ಕುಂದಾಪುರ: ಇಂದು ಪ್ರಧಾನಿ ನರೇಂದ್ರ ಮೋದಿ ಜನುಮ ದಿನ. ನೆಚ್ಚಿನ ಪ್ರಧಾನಿ ಹುಟ್ಟು ಹಬ್ಬವನ್ನು ಇಲ್ಲೊಬ್ಬ ಅಭಿಮಾನಿ ವಿಭಿನ್ನವಾಗಿ ಕಳೆದ ನಾಲ್ಕು ವರ್ಷದಿಂದ ಆಚರಿಸಿಕೊಂಡು ಬಂದಿದ್ದು ಈ ಬಾರಿ ಬರ್ತ್ ಡೇ ಸೆಲೆಬ್ರೇಶನ್ ಹೇಗಿತ್ತು ಅನ್ನೋದಕ್ಕೆ ಈ ಸ್ಟೋರಿ ನೋಡಿ.



ಶ್ರಮಜೀವಿ ಲಕ್ಷ್ಮಣ!
ಇವರ ಹೆಸರು ಲಕ್ಷ್ಮಣ ಕುಂದರ್. ಉಡುಪಿ ಜಿಲ್ಲೆಯ ಕೋಟದ ನಿವಾಸಿ. ಕೋಟ ಪೊಲೀಸ್ ಠಾಣೆ ಬಳಿ ಇವರದ್ದೊಂದು ಕ್ಯಾಂಟಿನ್ ಇದೆ. ಶ್ರೀ ಸನ್ನಿಧಿ ಹೆಸರಿನ ಈ ಕ್ಯಾಂಟಿನ್ ನಲ್ಲಿ ಕಳೆದ ನಾಲ್ಕು ವರ್ಷದಿಂದ ಸೆಪ್ಟಂಬರ್ 17 ಬಂತೆಂದರೆ ಸಂಭ್ರಮದ ವಾತಾವರಣ. ಇದಕ್ಕೆ ಕಾರಣವೇನಪ್ಪಾ ಅಂದ್ರೆ ಲಕ್ಷ್ಮಣ ಕುಂದರ್ ಪಕ್ಕಾ ಮೋದಿ ಪಾಲೋವರ್ ಹಾಗೂ ಫ್ಯಾನ್. ಮೋದಿ ಬಗ್ಗೆ ಇವರಿಗೆ ಎಲ್ಲಿಲ್ಲದ ಪ್ರೀತಿ. ಅದಕ್ಕಾಗಿಯೇ ಪ್ರತಿ ವರ್ಷ ಮೋದಿ ಹುಟ್ಟುಹಬ್ಬವನ್ನು ಇವರು ತನ್ನ ವರ್ಷದ ಪರಿಶ್ರಮದ ಹಣದಲ್ಲಿ ಆಚರಿಸ್ತಾರೆ. ನಿತ್ಯ ಬೆಳಿಗ್ಗೆನಿಂದ ರಾತ್ರಿಯವರೆಗೆ ಕ್ಯಾಂಟಿನ್ ಮಾದರಿಯ ಪುಟ್ಟ ಗೂಡಂಗಡಿಯಲ್ಲಿ ದುಡಿದು ಸಂಪಾದಿಸುವ ಇವರು ನಿತ್ಯ 50 ರೂಪಾಯಿ ಹಣವನ್ನು ಮೋದಿ ಬರ್ತ್ ಡೇ ಆಚರಣೆಗೆಂದೆ ಕೂಡಿಡುತ್ತಾರೆ. ಮೋದಿಹುಟ್ಟಿದ ಹಬ್ಬ ಆಚರಿಸೋ ಈ ಅಭಿಮಾನಿಯ ನೋಡಲು ಈ ದಿನ ಬಹಳಷ್ಟು ಮಂದಿ ಬರ್ತಾರೆ ಅಷ್ಟೆ ಅಲ್ಲ..ಇವರ ಜೊತೆ ಪೋಟೋ ತಗೋಳ್ತಾರೆ, ಸೆಲ್ಪಿ ಕ್ಲಿಕ್ಕಿಸುತ್ತಾರೆ.
