ಕರ್ನಾಟಕ

ರಾಜ್ಯದಲ್ಲಿ ಜೆಡಿಎಸ್ ಜೊತೆ ಮೈತ್ರಿಗೆ ಬಿಎಸ್​ಪಿ ಎಳ್ಳುನೀರು?

Pinterest LinkedIn Tumblr


ಬೆಂಗಳೂರು: ರಾಷ್ಟ್ರಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಮಹಾಮೈತ್ರಿ ಪ್ರಯತ್ನದ ಬಲೂನು ಠುಸ್ ಆಗುವಂತೆ ಮಾಯಾವತಿ ಪೆಟ್ಟು ಕೊಟ್ಟಿದ್ದಾರೆ. ಬಹುಜನ ಸಮಾಜ ಪಕ್ಷವನ್ನು ಮುಗಿಸುವುದು ಕಾಂಗ್ರೆಸ್ ಉದ್ದೇಶ ಎಂದು ಮಾಯಾವತಿ ಸಿಡಿಗುಟ್ಟಿದ್ದಾರೆ. ಇತ್ತ, ಕರ್ನಾಟಕದ ಏಕೈಕ ಬಿಎಸ್​ಪಿ ಸಚಿವ ಎನ್. ಮಹೇಶ್ ಕೂಡ ಕಾಂಗ್ರೆಸ್ ಸೇರಿದಂತೆ ಬಹುತೇಕ ರಾಜಕೀಯ ಪಕ್ಷಗಳನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕಾಂಗ್ರೆಸ್ ಪಕ್ಷ, ಬಿಜೆಪಿ, ಜೆಡಿಎಸ್ ಪಕ್ಷಗಳಿಂದ ಈ ದೇಶದ ದಲಿತರ ಉದ್ದಾರ ಸಾಧ್ಯವಾಗಲಿಲ್ಲ ಎಂದು ಶಿಕ್ಷಣ ಸಚಿವ ಎನ್. ಮಹೇಶ್ ಸಿಡಿಗುಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸಮ್ಮಿಶ್ರ ಸರಕಾರದಲ್ಲಿ ಪಾಲುದಾರರಾಗಿರುವ ಬಿಎಸ್​ಪಿಯ ಮುಂದಿನ ನಡೆ ಏನಿರಬಹುದು ಎಂಬ ಕುತೂಹಲವಂತೂ ಮನೆ ಮಾಡಿದೆ.

ಕರ್ನಾಟಕದಲ್ಲಿ ಯಾರೊಂದಿಗೂ ಬಿಎಸ್​ಪಿ ಮೈತ್ರಿ ಇಲ್ಲ:
ಈ ನಡುವೆ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿ ಬಿಎಸ್​ಪಿ ಸ್ವತಂತ್ರವಾಗಿ ಕಣಕ್ಕಿಳಿಯುತ್ತದೆ ಎಂದು ಮಹೇಶ್ ಹೇಳಿಕೆ ನೀಡಿದ್ದಾರೆ. ಈ ಮೂಲಕ ಜೆಡಿಎಸ್ ಪಕ್ಷದೊಂದಿಗೆ ಬಿಎಸ್​ಪಿ ಮೈತ್ರಿ ಮುರಿದುಕೊಳ್ಳುವ ಸ್ಪಷ್ಟ ಸೂಚನೆ ರವಾನೆಯಾಗಿದೆ. ಆದರೆ, ಮಾಯಾವತಿ ಅವರು ಈ ಬಗ್ಗೆ ಯಾವುದೇ ಹೇಳಿಕೆ ನೀಡಿಲ್ಲ.

ತನ್ನ ಖಂಡತುಂಡ ಹೇಳಿಕೆ ಬಗ್ಗೆ ಯಾವ ಖೇದವೂ ಉಳಿಸಿಕೊಳ್ಳದ ಎನ್. ಮಹೇಶ್ ಅವರು ಮಾಯಾವತಿ ಸೂಚಿಸಿದರೆ ಸಂಪುಟದಿಂದ ಹೊರಬರಲು ಸಿದ್ಧವಾಗಿದ್ದಾರೆ. ಮಾತನಾಡಿದ ಶಿಕ್ಷಣ ಸಚಿವರು, ಸದ್ಯ ಸಂಪುಟದಲ್ಲೇ ಇದ್ದೇನೆ. ಕ್ಯಾಬಿನೆಟ್​ನಿಂದ ಹೊರಬರುವಂತೆ ಮಾಯಾವತಿ ತನಗೆ ಸೂಚನೆ ನೀಡಿಲ್ಲ. ತನ್ನನ್ನು ಅವರು ಸಂಪರ್ಕ ಮಾಡಿಯೂ ಇಲ್ಲ. ಅವರು ಏನು ಹೇಳುತ್ತಾರೋ ಅದನ್ನು ಪಾಲನೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.

