
ಹೊಸದಿಲ್ಲಿ: ಹಸುಗಳಿಗೆ ಕಡಲಕಳೆ (ಸಮುದ್ರದಲ್ಲಿ ಬೆಳೆಯುವ ಜೊಂಡು ಹುಲ್ಲು) ನೀಡಿದರೆ, ಜಾಗತಿಕ ತಾಪಮಾನ ಏರಿಕೆಯನ್ನು ಗಣನೀಯವಾಗಿ ನಿಯಂತ್ರಿಸಲು ಸಾಧ್ಯವಿದೆ.
ಈ ಅಂಶ ಅಮೆರಿಕದ ವಿಜ್ಞಾನಿಗಳು ಪತ್ತೆ ಹಚ್ಚಿದ್ದು, ಕಡಲ ಕಳೆಯನ್ನು ಒಣಗಿಸಿ ಹಸುಗಳಿಗೆ ನೀಡುವುದರಿಂದ ಹಸುಗಳಲ್ಲಿನ ಜೀರ್ಣಕ್ರಿಯೆ ಹೆಚ್ಚು ಬಲಿಷ್ಠವಾಗುತ್ತದೆ ಎಂದು ವಿಜ್ಞಾನಿಗಳು ಪ್ರಯೋಗದ ಮೂಲಕ ಕಂಡುಕೊಂಡಿದ್ದಾರೆ.
ವಾತಾವರಣದಲ್ಲಿನ ಮೀಥೇನ್ ಅಂಶ, ಹಸಿರು ಮನೆ ಅನಿಲ (ಜಿಎಚ್‌ಜಿ)ವನ್ನು ಹೆಚ್ಚಾಗಿಸುತ್ತವೆ. ಇವುಗಳು ಇಂಗಾಲದ ಡೈ ಆಕ್ಸೈಡ್‌ಗಿಂತ ಸುಮಾರು 28 ಪಟ್ಟು ಹೆಚ್ಚು ಕೆಟ್ಟ ಪರಿಣಾಮ ಬೀರುತ್ತದೆ. ಹಸುಗಳ ಜೀರ್ಣಕ್ರಿಯೆಯಲ್ಲಾಗುವ ವ್ಯತ್ಯಾಸದಿಂದ ಉಂಟಾಗುವ ವಾಯು, ಮೀಥೇನ್ ಉತ್ಪತ್ತಿ ಮಾಡುತ್ತದೆ. ಭಾರತದಲ್ಲಿನ ಹಸುಗಳ ಗಣತಿಯ ಆಧಾರದಲ್ಲಿ ಒಟ್ಟಾರೆ ಜಿಎಚ್‌ಜಿಯಲ್ಲಿ ಒಂದನೇ ಎಂಟರಷ್ಟು ಭಾಗ ಭಾರತದ ಹಸುಗಳಿಂದಲೇ ಉತ್ಪತ್ತಿಯಾಗುತ್ತದೆ.
ಪ್ರಸ್ತುತ ಭಾರತದಲ್ಲಿ 30.5 ಕೋಟಿ ರಾಸುಗಳಿದ್ದು, ಇವುಗಳಿಗೆ ಕಡಲೆಕಳೆಯನ್ನು ಆಹಾರವಾಗಿ ನೀಡಿದರೆ, ಮೀಥೇನ್ ಉತ್ಪತ್ತಿ, ಹೊರಸೂಸುವಿಕೆಯನ್ನು ಗಣನೀಯ ಪ್ರಮಾಣದಲ್ಲಿ ನಿಯಂತ್ರಿಸಲು ಸಾಧ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ. ಇಷ್ಟುಮಾತ್ರವಲ್ಲದೆ ಹಸುಗಳನ್ನು ಸಾಕುವ ಇನ್ನಿತರ ದೇಶಗಳಾದ ಬ್ರಿಜೆಲ್‌ನಲ್ಲಿ 23.2 ಕೋಟಿ, ಚೀನಾದಲ್ಲಿ 9.7 ಕೋಟಿ, ಯುಎಸ್‌ನಲ್ಲಿ 9.4ಕೋಟಿ ಹಾಗೂ ಯುರೋಪಿಯನ್ ಒಕ್ಕೂಟಗಳಲ್ಲಿ ಒಟ್ಟಾರೆ 8.8 ಕೋಟಿ ಹಸುಗಳಿವೆ. ಈ ಪೈಕಿ ಭಾರತದಲ್ಲಿ ದೇಶೀಯ ಹಸುಗಳೇ ಅಧಿಕವಾಗಿದ್ದು, ಇವುಗಳಿಂದ ಏರಿಕೆಯಾಗುತ್ತಿರುವ ತಾಪಮಾನವನ್ನು ಇಳಿಕೆ ಮಾಡ ಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಜಾಗತಿಕ ಮಟ್ಟದಲ್ಲಿರುವ ಹಸುಗಳ ಪೈಕಿ ಶೇ.30.4ರಷ್ಟು ರಾಸುಗಳಿವೆ. ಈ ನಿಟ್ಟಿನಲ್ಲಿ ದೇಶೀಯ ಹಸುಗಳಿಗೆ ನೀಡುವ ಆಹಾರದಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಬೇಕು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಕ್ಯಾಲಿಫೋರ್ನಿಯಾ-ಡೇವಿಸ್ ವಿಶ್ವವಿದ್ಯಾಲಯದ ಪ್ರಾಣಿ ವಿಜ್ಞಾನ ವಿಭಾಗ ಕಳೆದ ಮೂರು ತಿಂಗಳಿನಿಂದ ನಡೆಸಿದ ಪ್ರಯೋಗದಲ್ಲಿ ಈ ವಿಷಯ ಸ್ಪಷ್ಟವಾಗಿ ಕಂಡುಕೊಳ್ಳಲಾಗಿದೆ.
12 ಹಾಲ್‌ಸ್ಟಿನ್ ಹಸುಗಳನ್ನು ಎರಡು ಗುಂಪು ಮಾಡಿ ಆಹಾರ ಪದ್ದತಿಯಲ್ಲಿ ವ್ಯತ್ಯಾಸ ಮಾಡಲಾಗಿದೆ. ಒಂದು ಗುಂಪಿನ ಹಸುಗಳಿಗೆ ಕಡಲಕಳೆ ನೀಡಲಾಗಿದೆ. ಈ ಗುಂಪಿನ ಹಸುಗಳು ಶೇ.58ರಷ್ಟು ಕಡಿಮೆ ಮೀಥೇನ್ ಹೊರಹಾಕಿವೆ ಎಂದು ತಿಳಿದುಕೊಳ್ಳಲಾಗಿದೆ.
Comments are closed.