ಕೇಕ್..ಪಲಾವ್.ಚಹಾ!
ಅಂದ ಹಾಗೇ ಶ್ರಮ ಜೀವಿಯಾಗಿರೋ ಲಕ್ಷ್ಮಣ್ ವರ್ಷವಿಡೀ ಕೂಡಿಟ್ಟ ಹಣದಲ್ಲಿ ಮೋದಿ ಬರ್ತ್ ಡೇ ಆಚರಣೆ ಮಾಡ್ತಾರೆ. ತನ್ನ ಕ್ಯಾಂಟೀನ್ ಎದುರು ದೊಡ್ಡದೊಂದು ಪ್ಲೆಕ್ಸ್ ಹಾಕ್ತಾರೆ. ಅಂದು ಬೆಳಿಗ್ಗೆನಿಂದ ವ್ಯಾಪಾರ-ವ್ಯವಹಾರ ಫುಲ್ ಬಂದ್. ಅಂಗಡಿಯಲ್ಲಿ ಸ್ಥಳೀಯ ಮುಖಂಡರನ್ನು ಕರೆದು ಅವರಿಂದ ಕೇಕ್ ಕತ್ತರಿಸಲಾಗುತ್ತೆ. ಬಳಿಕ ಬರೋ ಮಂದಿಗೆ ಟಿಫನ್ ಹಾಗೂ ಟೀ ಉಚಿತವಾಗಿಯೇ ನೀಡ್ತಾರೆ. ಈ ಬಾರಿ ಪಲಾವ್ ಮಾಡಲಾಗಿತ್ತು. ಬಂದವರಿಗೆ ಪಲಾವ್, ಟೀ ಜೊತೆ ಬಾಯಿ ಸಿಹಿ ಮಾಡಲು ಕೇಕ್ ಪೀಸ್ ನೀಡಲಾಯ್ತು. ಸುಮಾರು 15 ಕೇ.ಜಿ ಅಕ್ಕಿಯಿಂದ ಪಲಾವ್, 15 ಲೀಟರ್ ಹಾಲಿನಿಂದ ತಯಾರಿಸಿದ ಮೋದಿ ಚಾಯ್ ಸವಿದವರು ಬರೋಬ್ಬರಿ ಒಂದು ಸಾವಿರ ಮಂದಿ.
ಈ ಭಾಗದ ಜಿಲ್ಲಾಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಬಾರಿಕೆರೆ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಭರತ್ ಕುಮಾರ್ ಶೆಟ್ಟಿ ಸೇರಿದಂತೆ ಮೋದಿ ಅಭಿಮಾನಿಗಳು, ಸಾರ್ವಜನಿಕರು ಕ್ಯಾಂಟೀನಿಗೆ ಆಗಮಿಸಿ ಉಪಹಾರ ಸೇವಿಸಿ ಮೋದಿ ಅಭಿಮಾನಿಯ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ರು. ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್‍ಯದರ್ಶಿ ಶಂಕರ್ ಕೋಟ, ಹರ್ತಟ್ಟು ಯುವಕ ಮಂಡಲದ ಸದಸ್ಯರು, ಸ್ಥಳೀಯರಾದ ಪ್ರವೀಣ್ ಯಕ್ಷಿಮಠ, ಪ್ರಸಾದ್ ಕಾಂಚನ್ ಮೊದಲಾದವರು ಈ ಸಂದರ್ಭ ಇದ್ದರು.
ಯಾರೇನೇ ಹೇಳಲಿ..ಒಳ್ಳೆತನ, ಕಾರ್ಯವೈಖರಿ ಮೆಚ್ಚಿ ತಾನು ಮೋದಿ ಪಾಲೋವರ್ ಆಗಿದ್ದು ಪ್ರತಿವರ್ಷವೂ ಅವರ ಹುಟ್ಟಿದ ದಿನ ಆಚರಿಸುವೆ ಅಂತಾರೆ ಈ ಮೋದಿ ಅಭಿಮಾನಿ.
(ವರದಿ- ಯೋಗೀಶ್ ಕುಂಭಾಸಿ)
Comments are closed.