ಕರಾವಳಿ

ಗುಜ್ಜಾಡಿ ಗ್ರಾಮಪಂಚಾಯತಿ ಎದುರು ದಲಿತರ ಪ್ರತಿಭಟನೆ; ಪಿಡಿಓ ವರ್ಗಾವಣೆಗೆ ವಾರದ ಗಡುವು!

Pinterest LinkedIn Tumblr

ಕುಂದಾಪುರ: ದಲಿತರ ಶೇ. 25ರ ನಿಧಿಯಲ್ಲಿ ಶಿಕ್ಷಣಕ್ಕೆ ಪ್ರಥಮ ಪ್ರಾಶಸ್ತ್ಯ ಕೊಡಬೇಕಿತ್ತು. ಕಾನೂನುಗಳನ್ನು ಗಾಳಿಗೆ ತೂರಿ ಗುಜ್ಜಾಡಿ ಪಂಚಾಯತ್ ಅಭಿವೃದ್ದಿ ಅಧಿಕಾರಿ ಆ ನಿಧಿಯನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ದಲಿತರ ಶಿಕ್ಷಣದ ಹಕ್ಕನ್ನು ಕಸಿದುಕೊಂಡ ಪಿಡಿ‌ಓ ಅವರನ್ನು ವಾರದೊಳಗೆ ಅಮಾನತುಗೊಳಿಸದಿದ್ದರೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲ ಅವರಿಗೆ ಘೇರಾವ್ ಹಾಕುತ್ತೇವೆ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರ್ ಎಚ್ಚರಿಕೆ ನೀಡಿದರು.

ಅವರು ಗುಜ್ಜಾಡಿ ಗ್ರಾಮ ಪಂಚಾಯತ್ ದಲಿತರ ಹಣ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿ ದಲಿತ ಸಂಘರ್ಷ ಸಮಿತಿ ಗುಜ್ಜಾಡಿ ಶಾಖೆ ನೇತೃತ್ವದಲ್ಲಿ ಪಂಚಾಯತ್ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದರು.

ಇಂದು ಸರ್ಕಾರದ ಹಲವಾರು ಯೋಜನೆಗಳು ಶೋಷಿತ ಸಮುದಾಯದವರಿಗೆ ಸರಿಯಾಗಿ ತಲುಪುತ್ತಿಲ್ಲ. ಪಂಚಾಯತ್‌ಗಳ ಅನೇಕ ಸಮಸ್ಯೆಗಳಿಗೆ ಇಂದು ಪಿಡಿ‌ಓಗಳೇ ನೇರ ಹೊಣೆ. ಇದನ್ನು ದಾಖಲೆ ಸಮೇತವಾಗಿ ಸಾಬೀತುಪಡಿಸುತ್ತೇನೆ. ಪಂಚಾಯತ್ ಅಭಿವೃದ್ದಿ ಅಧಿಕಾರಿಗಳಿಗೆ ಬದ್ದತೆ ಇಲ್ಲ. ಅಭಿವೃದ್ದಿಯಾಗಬೇಕೆಂಬ ಇಚ್ಛಾ ಶಕ್ತಿ ಇಲ್ಲ. ಈ ಪ್ರತಿಭಟನೆ ಅಂತಹ ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆಯ ಗಂಟೆ ಆಗಬೇಕು ಎಂದರು. ಗುಜ್ಜಾಡಿ ಪಿಡಿ‌ಓ ಸಂವಿಧಾನಬದ್ದವಾದ ನಮ್ಮ ಹಕ್ಕನ್ನು ಕಸಿದುಕೊಂಡಿದ್ದು, ಹಣವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ದಲಿತರ ಶಿಕ್ಷಣಕ್ಕೆ ಮೀಸಲಿಟ್ಟ ಹಣವನ್ನು ಚುನಾವಣಾ ಸಮಯದಲ್ಲಿ ರಾಜಕೀಯ ಮಾಡುವುದಕ್ಕಾಗಿ ಬೇರೆ ಯೋಜನೆಗಳಿಗೆ ಬಳಸಿಕೊಂಡಿದ್ದಾರೆ. ಈ ಭ್ರಷ್ಟಾರಕ್ಕೆ ತಾಲೂಕು ಪಂಚಾಯತ್ ಕಾರ್ಯನಿರ್ವಣಾಧಿಕಾರಿಯವರು ಶಾಮೀಲಾಗಿದ್ದಾರೆಂದು ಆರೋಪಿಸಿದರು.

ತಾಲೂಕು ಪಂಚಾಯತ್ ಗ್ರಾಮೀಣೋದ್ಯೋಗ ಸಹಾಯಕ ನಿರ್ದೇಶಕರಾದ ಹೆಚ್.ವಿ ಇಬ್ರಾಹಿಂಪುರ್ ಪ್ರತಿಭಟನಾ ನಿರತರ ಮನವಿ ಸ್ವೀಕರಿಸಿದರು.

ಈ ಮೊದಲು ರಾಮಮಂದಿರದಿಂದ ಗುಜ್ಜಾಡಿ ಗ್ರಾಂಪಂಚಾಯತ್‌ವರೆಗೆ ಮೆರವಣಿಗೆ ನಡೆಸಿ ಧಿಕ್ಕಾರಗಳನ್ನು ಕೂಗಿದರು. ಬಳಿಕ ಪುರಸಭಾ ಸದಸ್ಯ ಪ್ರಭಾಕರ್ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ್ರು. ಪ್ರತಿಭಟನೆಯಲ್ಲಿ ತಾ.ಪಂ ಸದಸ್ಯ ನಾರಾಯಣ ಗುಜ್ಜಾಡಿ, ದಸಂಸ ಜಿಲ್ಲಾ ಸಂಚಾಲಕ ವಾಸುದೇವ ಮುದೂರು, ತಾಲೂಕು ಸಂಚಾಲಕ ರಾಜು ಬೆಟ್ಟಿನಮನೆ, ಮುಖಂಡರಾದ ಅರುಣ್, ಪ್ರಭಾಕರ, ಮಂಜುನಾಥ ಹಳಗೇರಿ, ಗೀತಾ ಸುರೇಶ್, ನಾಗರತ್ನ ಮೊದಲಾದವರು ಇದ್ದರು.

Comments are closed.