ಚಾಮರಾಜನಗರದಲ್ಲಿ ಇಂದು ನಡೆದ ‘ಬಿಎಸ್​ಪಿಯ ನಡಿಗೆ ಪಾರ್ಲಿಮೆಂಟ್ ಕಡೆಗೆ’ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಎನ್. ಮಹೇಶ್, ಎಲ್ಲಿಯವರೆಗೆ ಜಾತಿ ವ್ಯವಸ್ಥೆ ಇರುತ್ತೋ ಅಲ್ಲಿಯವರೆಗೂ ಕಾಂಗ್ರೆಸ್, ಜೆಡಿಎಸ್ ಬಿಜೆಪಿ ಜೀವಂತವಾಗಿರುತ್ತವೆ ಎಂದು ಖಾರವಾಗಿ ಹೇಳಿದ್ದಾರೆ. ಕಾಂಗ್ರೆಸ್ ಸೇರಿದಂತೆ ಎಲ್ಲಾ ರಾಜಕೀಯ ಪಕ್ಷಗಳು ಶೋಷಿತರನ್ನು ಮುಂದೆ ತರುವಲ್ಲಿ ವಿಫಲವಾಗಿದ್ದರಿಂದಲೇ ಬಿಎಸ್​ಪಿ ಹುಟ್ಟಿಕೊಂಡಿತು ಎಂದು ಕೊಳ್ಳೇಗಾಲದ ಶಾಸಕರು ವಿಶ್ಲೇಷಿಸಿದ್ದಾರೆ.

“ಭಾರತ ದೇಶದ ನೂರು ಕೋಟಿ ಜನರನ್ನ ಸಾಮಾಜಿಕ, ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಧ್ಯೇಯ ಕಾಂಗ್ರೆಸ್ ಪಕ್ಷಕ್ಕೆ ಇದ್ದಿದ್ದರೆ ಇಷ್ಟೊತ್ತಿಗೆ ಭಾರತದಲ್ಲಿ ಎಲ್ಲರೂ ಸಮಾನತೆಯಿಂದ ಬದುಕುತ್ತಿದ್ದರು. ಕಾಂಗ್ರೆಸನ್ನ ಯಾಕೆ ಮೊದಲು ಹೇಳ್ತಿದ್ದೀನಿ ಅಂದ್ರೆ ಈ ದೇಶವನ್ನ ಹೆಚ್ಚು ಕಾಲ ಆಳಿದವರು ಅವರೇ. ಅವರು ಜಾರಿ ಮಾಡದೇ ಇದ್ದಿದ್ದರಿಂದ ಇವತ್ತು ಬಹುಜನ ಸಮಾಜ ಪಾರ್ಟಿ ಹುಟ್ಟಿದೆ” ಎಂದವರು ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ, ಜೆಡಿಎಸ್, ಪ್ರಾದೇಶಿಕ ಪಕ್ಷಗಳನ್ನೂ ಬಿಡಲಿಲ್ಲ:
“70-80 ವರ್ಷಗಳಿಂದ ಸಂಘಪರಿವಾದವರು ಚಳವಳಿ ಮಾಡಿಕೊಂಡು ಇವತ್ತು ಭಾರತೀಯ ಜನತಾ ಪಾರ್ಟಿ ಸೃಷ್ಟಿಯಾಗಿದೆ. ಇವರೂ ರಾಷ್ಟ್ರದಲ್ಲಿ ಹಾಗೂ ಅನೇಕ ರಾಜ್ಯಗಳಲ್ಲಿ ಆಳ್ವಿಕೆ ಮಾಡಿದ್ದಾರೆ. ಸಾಮಾಜಿಕ, ಆರ್ಥಿಕ ಅಸಮಾನತೆ ಹೋಗಿದೆಯಾ? ಹಾಗೇ ಉಳಿದಿದೆ. ಇನ್ನು ಸಣ್ಣಪುಟ್ಟ ಪಾರ್ಟಿಗಳಾದ ಜಾತ್ಯತೀತ ಜನತಾ ದಳ, ಸಮಾಜವಾದಿ ಪಾರ್ಟಿ, ಪ್ರಾದೇಶಿಕ ಪಕ್ಷಗಳು ಇವುಗಳ ಕೈಯಲ್ಲೂ ಈ ದೇಶದಲ್ಲಿ ಸಮಾನತೆಯನ್ನು ತರಲು ಆಗಲಿಲ್ಲ. ಆ ಕಾರಣಕ್ಕೆ ಬಹುಜನ ಸಮಾಜ ಪಾರ್ಟಿ ಹುಟ್ಟಿಕೊಂಡಿರೋದು. ಇಲ್ಲದಿದ್ದರೆ ಈ ಪಕ್ಷ ಹುಟ್ಟೋ ಅಗತ್ಯವೇ ಇರಲಿಲ್ಲ” ಎಂದು ಎನ್. ಮಹೇಶ್ ವಾಗ್ದಾಳಿ ನಡೆಸಿದ್ದಾರೆ.

