಯ ಬಳಿಕ ನಾನು ಮನೆಗೆ ಹೋಗಲ್ಲ. ಬಡವರ ಮನೆಗೆ ಬರುತ್ತೇನೆ. ನಿಮ್ಮೆಲ್ಲರ ಮನೆಯಲ್ಲಿ ಕುಳಿತು ಚರ್ಚೆ ನಡೆಸುತ್ತೇನೆ. ನಾವು ಎಷ್ಟು ದಿನ ಆಡಳಿತ ನಡೆಸಬೇಕು ಎಂದು ದೇವರು ನಿರ್ಧರಿಸಿದ್ದಾನೆ. ಇದನ್ನು ಯಡಿಯೂರಪ್ಪ ತಡೆಯಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಮೈತ್ರಿಕೂಟದ ಅಭ್ಯರ್ಥಿ ಮಧುಬಂಗಾರಪ್ಪನವರ ಗೆಲುವು ನಿಶ್ಚಿತ. ಮುಂದಿನ ರಾಜ್ಯದ ರಾಜಕಾರಣದಲ್ಲಿ ಮೈತ್ರಿ ಸರ್ಕಾರ ಸುಭದ್ರವಾಗಿ ನಡೆಯಲು ಐದೂ ಉಪಚುನಾವಣೆಗಳಲ್ಲಿ ಮತದಾರರು ಜನತಾದಳ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸುತ್ತಾರೆ ಎಂಬ ನಂಬಿಕೆ ಇದೆ. ಕರಾವಳಿ ಭಾಗದಲ್ಲಿ ಹಿಂದೆ ಶಾಸಕರಾಗಿದ್ದವರು ಅತೀ ಹೆಚ್ಚು ಅಭಿವೃದ್ದಿ ಕೆಲಸಗಳನ್ನು ಮಾಡಿದ್ದರು. ಆದರೆ ಚುನಾವಣೆಯಲ್ಲಿ ಅವರೆಲ್ಲರೂ ಸೋಲು ಕಂಡಿದ್ದಾರೆ.
ಅಪ್ಪ-ಮಗನ ಕೊಡುಗೆಯೇನಿಲ್ಲ..!
ಬಂಗಾರಪ್ಪನವರ ಸುದೀರ್ಘವಾದ ರಾಜಕೀಯ ಜೀವನದಲ್ಲಿ ಅವರು ಹಲವಾರು ಕೊಡುಗೆಗಳನ್ನು ಕೊಟ್ಟಿದ್ದಾರೆ. ಗ್ರಾಮೀಣ ಕೈಗಾರಿಕೆಗಳಿಗೆ ಅವರು ಕೊಟ್ಟಂತಹ ಪ್ರೋತ್ಸಾಹ ಇಂದಿಗೂ ಜನತೆ ಮರೆತಿಲ್ಲ. ಕಳೆದ ೯ವರೆ ವರ್ಷಗಳಿಂದ ಲೋಕಸಭಾ ಸದಸ್ಯರಾಗಿದ್ದ ಅಪ್ಪ-ಮಗ ಈ ಭಾಗದ ಜನರ ಸಮಸ್ಯೆಗಳನ್ನು ಆಲಿಸಿಲ್ಲ. ಲೋಕಸಭೆಯಲ್ಲಿ ಒಮ್ಮೆಯಾದರೂ ಇಲ್ಲಿನ ಜನರ ಸಂಕಷ್ಟಗಳ ಬಗ್ಗೆ ಮಾತನಾಡಿಲ್ಲ. ಮತ್ತೆ ಪುನಃ ಅವರನ್ನೇ ನೀವು ಆಯ್ಕೆ ಮಾಡುತ್ತೀರಾ. ಯೋಚನೆ ಮಾಡಿ ಎಂದ ಸಿಎಂ ಕುಮಾರಸ್ವಾಮಿ, ಈ ನಾಲ್ಕುವರೆ ತಿಂಗಳಲ್ಲಿ ನೀವು ನಮ್ಮಿಂದ ಏನು ನಿರೀಕ್ಷೆ ಮಾಡಿದ್ದೀರಿ ಅದಕ್ಕೆ ಸರ್ಕಾರ ಸ್ಪಂದಿಸದಿದ್ದರೆ ಮುಂಬರುವ ಮಹಾಚುನಾವಣೆಗೆ ನಿಮ್ಮ ಮುಂದೆ ನಾನು ಬಂದು ನಾನು ಮತ ಕೇಳಲ್ಲ ಎಂದು ಅವರು ಹೇಳಿದರು.
ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಪ್ರಸ್ತಾಪಿಸಿದರು. ಸಭೆಯಲ್ಲಿ ಮೀನುಗಾರಿಕಾ ಸಚಿವ ವೆಂಕಟರಾವ್ ನಾಡಗೌಡ, ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ವಿಧಾನಪರಿಷತ್ ಸದಸ್ಯ ಭೇಜೋಗೌಡ, ಮಾಜಿ ಸಚಿವರಾದ ರಮಾನಾಥ ರೈ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕರಾದ ವಿನಯ್ ಕುಮಾರ್ ಸೊರಕೆ, ಗೋಪಾಲ ಭಂಡಾರಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜನಾರ್ಧನ ತೋನ್ಸೆ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ, ಜಿ.ಎ. ಬಾವಾ, ರಾಜು ಪೂಜಾರಿ, ರವಿ ಶೆಟ್ಟಿ ಮೊದಲಾದವರು ಇದ್ದರು. ಬೈಂದುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮದನ್ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.
Comments are closed.