ಉಡುಪಿ: ಆ ಊರಿನಲ್ಲಿರುವ ಹಿನ್ನೀರ ಹೊಳೆಗೆ ಅಡ್ಡಲಾಗಿ ಒಂದು ಮರದ ಕಾಲು ಸಂಕವಿದೆ. ಯಾವುದೇ ಭದ್ರತೆಯಿಲ್ಲದ ಈ ಸಂಕವು ಈಗಾಗಲೇ ಹಲವರನ್ನು ಹೊಳೆಯತ್ತ ನೂಕಿದೆ. ಕಳೆದ ಎಪ್ಪತ್ತು ವರ್ಷಗಳಿಂದ ಎರಡೂರಿನ ಸಂಪರ್ಕಕ್ಕೆ ಇದುವೇ ಡೆಡ್ಲಿ ಮಾರ್ಗ. ಕೊಂಚ ಯಾಮಾರಿದ್ರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಅಷ್ಟಕ್ಕೂ ಆ ಊರ್‍ಯಾವುದು? ಇಲ್ಲಿನ ಕಾಲು ಸಂಕದ ಸಮಸ್ಯೆಯಿಂದ ಜನರು ಅನುಭವಿಸುತ್ತಿರುವ ಬವಣೆಯ ಕುರಿತ ಒಂದು ಮನಕಲುಕುವ ಸ್ಟೋರಿಯಿಲ್ಲಿದೆ ನೋಡಿ.

ಹೆಜ್ಜೆ ಮೇಲೆ ಹೆಜ್ಜೆ ಇಟ್ಟು ಬರುತ್ತಿರೋ ವೃದ್ಧರು..ಮಗುವನ್ನು ಜಾಗರುಕತೆಯಿಂದ ಎತ್ತಿಕೊಂಡು ಬರುತ್ತಿರೋ ಪೋಷಕರು…ಹಿರಿಯಜ್ಜಿಯನ್ನು ಕೈಹಿಡಿದು ಕರೆತರುತ್ತಿರೋದು ಒಂದೆಡೆ…ಸೈಕಲಿನಲ್ಲಿ ಕಿರು ಸೇತುವೆ ಮೇಲೆ ಸರ್ಕಸ್ ಪಯಣ…ಅಬ್ಬಬ್ಬಾ ತುಂಬಿರೋ ಹೊಳೆಯ ಮೇಲೆ ಇವರ ನಿತ್ಯದ ಬದುಕು ನೆನೆಸಿಕೊಂಡರೆ ಎದೆ ನಡುಕ ಬರುತ್ತೆ. ಉಡುಪಿ ಜಿಲ್ಲೆಯ ಸಾಲಿಗ್ರಾಮ ಪಟ್ಟಣ ಪಂಚಾಯತ್ ವ್ಯಾಪ್ತಿಯ ಒಂದನೇ ವಾರ್ಡ್ ವ್ಯಾಪ್ತಿಯಲ್ಲಿ ಪಾರಂಪಳ್ಳಿ- ಪಡುಕೆರೆ ನಿವಾಸಿಗಳು ನಿತ್ಯ ಬದುಕೋದು ಹೀಗೆ… ಹೇಳಿಕೇಳಿ ಇವರೆಲ್ಲಾ ಕೃಷಿಕರು.. ಜೊತೆಗೆ ಮೀನುಗಾರಿಕೆ ಇವರ ಜೀವನಾಧಾರ. ಸೀತಾನದಿ ಹಾಗೂ ಸ್ವರ್ಣಾನದಿಯ ಸಮುದ್ರ ಸೇರುವ ಮುನ್ನಾ ಸೃಷ್ಟಿಸಿದ ಹಿನ್ನೀರಿನ ಹೊಳೆ ಇಲ್ಲಿನ ಕೃಷಿಕರ ಮೀನುಗಾರರ ಬದುಕನ್ನೇ ಮೂರಾಬಟ್ಟೆಯನ್ನಾಗಿಸಿದೆ. ಎಪ್ಪತ್ತು ಎಂಬತ್ತು ವರ್ಷದಿಂದ ಇದು ಕಾಲು ಸಂಕವೇ ಆಗಿದ್ದು ಮರದ ಕಾಲು ಸಂಕ ಮಾತ್ರ ಶಾಶ್ವತ ಸೇತುವೆ ಭಾಗ್ಯವನ್ನೇ ಕಂಡಿಲ್ಲ.
