
ಹಾಸನ: ಹಾಸನಂಬ ದೇವಸ್ಥಾನದ ಪವಾಡದ ವಿಚಾರ ಈಗ ದೊಡ್ಡ ವಿವಾದಕ್ಕೆ ಎಡೆ ಮಾಡಿಕೊಡುತ್ತಿರುವಂತೆಯೇ ಪ್ರಕರಣದಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದೆ. ಹಾಸನಾಂಬೆ ದೇವಿಯ ಸನ್ನಿದಾನದಲ್ಲಿ ಯಾವುದೇ ಪವಾಡ ನಡೆಯುವುದಿಲ್ಲವೆಂದು ದೇವಸ್ಥಾನದ ಪ್ರಧಾನ ಅರ್ಚಕ ನಾಗರಾಜ್ ಭಟ್ ಹೇಳಿದರು.
ಹಾಸನಾಂಬೆ ದೇವಸ್ಥಾನದಲ್ಲಿ ಯಾವುದೇ ಪವಾಡ ನಡೆಯುವುದಿಲ್ಲ. ಸುಮ್ಮನೆ ಜನರ ಭಾವನೆಗೆ ಮೋಸ ಮಾಡಲಾಗುತ್ತಿದೆ ಎಂದು ನಾಸ್ತಿಕರು ಹಾಗೂ ವಿಚಾರವಾದಿಗಳ ಕೆಲ ಸಂಘಟನೆಗಳು ಇತ್ತೀಚೆಗೆ ಆರೋಪ ಮಾಡಿದ್ದವು. ದೇವಸ್ಥಾನದಲ್ಲಿ ನಡೆಯುತ್ತದೆನ್ನಲಾದ ಪವಾಡಗಳನ್ನ ಭಂಜಿಸುವಂತೆ ಜಿಲ್ಲಾಡಳಿತವನ್ನು ಆಗ್ರಹಿಸಿದ್ದವು. ಇದಕ್ಕೆ ಪ್ರತಿಯಾಗಿ ಶ್ರೀರಾಮಸೇನೆ ಸೇರಿದಂತೆ ಕೆಲ ಹಿಂದೂ ಸಂಘಟನೆಗಳು ವಿಚಾರವಾದಿಗಳ ನಡೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿದ್ದವು. ಇದೀಗ ದೇವಾಲಯದ ಅರ್ಚಕರೇ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿರುವುದು ಗಮನಾರ್ಹ.
ದೇವಸ್ಥಾನದಲ್ಲಿ ಯಾವುದೇ ಪವಾಡ ನಡೆಯಲ್ಲ. ಪವಾಡ ನಡೆಯುತ್ತದೆ ಎಂದು ನಾವು ಯಾವತ್ತೂ ಹೇಳಿಲ್ಲ. ಹಾಗೆಂದು ಯಾವುದೇ ನಾಮಫಲಕವನ್ನು ಹಾಕಿಲ್ಲ. ದೇವಾಲಯದ ಬಾಗಿಲು ಮುಚ್ಚುವಾಗ ನಾವು ಯಾವುದೇ ಪ್ರಸಾದ ಮತ್ತು ಹೂ ಇಡುವುದಿಲ್ಲ. ಸೀರೆ, ಹಸಿರು ಬಳೆ, ಕರಿಮಣಿ ಬಿಚ್ಚೋಲೆಗಳನ್ನ ಇಡುತ್ತೇವೆ ಎಂದು ಅರ್ಚಕರು ಸ್ಪಷ್ಟಪಡಿಸಿದರು.
ಆದರೆ, ಹಚ್ಚಿದ ದೀಪ ಇಡೀ ವರ್ಷ ಹೇಗೆ ಉರಿಯುತ್ತದೆ ಎಂಬ ನಾಸ್ತಿಕರ ಪ್ರಶ್ನೆಗೆ ನಾಗರಾಜ ಭಟ್ಟರು ವ್ಯಗ್ರಗೊಂಡರು. ದೀಪ ಉರಿಯೋ ಅನವಶ್ಯಕ ಪ್ರಶ್ನೆ ಮಾಡಲು ಇವರು ಯಾರು? ಈ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿದ್ದಾರೆ ಎಂದು ತಿರುಗೇಟು ನೀಡಿದರು. ಆದರೆ, ದೀಪ ನಿಜಕ್ಕೂ ಉರಿಯುತ್ತಾ ಎಂಬ ಪ್ರಶ್ನೆಗೆ ಅರ್ಚಕರು ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರ ಕೊಟ್ಟರು. “ದೀಪ ಉರಿಯುತ್ತೆ ಅಂತ ಆಗಲಿ, ಉರಿಯೊಲ್ಲ ಅಂತ ಆಗಲಿ ನಾನು ಹೇಳಲಾರೆ. ದೀಪ ಉರಿಯೋದರಿಂದ ಯಾರಿಗೂ ಲಾಭವೂ ಇಲ್ಲ ನಷ್ಟವೂ ಇಲ್ಲ,” ಎಂದು ನಾಗರಾಜ ಭಟ್ಟರು ಹೇಳಿದರು.
ದೇವಿಯಲ್ಲಿ ಯಾರು ಏನೇ ಪ್ರಾರ್ಥನೆ ಮಾಡಿದರೂ ಅದು ಈಡೇರುತ್ತದೆ ಎಂಬ ನಂಬಿಕೆ ಭಕ್ತರದ್ದು. ಈ ನಂಬಿಕೆಗಳಿಗೆ ಅಡ್ಡಿ ಬಾರದ ರೀತಿ ಇವರು ನಡೆದುಕೊಳ್ಳಲಿ ಎಂದು ನಾಗರಾಜ್ ಮನವಿ ಮಾಡಿದರು.
ಹಾಸನಾಂಬೆ ದೇವಸ್ಥಾನದಲ್ಲಿ ಯಾವುದೇ ಪವಾಡ ನಡೆಯೊಲ್ಲ. ಅಲ್ಲಿ ಬಾಗಿಲು ಮುಚ್ಚುವಾಗ ಯಾವುದೇ ಹೂ, ಪ್ರಸಾದ ಇಡುವುದಿಲ್ಲ ಎಂದು ಅರ್ಚಕರೇ ಸ್ವತಃ ಒಪ್ಪಿಕೊಂಡಿದ್ದಾರೆ. ಹಾಗಾದರೆ, ಹಾಸನಾಂಬೆ ಸನ್ನಿದಾನದಲ್ಲಿ ಇಡುವ ಹೂ, ಪ್ರಸಾದಗಳು ಒಂದಿಡೀ ವರ್ಷ ಕೆಡದೆ ಹಾಗೆಯೇ ಉಳಿಯುತ್ತೆ ಎಂಬ ಸುದ್ದಿಗಳು ಹೇಗೆ ಹರಡಿದವು? ವರ್ಷದ ನಂತರ ಹಾಸನಾಂಬೆ ದೇವಸ್ಥಾನದ ಬಾಗಿಲು ತೆರೆದಾಗ ಅಲ್ಲಿ ಪ್ರಸಾದ ಹೇಗೆ ಇರುತ್ತಿದ್ದವು? ಈ ಪ್ರಶ್ನೆಗಳಿಗೆ ಉತ್ತರ ಯಾರು ಕೊಡುತ್ತಾರೆ?
Comments are closed.