ರಾಷ್ಟ್ರೀಯ

ಸುಪ್ರೀಂ ಆದೇಶದಂತೆ ತಮ್ಮ ಆಸ್ತಿ ವಿವರ ಘೋಷಿಸಿದ 10 ನ್ಯಾಯಾಧೀಶರು !

Pinterest LinkedIn Tumblr

ನವದೆಹಲಿ: ಉಚ್ಛ ನ್ಯಾಯಾಲಯದ ನ್ಯಾಯಾಧೀಶರು ತಮ್ಮ ಆಸ್ತಿಪಾಸ್ತಿ ವಿವರಗಳನ್ನು ಬಹಿರಂಗಪಡಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ಣಯ ಹೊರಡಿಸಿದ್ದರೂ ಕೂಡ ಈಗಿರುವ 24 ನ್ಯಾಯಾಧೀಶರಲ್ಲಿ ಕೇವಲ 10 ನ್ಯಾಯಾಧೀಶರು ಮಾತ್ರ ಅಧಿಕೃತ ವೆಬ್ ಸೈಟ್ ನಲ್ಲಿ ತಮ್ಮ ಆಸ್ತಿ ಮತ್ತು ಹೂಡಿಕೆ ವಿವರಗಳನ್ನು ಬಹಿರಂಗಪಡಿಸಿದ್ದಾರೆ.

1997ರಲ್ಲಿಯೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮುಖ್ಯ ನ್ಯಾಯಮೂರ್ತಿಗೆ ತಮ್ಮ ಆಸ್ತಿಪಾಸ್ತಿ ಮತ್ತು ಹೂಡಿಕೆ ವಿವರಗಳನ್ನು ಸಾರ್ವಜನಿಕರಿಗೆ ತಿಳಿಸಬೇಕೆಂದು ಪೂರ್ಣಪ್ರಮಾಣದ ನ್ಯಾಯಪೀಠ ಕಾನೂನು ಹೊರಡಿಸಿತ್ತು. 2009ರ ಆಗಸ್ಟ್ 26ರಂದು ಸುಪ್ರೀಂ ಕೋರ್ಟ್ ಮತ್ತೊಂದು ನಿರ್ಣಯ ಹೊರಡಿಸಿ ನ್ಯಾಯಾಧೀಶರು ಸ್ವಯಂಪ್ರೇರಿತವಾಗಿ ತಮ್ಮ ಹಾಗೂ ತಮ್ಮ ಕುಟುಂಬ ಸದಸ್ಯರ ಆಸ್ತಿ ವಿವರಗಳನ್ನು ಘೋಷಿಸಬಹುದು ಎಂದು ಹೇಳಿತ್ತು.

ಆದರೆ ಇದುವರೆಗೆ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಸೇರಿದಂತೆ ಕೇವಲ 10 ನ್ಯಾಯಾಧೀಶರು ಮಾತ್ರ ಸುಪ್ರೀಂ ಕೋರ್ಟ್ ವೆಬ್ ಸೈಟ್ ನಲ್ಲಿ ತಮ್ಮ ಆಸ್ತಿಪಾಸ್ತಿ ವಿವರಗಳನ್ನು ಘೋಷಿಸಿಕೊಂಡಿದ್ದಾರೆ. ಉಳಿದ ನ್ಯಾಯಾಧೀಶರು ಈಗಾಗಲೇ ವಿವರಗಳನ್ನು ನೀಡಿದ್ದಾರೆಯೇ ಮತ್ತು ವಿವರಗಳನ್ನು ವೆಬ್ ಸೈಟ್ ನಲ್ಲಿ ಅಪ್ ಲೋಡ್ ಮಾಡಬೇಕಷ್ಟಯೇ ಎಂದು ತಿಳಿದಿಲ್ಲ.

ಭಾರತದ ಮುಖ್ಯ ನ್ಯಾಯಮೂರ್ತಿ ಸೇರಿದಂತೆ ಸುಪ್ರೀಂ ಕೋರ್ಟ್ ನ ನ್ಯಾಯಾಧೀಶರುಗಳ ಒಟ್ಟು ಸಂಖ್ಯೆ 31. ಅವರಲ್ಲಿ ನ್ಯಾಯಮೂರ್ತಿಗಳಾದ ಆರ್ ಎಫ್ ನಾರಿಮನ್, ಎ ಎಂ ಸಪ್ರೆ, ಯು ಯು ಲಲಿತ್, ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್, ಸಂಜಯ್ ಕೃಷ್ಣ ಕೌಲ್, ಮೋಹನ್ ಎನ್ ಶಾಂತನಗೌಡರ್, ಎಸ್ ಅಬ್ದುಲ್ ನಜೀರ್, ನವೀನ್ ಸಿನ್ಙ, ದೀಪಕ್ ಗುಪ್ತಾ, ಇಂದು ಮಲ್ಹೋತ್ರಾ, ಇಂದಿರಾ ಬ್ಯಾನರ್ಜಿ, ವಿನೀತ್ ಸರನ್ ಮತ್ತು ಕೆ ಎಂ ಜೋಸೆಫ್ ಇನ್ನೂ ತಮ್ಮ ಆಸ್ತಿ ವಿವರ ಘೋಷಿಸಿಕೊಂಡಿಲ್ಲ. ಇವರಲ್ಲಿ ನ್ಯಾಯಮೂರ್ತಿಗಳಾದ ನಾರಿಮನ್, ಲಲಿತ್, ರಾವ್ ಮತ್ತು ಮಲ್ಹೋತ್ರಾ ನೇರವಾಗಿ ಬಾರ್ ಕೌನ್ಸಿಲ್ ನಿಂದ ಬಡ್ತಿಯಾಗಿ ಬಂದವರು. ಕಳೆದ ಏಪ್ರಿಲ್ ನಲ್ಲಿ ಇಂದು ಮಲ್ಹೋತ್ರಾ ಅಧಿಕಾರ ವಹಿಸಿಕೊಂಡಿದ್ದರೆ ನ್ಯಾಯಮೂರ್ತಿಗಳಾದ ಜೋಸೆಫ್, ಬ್ಯಾನರ್ಜಿ ಮತ್ತು ಸರಣ್ ಕಳೆದ ಆಗಸ್ಟ್ ನಲ್ಲಿ ಬಡ್ತಿ ಹೊಂದಿದವರಾಗಿದ್ದಾರೆ.

ಸುಪ್ರೀಂ ಕೋರ್ಟ್ ವೆಬ್ ಸೈಟ್ ನಲ್ಲಿರುವ ಮಾಹಿತಿ ಪ್ರಕಾರ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಮೊನ್ನೆ ಅಧಿಕಾರ ವಹಿಸಿಕೊಂಡ ಕೂಡಲೇ ತಮ್ಮ ಆಸ್ತಿಪಾಸ್ತಿ ಮತ್ತು ಹೂಡಿಕೆ ವಿವರಗಳನ್ನು ನೀಡಿದ್ದಾರೆ.

Comments are closed.