ಕರಾವಳಿ

‘ಸೆ ನೋ ಟು ಡ್ರಗ್ಸ್’; ಕುಂದಾಪುರದಲ್ಲಿ ಸೈಕಲ್ ಏರಿದ ಎಸ್ಪಿ, ಎಸಿ, ಅಧಿಕಾರಿಗಳು & ಪಬ್ಲಿಕ್!

Pinterest LinkedIn Tumblr

ಕುಂದಾಪುರ: ಇಂದು ಭಾನುವಾರದ ರಜಾ ದಿನ. ಬೆಳ್ಳಂಬೆಳಿಗ್ಗೆ ನೂರಾರು ಮಂದಿ ಸೈಕಲ್ ಏರಿ ಸಾಗುತ್ತಿದ್ರು. ಈ ಸೈಕಲ್ ಜಾಥಾದ ಹಿಂದೆ ಒಂದೊಳ್ಳೆ ಉದ್ದೇಶವೂ ಇತ್ತು. ಇವರೆಲ್ಲರಿಗೂ ಟೀಂ ಲೀಡರ್ ಆಗಿ ಉಡುಪಿ ಎಸ್ಪಿ ಇದ್ರು. ಕುಂದಾಪುರದಲ್ಲಿ ನಡೆದ ಸೈಕ್ಲಥಾನ್ ಝಲಕ್ ಇದು.

ಸದಾ ಡ್ಯುಟಿ ಅಂತಾ ಬ್ಯುಸಿಯಾಗುತ್ತಿದ್ದ ಪೊಲೀಸರು, ತಮ್ಮ ಕೆಲಸ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಿದ್ದ ಮಂದಿಯೂ ಒಂದೆಡೆ, ಪಾಠ ಪ್ರವಚನ, ಆಟೋಟದಲ್ಲಿ ಕಾಲಕಳೆಯುತಿದ್ದ ಚಿಣ್ಣರೆಲ್ಲ ಮತ್ತೊಂದೆಡೆ. ಇಂದು ಭಾನುವಾರ ಇವರೆಲ್ಲಾ ಬಿಡುವು ಮಾಡಿಕೊಂಡಿದ್ರು. ಎಲ್ಲರೂ ಸೈಕಲ್ ಏರಿ ಕುಂದಾಪುರದಲ್ಲಿ ಒಂದುಗೂಡಿದ್ರು. ಮಾದಕ ವ್ಯಸನದ ವಿರುದ್ದ ಜಾಗೃತಿ ಮೂಡಿಸುವ ಉದ್ದೇಶದಿಂದ ಉಡುಪಿ ಜಿಲ್ಲಾ ಪೋಲಿಸ್ ಕುಂದಾಪುರ ಉಪವಿಭಾಗ, ಕುಂದಾಪುರ ಪೊಲೀಸ್ ಠಾಣೆ, ಸೈಕ್ಲಿಂಗ್ ಕ್ಲಬ್ ಕುಂದಾಪುರ, ಕುಂದಾಪುರ ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ಮಾದಕ ವ್ಯಸನ ವಿರೋಧಿ ಮಾಸಾಚರಣೆಯ ಸಲುವಾಗಿ ಕುಂದಾಪುರದಲ್ಲಿ ಸೈಕ್ಲಥಾನ್ ಆಯೋಜಿಸಲಾಗಿತ್ತು. ಉಡುಪಿ ಎಸ್ಪಿ ಲಕ್ಷ್ಮಣ ನಿಂಬರಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಮುಕ್ಕಾಲು ಭಾಗ ಜನಸಂಖ್ಯೆ ಯುವಕರಿಂದ ಕೂಡಿರುವ ನಮ್ಮ ದೇಶದಲ್ಲಿ ಇಂದು ಮಾದಕ ದ್ರವ್ಯ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಇದಕ್ಕೆ ಯುವಕರೆ ಹೆಚ್ಚು ಬಲಿಯಾಗುತ್ತಿರುವುದು ಖೇದಕರ. ನಮ್ಮ ದೇಶದ ಮುಂದಿನ ಬೆಳವಣಿಗೆ ಯುವಶಕ್ತಿಯ ಮೇಲೆ ಅವಲಂಬಿತವಾಗಿದೆ. ನಮ್ಮ ದೇಶದ ಮೇಲೆ ವೈರಿ ದೇಶ ದಾಳಿ ಮಾಡಿದರೆ ನಮಗೆ ಸೈನ್ಯ ಬಲ ಇದೆ. ಮಾದಕ ದ್ರವ್ಯ ಕಣ್ಣಿಗೆ ಕಾಣದೆ ಯುವಜನತೆಯ ಮೇಲೆ ದಾಳಿಗಳನ್ನು ಮಾಡುತ್ತಿದೆ. ಕಣ್ಣಿಗೆ ಕಾಣದೆ ಆಂತರಿಕವಾಗಿ ನಡೆಯುತ್ತಿರುವ ಈ ದಾಳಿಯನ್ನು ನಾವು ತಡೆಗಟ್ಟಬೇಕಾಗಿದೆ ಎಂದರು.

ಕೇವಲ ಪೊಲೀಸ್ ಇಲಾಖೆಯಿಂದ ಹಾಗೂ ಕಾನೂನಿನಿಂದ ನಾವು ಇದನ್ನು ತಡೆಗಟ್ಟಬಹುದು ಎನ್ನುವುದು ಶುದ್ದ ಸುಳ್ಳು. ಮಾದಕ ವ್ಯಸನಗಳ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಬಹಳ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ನಾವು ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಅದರ ಭಾಗವಾಗಿಯೇ ಸೈಕಲ್ ಈ ಜಾಥಾ ಎಂದರು.

