
ನವದೆಹಲಿ (ಆ. 14): ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿ ಅಮೆರಿಕಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ‘ಮೋದಿ ಅವರ್ಯಾಕೆ ತಮ್ಮ ಮಡದಿಯನ್ನು ಈ ಸಭೆಗೆ ಯಾಕೆ ಕರೆದುಕೊಂಡು ಬಂದಿಲ್ಲ?’ ಎಂದು ವೈಟ್ಹೌಸ್ನ ಸಿಬ್ಬಂದಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬಳಿ ಕೇಳಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ್ದ ಟ್ರಂಪ್, ‘ಬೇಕಿದ್ದರೆ ಮೋದಿಗೆ ನಾನೇ ಹೆಣ್ಣು ಹುಡುಕಿಕೊಡುತ್ತೇನೆ’ ಎಂದು ಹಾಸ್ಯಚಟಾಕಿ ಹಾರಿಸಿದ್ದರು.
2017ರಲ್ಲಿ ಭಾರತ-ಅಮೆರಿಕ ಉಭಯ ರಾಷ್ಟ್ರಗಳ ದ್ವಿಪಕ್ಷೀಯ ಮಾತುಕತೆಗೆಂದು ಪ್ರಧಾನಿ ನರೇಂದ್ರ ಮೋದಿ ಅವರು ವಾಷಿಂಗ್ಟನ್ಗೆ ತೆರಳಿದ್ದರು. ಈ ಸಂದರ್ಭದಲ್ಲಿ ವೈಟ್ಹೌಸ್ಸಿಬ್ಬಂದಿ ಮತ್ತು ಟ್ರಂಪ್ ನಡುವೆ ಸ್ವಾರಸ್ಯಕರ ಘಟನೆಯೊಂದು ನಡೆಯಿತು. ಈ ಬಗ್ಗೆ ಪೊಲಿಟಿಕೋ ಎಂಬ ಯುಎಸ್ಎ ಪತ್ರಿಕೆ ವರದಿ ಮಾಡಿದ್ದು, ಮುಂದೆ ಏನೆಲ್ಲಾ ಅನಾಹುತಕ್ಕೆ ಈ ಘಟನೆ ಕಾರಣವಾಯಿತು ಎಂದು ಹೇಳುತ್ತದೆ.
ಡೋನಾಲ್ಡ್ ಟ್ರಂಪ್ ಈ ರೀತಿಯ ಸ್ವಾರಸ್ಯಕರ ಘಟನೆಗಳನ್ನು ಮೋದಿಯ ಬಳಿ ಮಾಡಿರುವುದು ಮೊದಲೇನಲ್ಲ. ಒಮ್ಮೆ ದಕ್ಷಿಣ ಏಷ್ಯಾ ಭೂಪಟದಲ್ಲಿನ ಹೆಸರುಗಳನ್ನು ಸಭೆಯೊಂದರಲ್ಲಿ ಉಚ್ಛರಿಸುವಾಗ, ನೇಪಾಳ ದೇಶವನ್ನು ನಿಪ್ಪಲ್ ಎಂದು ಹಾಗೂ ಭೂತಾನ್ ದೇಶವನ್ನು ಬಟನ್ ಎಂದು ತಪ್ಪಾಗಿ ಹೇಳಿದರು.
ಈ ವೇಳೆ ಭೂತಾನ್ ಹಾಗೂ ನೇಪಾಳ ಭಾರತದ ಭಾಗವಾಗಿದೆ ಎಂದು ಭಾವಿಸಿದ್ದ ಟ್ರಂಪ್ ಎರಡು ರಾಷ್ಟ್ರಗಳು ಭಾರತದಿಂದ ಪ್ರತ್ಯೇಕಗೊಂಡಿವೆ ಎಂದು ತಿಳಿದಿರಲಿಲ್ಲವಂತೆ. ಬಳಿಕ ತಿಳಿದ ಕೂಡಲೇ ಈ ಎರಡು ದೇಶಗಳಲ್ಲಿ ಅಂತಹ ಸಂಪತ್ತೇನಿದೆ ಎಂದು ಪ್ರಶ್ನಿಸಿದ್ಧಾರೆ.
‘ನಾನು ನಿಮಗೆ ಮದುವೆಗೆ ಹೆಣ್ಣು ಹುಡುಕುತ್ತೇನೆ’ ಎಂದು ಮೋದಿ ಬಳಿ ಟ್ರಂಪ್ ಮಾಡಿದ ಮೊದಲ ಘಟನೆ ಇದಾಗಿರಲಿಲ್ಲ. ಹಲವು ಬಾರಿ ಅಮೆರಿಕದಲ್ಲಿ ಉಭಯ ರಾಷ್ಟ್ರಗಳ ನಡುವೆ ಮಾತುಕತೆ ನಡೆದಾಗ ಖುದ್ದಾಗಿ ಪ್ರಧಾನಿ ಮೋದಿಯನ್ನು ಕಾಲೆಳೆಯುತ್ತಿದ್ದರು.
ಅಲ್ಲದೇ ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳುವ ಪ್ರಕಾರ ಟ್ರಂಪ್ ಯಾವಾಗಲೂ ಮೋದಿ ಮತ್ತು ಭಾರತವನ್ನುಅನುಕರಣೀಯ ಮಾಡುವ ರೀತಿಯಲ್ಲಿ ಅಪಹಾಸ್ಯ ಮಾಡುತ್ತಿದ್ದರು. ಈ ಘಟನೆಗಳು ಉಭಯ ನಾಯಕರ ನಡುವೆ ಬಿರುಕು ಮೂಡಿಸಿವೆ ಎನ್ನಲಾಗಿದೆ.
ಭಾರತ- ಅಮೆರಿಕ ಬದಲಿಗೆ ಇರಾನ್ನಿಂದ ತೈಲವನ್ನು ಆಮದು ಮಾಡಿಕೊಂಡಿತ್ತು. ಬಳಿಕ ರಕ್ಷಣಾ ಕ್ಷೇತ್ರದಲ್ಲಿ ದೇಶಕ್ಕೆ ಬೇಕಾಗಿದ್ದ ಕೆಲವು ಯುದ್ಧದ ಸಾಮಗ್ರಿಗಳನ್ನು ಆಮದು ಮಾಡಿಕೊಂಡಿದ್ದು, ಎರಡು ದೇಶಗಳ ನಡುವಿನ ಬೆಂಕಿಗೆ ತುಪ್ಪ ಸುರಿಯುವಂತಾಯಿತು.
ಈ ಹಿನ್ನೆಲೆಯಲ್ಲಿ ಯುಎಸ್ಎ ಸಕಾರಣ ನೀಡದೆ ಭಾರತ ಮತ್ತು ಅಮೆರಿಕ ಎರಡು ರಾಷ್ಟ್ರಗಳ ನಡುವಿನ ಮಾತುಕತೆಯನ್ನು ಸೆಪ್ಟೆಂಬರ್ 6 ಕ್ಕೆ ಮುಂದೂಡಿತು. ಈ ಬೆನ್ನಲ್ಲೇ ಪ್ರಧಾನಿ ಮೋದಿ ಅವರು ಟ್ರಂಪ್ ಅವರನ್ನು ಗಣರಾಜ್ಯೋತ್ಸವಕ್ಕೆ ಅತಿಥಿಯನ್ನಾಗಿ ಆಮಂತ್ರಿಸಿದ್ದು, ಟ್ರಂಪ್ ಕಡೆಯಿಂದ ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎನ್ನಲಾಗಿದೆ.
Comments are closed.