“ನಾನು ಬಹಿರಂಗವಾಗಿಯೇ ಹೇಳ್ತೀನಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಆ ಪಕ್ಷಗಳ ಕಾರ್ಯಕರ್ತರಿಗೆ ನಾನು ಹೇಳುವಂಥ ಸಿದ್ಧಾಂತ ಅರ್ಥ ಆಗೊಲ್ಲ. ಅವರಿಗೆ ಅದು ಬೇಕಾಗೂ ಇಲ್ಲ. ಯಾಕೆ ಅಂದ್ರೆ, ಈ ಜಾತಿ ವ್ಯವಸ್ಥೆ, ಅಸಮಾನತೆ ಎಲ್ಲಿಯವರೆಗೂ ಇರುತ್ತೋ ಅಲ್ಲೀವರೆಗೆ ಕಾಂಗ್ರೆಸ್, ಬಿಜೆಪಿ, ಜನತಾ ದಳಗಳು ಜೀವಂತವಾಗಿರುತ್ತವೆ. ಜಾತಿ ವ್ಯವಸ್ಥೆ, ಅಸಮಾನತೆ ಯಾವತ್ತು ಹೋಗುತ್ತೋ ಆವತ್ತು ಬಸವಣ್ಣನ ಪಾರ್ಟಿ ಬಹುಜನ ಸಮಾಜ ಪಾರ್ಟಿ ಅಧಿಕಾರದಲ್ಲಿ ಇರುತ್ತೆ” ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ.

ಇದೇ ವೇಳೆ, ಬಿಎಸ್​ಪಿ ಕೇವಲ ದಲಿತರ ಪಕ್ಷವಲ್ಲ, ಎಲ್ಲ ವರ್ಗದವರನ್ನು ಒಳಗೊಂಡ ಪಕ್ಷ ಎಂದೂ ಅವರು ಸ್ಪಷ್ಟನೆ ಕೊಟ್ಟಿದ್ದಾರೆ.

ಕಾಂಗ್ರೆಸ್ಸನ್ನು ಪಾರ್ಥೇನಿಯಮ್ ಕಳೆಗೆ ಹೋಲಿಸಿದ್ದರೇ ಮಹೇಶ್?

ಇತ್ತೀಚೆಗೆ ಎನ್. ಮಹೇಶ್ ಅವರು ಚಾಮರಾಜನಗರದ ಸ್ವಚ್ಛತಾ ಕಾರ್ಯಕ್ರಮವೊಂದರಲ್ಲಿ ಪಾರ್ಥೇನಿಯಮ್ ಕಳೆಗೆ ಕಾಂಗ್ರೆಸ್ ಗಿಡವೆಂದು ಸಂಬೋಧಿಸಿ ವಿಡಂಬನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು. ಕಾಂಗ್ರೆಸ್ ಗಿಡ ಬಹಳ ಅಪಾಯಕಾರಿ. ಅದರ ನಿರ್ಮೂಲನೆಯ ಕಾರ್ಯ ಮಾಡಿದ್ದೇವೆ ಎಂದು ಮಹೇಶ್ ಹೇಳಿದ್ದರು. ಆ ಕಾರ್ಯಕ್ರಮದಲ್ಲಿದ್ದ ಕೆಲವರು, ಸಾರ್ ಅದು ಪಾರ್ಥೇನಿಯಮ್ ಕಳೆ ಎಂದು ನೆನಪಿಸಿದರೂ ಮಹೇಶ್ ಅವರು ಕಾಂಗ್ರೆಸ್ ಗಿಡವೆಂದೇ ಸಂಬೋಧಿಸಿದ್ದರು. ಅವರು ಉದ್ದೇಶಪೂರ್ವಕವಾಗಿ ಕಾಂಗ್ರೆಸ್ ಪಕ್ಷವನ್ನು ಪಾರ್ಥೇನಿಯಮ್ ಕಳೆಗೆ ಹೋಲಿಸಿದರಾ? ಅಲ್ಲದೇ, ಕೊಳ್ಳೇಗಾಲ ನಗರಸಭೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ದೂರ ಇಟ್ಟ ಬೆಳವಣಿಗೆಯನ್ನೂ ಪರೋಕ್ಷವಾಗಿ ಪ್ರಸ್ತಾಪಿಸುವ ಮೂಲಕ ಮಹೇಶ್ ಅವರು ಕಾಂಗ್ರೆಸ್ ನಿರ್ಮೂಲನೆಯ ಮಾತನ್ನಾಡಿದರಾ ಎಂಬ ಚರ್ಚೆಗಳಂತೂ ನಡೆದಿದ್ದವು.