ಸುಮಾರು 25 ಕಿಲೋಮೀಟರಿಗೂ ಅಧಿಕ ದೂರಗಳ ಕಾಲ ಸೈಕಲ್ ಜಾಥಾ ನಡೆಯಿತು. ಇನ್ನೂರಕ್ಕೂ ಅಧಿಕ ಮಂದಿ ಸೈಕಲ್ ಜಾಥಾದಲ್ಲಿ ಪಾಲ್ಗೊಂಡಿದ್ದು, ಕುಂದಾಪುರ ಚರ್ಚ್ ರಸ್ತೆ ಮಾರ್ಗವಾಗಿ ಎಮ್ ಕೋಡಿ, ಕೋಡಿ ಹಳೆ‌ಅಳಿವೆ, ಕೋಟೇಶ್ವರ ದೇವಸ್ಥಾನದ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚರಿಸಿ ಬಳಿಕ ಕುಂದಾಪುರ ಬೋರ್ಡ್ ಹೈಸ್ಕೂಲಿನಲ್ಲಿ ಜಾಥಾ ಸಮಾಪ್ತಿಗೊಂಡಿತು. ದಾರಿಯೂದ್ದಕ್ಕೂ ಸಾರ್ವಜನಿಕರು ಜಾಥಾದಲ್ಲಿ ದಣಿದು ಬಂದವರಿಗೆ ತಂಪುಪಾನೀಯ, ಮಜ್ಜಿಗೆ ಹಾಗೂ ಕಲ್ಲಂಗಡಿ ಹಣ್ಣುಗಳನ್ನು ನೀಡಿ ಹುರಿದುಂಬಿಸಿದರು. ಚಕ್ರಮ್ಮ ದೇವಸ್ಥಾನ, ಎಂ ಕೋಡಿ ಫ್ರೆಂಡ್ಸ್, ಕೋಟಿ ಚನ್ನಯ್ಯ ಮಿತ್ರ ಮಂಡಳಿ ಮೊದಲಾದ ಸಂಘ ಸಂಸ್ಥೆಗಳು ತಂಪು ಪಾನೀಯ ನೀಡಿ ಪ್ರೋತ್ಸಾಹಿಸಿದೆ.

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್, ತಹಸೀಲ್ದಾರ್ ತಿಪ್ಪೇಸ್ವಾಮಿ, ಡಿವೈ‌ಎಸ್‌ಪಿ ಬಿ.ಪಿ. ದಿನೇಶ್ ಕುಮಾರ್, ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ಮಂಜಪ್ಪ, ಬೈಂದೂರಿನ ಪರಮೇಶ್ವರ ಗುನಗಾ, ಕುಂದಾಪುರ ಪಿ‌ಎಸ್‌ಐ ಹರೀಶ್ ಆರ್.ನಾಯ್ಕ್, ಕಂಡ್ಲೂರು ಪಿ‌ಎಸ್‌ಐ ಶ್ರೀಧರ ನಾಯ್ಕ್, ಬೈಂದೂರು ಪಿ‌ಎಸ್‌ಐ ತಿಮ್ಮೇಶ್ ಬಿ‌.ಎನ್, ಗಂಗೊಳ್ಳಿ ಪಿ‌ಎಸ್‌ಐ ವಾಸಪ್ಪ ನಾಯ್ಕ್ ಹಾಗೂ ಸಿಬ್ಬಂದಿಗಳು, ಜಿಲ್ಲಾ ಪತ್ರಕರ್ತರ ಸಂಘದ ಜೊತೆ ಕಾರ್ಯದರ್ಶಿ ಮೈಕಲ್ ಸಾಸ್ತಾನ, ಕುಂದಾಪುರ ಪತ್ರಕರ್ತರು, ಕುಂದಾಪುರ ಸೈಕಲ್ ಕ್ಲಬ್, ಉಡುಪಿ ಸೈಕಲ್ ಕ್ಲಬ್ ಹಾಗೂ ಸಾರ್ವಜನಿಕರು ಸೈಕಲ್ ಜಾಥಾದಲ್ಲಿ ಉತ್ಸಾಹದಿಂದ ಪಾಲ್ಗೊಂಡರು.

ಸೈಕಲ್ ಜಾಥಾದಲ್ಲಿ ಭಾಗವಹಿಸಿದ ಚಿಣ್ಣರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಲಕ್ಕಿ ಕೂಪನ್ ನೀಡಲಾಗಿದ್ದು, ಲಕ್ಕಿ ಕೂಪನ್ ಡ್ರಾದಲ್ಲಿ ಉದಯ ಜ್ಯುವೆಲ್ಲರ್‍ಸ್ ನೀಡಿರುವ ಸೈಕಲ್ ಪುಟಾಣಿ ಪೂರ್ವಿ ಪಡೆದು ಖುಷಿಪಟ್ಟಳು.

ಒಟ್ಟಿನಲ್ಲಿ ಸಮಾಜದಲ್ಲಿ ಒಂದು ಪಿಡುಗಾಗಿರುವ ಡ್ರಗ್ಸ್ ಎಂಬ ಮಹಾಮಾರಿಯನ್ನು ನಾಶಮಾಡಲು ಇಲಾಖೆ ವಿಭಿನ್ನ ಪ್ರಯತ್ನಗಳ ಮೂಲಕ ಸೆಟೆದುನಿಂತಿದ್ದು ಇದಕ್ಕೆ ಸಾರ್ವಜನಿಕರು ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದಲ್ಲಿ ಸೇ ನೋ ಟು ಡ್ರಗ್ಸ್ ಅಭಿಯಾನ ಯಶಸ್ಸು ಕಾಣಲಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.