
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರ ಎಚ್ಚಳ ವಿರೋಧಿಸಿ ಕಾಂಗ್ರೆಸ್ ಭಾರತ್ ಬಂದ್ಗೆ ಕರೆ ನೀಡಿತ್ತು. ಬಂದ್ಗೆ ದೇಶಾದ್ಯಂತ ಭಾರೀ ಬೆಂಬಲ ವ್ಯಕ್ತವಾಗಿದ್ದಲ್ಲದೇ, ಕಚ್ಚಾ ತೈಲದ ಬೆಲೆ ಇಳಿಸುವಂತೆ ಕೇಂದ್ರಕ್ಕೆ ಆಗ್ರಹಿಸಲಾಯ್ತು. ಬಂದ್ ಬಿಸಿ ನಡುವೆಯೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದೆ ಎನ್ನಲಾಗಿದೆ.
ಇಂದು ಪೆಟ್ರೋಲ್ ಬೆಲೆ ಲೀಟರ್ಗೆ 28 ಪೈಸೆ, ಡೀಸೆಲ್ ಲೀಟರ್ಗೆ 22 ಪೈಸೆ ಏರಿಕೆಯಾಗಿದೆ ಎಂದು ತೈಲ ಮಾರಾಟ ಸಂಸ್ಥೆಗಳು ತಿಳಿಸಿವೆ. ಮುಂಬೈಯಲ್ಲಿ ಪೆಟ್ರೋಲ್ ಲೀಟರ್ಗೆ 88.67 ರೂ, ಡೀಸೆಲ್ ಲೀಟರ್ಗೆ 77.82 ರೂ, ಚೆನ್ನೈಯಲ್ಲಿ ಪೆಟ್ರೋಲ್ 84.49 ರೂ, ಡೀಸೆಲ್ 77.49 ರೂ, ಕೋಲ್ಕತಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 83.14 ರೂ, ಡೀಸೆಲ್ ಬೆಲೆ 75.36 ರೂ.ಗೆ ಗಣನೀಯ ಏರಿಕೆ ಕಂಡಿದೆ.
ತೈಲೋತ್ಪನ್ನಗಳ ದರ ಈ ವರ್ಷದ ಆರಂಭದಿಂದ ಇದುವರೆಗೆ ಕ್ರಮವಾಗಿ ಶೇಕಡ 13 ಮತ್ತು ಶೇಕಡ 19ರಷ್ಟು ಏರಿಕೆಯಾಗಿದೆ. ಅಮೆರಿಕದಲ್ಲಿ ತೈಲಕ್ಷೇತ್ರದಲ್ಲಿ ಕುಸಿಯುತ್ತಿರುವ ಹೂಡಿಕೆ, ಇರಾನ್ ಮೇಲಿನ ದಿಗ್ಭಂಧನ ಸೇರಿ ಮತ್ತಿತರ ಕಾರಣಗಳಿಂದ ತೈಲಬೆಲೆ ಮತ್ತಷ್ಟು ಹೆಚ್ಚುವ ನಿರೀಕ್ಷೆ ಇದೆ ಎನ್ನುತ್ತಿವೆ ಮೂಲಗಳು.
ಈಗಾಗಲೇ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಭಾರತದಾದ್ಯಂತ ಬಂದ್ ಯಶಸ್ವಿಯಾಗಿತ್ತು. ಜನರು ಸ್ವಯಂಪ್ರೇರಿತವಾಗಿ ಬಂದ್ಗೆ ಬೆಂಬಲಿಸಿ ಬೆಲೆ ಏರಿಕೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಕೇಂದ್ರ ಸರಕಾರವು ಪೆಟ್ರೋಲ್ ಮೇಲೆ ವಿಧಿಸುತ್ತಿರುವ ಅಬಕಾರಿ ಸುಂಕದ ದರವನ್ನು ಇಳಿಸಬೇಕೆಂದು ವಿಪಕ್ಷಗಳು ಸೇರಿದಂತೆ ಜನರು ಬಲವಾಗಿ ಆಗ್ರಹಿಸಿದ್ದಾರೆ.
ಆದರೆ, ಪೆಟ್ರೋಲ್ ಬೆಲೆ ಏರಿಕೆಗೆ ಕೇಂದ್ರ ಕಾರಣವಲ್ಲ. ಅಂತಾರಾಷ್ಟ್ರೀಯ ತೈಲ ಬೆಲೆಗೆ ಅನುಗುಣವಾಗಿ ಪೆಟ್ರೋಲ್ ಬೆಲೆ ನಿಗದಿಯಾಗಿದೆ ಎಂದು ಬಿಜೆಪಿ ತನ್ನ ವಾದ ಮುಂದುವರಿಸಿದೆ. ರಾಜಧಾನಿ ನವದೆಹಲಿ, ಮುಂಬೈ ಸೇರಿದಂತೆ ಇನ್ನೂ ಪ್ರಮುಖ ನಗರಗಳಲ್ಲಿ ಡೀಸೆಲ್ ಮತ್ತು ಪೆಟ್ರೋಲ್ ದರ ಮತ್ತೆ ಅಧಿಕವಾಗಿದೆ ಎನ್ನಲಾಗಿದೆ.
Comments are closed.