ಈ ಬಗ್ಗೆ ಇವತ್ತು ಮತ್ತೆ ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವರು, ತಾನು ಕಾಂಗ್ರೆಸ್ ಗಿಡದ ಬಗ್ಗೆ ಹೇಳುವಾಗ ಮಿದುಳಲ್ಲಿ ಕಾಂಗ್ರೆಸ್ ಪಕ್ಷವಿರಲಿಲ್ಲ. ಹಳ್ಳಿಗಳಲ್ಲಿ ಪಾರ್ಥೇನಿಯಮ್ ಕಳೆಗೆ ಕಾಂಗ್ರೆಸ್ ಗಿಡ ಎಂದೇ ಕರೆಯುತ್ತಾರೆ. ಆ ಗಿಡ ಕಿತ್ತುಹಾಕಿ ಸ್ವಚ್ಛತೆಗೆ ಚಾಲನೆ ಕೊಟ್ಟಿದ್ದೇನೆ ಎಂದಷ್ಟೇ ಹೇಳಿದ್ದೆ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಅಸಮಾನತೆ ಇರುವವರೆಗೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಜೀವಂತವಾಗಿರುತ್ತವೆ ಎಂದು ಎನ್. ಮಹೇಶ್ ನೀಡಿದ ಹೇಳಿಕೆ ಬಗ್ಗೆ ಆ ಮೂರೂ ಪಕ್ಷಗಳ ಯಾವ ಮುಖಂಡರಿಂದಲೂ ತೀಕ್ಷ್ಣ ಪ್ರತಿಕ್ರಿಯೆ ಇನ್ನೂ ಬಂದಿಲ್ಲ. ಕಾಂಗ್ರೆಸ್ ಬೆಂಬಲದೊಂದಿಗೆ ಸರಕಾರ ನಡೆಸುವಾಗ ಆ ಪಕ್ಷದ ವಿರುದ್ಧ ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸುವ ಕೆಲಸ ಮಾಡಬೇಡಿ ಎಂದು ಎನ್. ಮಹೇಶ್ ಅವರಿಗೆ ಸಿಎಂ ಕುಮಾರಸ್ವಾಮಿ ಕಿವಿಮಾತು ಹೇಳಿದ್ದಾರೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಈ ಸಮ್ಮಿಶ್ರ ಸರಕಾರಕ್ಕೆ ಸದ್ಯಕ್ಕೆ ಅಪಾಯದ ಸ್ಥಿತಿ ಸೃಷ್ಟಿಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಮಾಯಾವತಿ ಅವರ ನಿರ್ಧಾರದ ಮೇಲೆ ಕಾಂಗ್ರೆಸ್-ಜೆಡಿಎಸ್-ಬಿಎಸ್​ಪಿ ಮೈತ್ರಿ ನಿಂತಿದೆ.

ಕೊಳ್ಳೇಗಾಲದ ಎನ್. ಮಹೇಶ್ ಅವರು ಉತ್ತರ ಪ್ರದೇಶ ಹೊರತಾಗಿ ಬೇರೆ ರಾಜ್ಯವೊಂದರಲ್ಲಿ ಮಂತ್ರಿಯಾದ ಮೊತ್ತಮೊದಲ ಬಿಎಸ್​ಪಿ ಶಾಸಕರೆನಿಸಿದ್ದಾರೆ. . ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಕೆಲ ಕ್ಷೇತ್ರಗಳಲ್ಲಿ ಬಿಎಸ್​ಪಿ ಸ್ಪರ್ಧಿಸಿತ್ತು. ಕೊಳ್ಳೇಗಾಲದಲ್ಲಿ ಮಾತ್ರ ಅದಕ್ಕೆ ಗೆಲುವಿನ ಸವಿ ಸಿಕ್ಕಿತು. ಅತಂತ್ರ ವಿಧಾನಸಭೆ ನಿರ್ಮಾಣವಾದ ಹಿನ್ನೆಲೆಯಲ್ಲಿ ರಚನೆಯಾದ ಸಮ್ಮಿಶ್ರ ಸರಕಾರದಲ್ಲಿ ಬಿಎಸ್​ಪಿ ಶಾಸಕರಿಗೆ ಸಚಿವರಾಗುವ ಯೋಗವೂ ಪ್ರಾಪ್ತವಾಯಿತು.

Comments are closed.