ಈ ಕಾಲು ಸಂಕದ ಮೇಲೆ ಗದ್ದೆಗಳಿಗೆ ಗೊಬ್ಬರ ಸಾಗಿಸುವವರು, ಶಾಲಾ ಮಕ್ಕಳು, ಕೆಲಸಕ್ಕೆ ತೆರಳುವ ಅದೆಷ್ಟೋ ಮಂದಿ ಈ ಹೊಳೆಗೆ ಬಿದ್ದಿದ್ದಾರೆ. ಆವಾಗೆಲ್ಲಾ ಇಲ್ಲಿನ ಸ್ಥಳೀಯರು ಆಪತ್ಬಾಂದವರಂತೆ ಬಂದು ಬದುಕಿಸಿದ ಜೀವಗಳು ಹಲವು. ಸೇತುವೆಯಲ್ಲಿ ದಾಟಿಸಲಾಗದ ಹೊಳೆ ಎರಡೂ ಬದಿಯಲ್ಲಿ ಭತ್ತದ ಗದ್ದೆ ಇರುವ ಕೃಷಿಕರು ಕೋಣ ಸಾಕುವುದು ಬಿಟ್ಟಿದ್ದಾರೆ. ಮೀನುಗಾರರು ನಸುಕಿನಲ್ಲಿ ಎದ್ದು ಓ..ದೇವರೇ ಎನ್ನುತ್ತಾ ಭಯದಲ್ಲೇ ಕಾಲುಸಂಕ ದಾಟಿ ಕೆಲಸಕ್ಕೆ ಹೋಗುತ್ತಾರೆ. ಶಾಲಾ ಕಾಲೇಜ್ ಅಂಗನವಾಡಿಗೆ ತೆರಳುವ ೭೦ಕ್ಕೂ ಮಿಕ್ಕ ಮಕ್ಕಳು, ವೃದ್ಧರೂ, ಅನಾರೋಗ್ಯ ಪೀಡಿತರು ಸೇರಿ ಒಂದೂವರೆ ಸಾವಿರಕ್ಕೂ ಅಧಿಕ ಮಂದಿ ಕಾಲುಸಂಕವೇ ದಿಕ್ಕು. ಕಾಲುಸಂಕ ಬಿಟ್ಟರೆ ಕೋಟ ಮೂಲಕ ೮ ಕೀಮೀ, ಪಾರಂಪಳ್ಳಿ ಸಾಲಿಗ್ರಾಮ ೫ ಕೀಮಿ ಸುತ್ತುಹಾಕಿ ಊರು ಸೇರಬೇಕಾದ ದುಸ್ತಿತಿ.
ಅಂದಹಾಗೆ ನಿವೃತ್ತ ಬ್ಯಾಂಕ್ ಮೇನೇಜರ್ ಚಂದ್ರಶೇಖರ ನಾವುಡ ಎನ್ನುವವರು ಪಾರಂಪಳ್ಳಿ ಪಡುಕೆರೆ ತೋಡ್ಮಕ್ಕಿ ಕಾಲುಸಂಕ ಸಮಸ್ಯೆ ಕುರಿತು ಪೇಸ್ಬುಕ್ಕಿನಲ್ಲಿ ವೀಡಿಯೋ ಮತ್ತು ಲೇಖನ ಅಪ್ಲೋಡ್ ಮಾಡಿದ್ದು ಇದನ್ನು ಗಮನಿಸಿದ ‘ಕನ್ನಡಿಗ ವರ್ಲ್ಡ್’ ಪ್ರತ್ಯಕ್ಷ ವರದಿಗಾಗಿ ತೆರಳಿದಾಗ ಜನರು ಅವಲತ್ತುಕೊಂಡಿದ್ದು ಹೀಗೆ… ಓಟು ಕೇಳೋದಕ್ಕೆ ಬರೋರು ಇಲ್ಲಿನವರ ಕಾಲಿಗೆ ಬಿದ್ದು ಓಟು ಕೇಳಿದ್ದಾರಂತೆ..ಶಾಶ್ವತ ಸೇತುವೆ ಮಾಡಿಕೊಡುವ ಭರವಸೆಯನ್ನು ನೀಡಿದ್ರಂತೆ….
ಈ ಮೊದಲೆಲ್ಲಾ ಪಡುಕೆರೆಯಿಂದ ಕೋಟ-ಸಾಲಿಗ್ರಾಮಕ್ಕೆ ಬರಬೇಕಿದ್ದರೆ ಐದು ಕಾಲುಸಂಕ ಹಾದು ಹೋಗಬೇಕಿತ್ತು. ಇಂದು ಐದು ಕಾಲು ಸಂಕದಲ್ಲಿ ನಾಲ್ಕು ಸೇತುವೆ ಆಗಿದೆ. ಆದರೆ ಪಾರಂಪಳ್ಳಿ ಬಳಿಯ ತೋಡ್ಕಟ್ಟು ಹೊಳೆ ಮಾತ್ರ ಇನ್ನೂ ಕಾಲುಸಂಕ ಉಳಿಸಿಕೊಂಡಿದೆ. ಸಂಕದ ಎರಡೂ ಕಡೆಯೂ ಉತ್ತಮ ರಸ್ತೆ ಸಂಪರ್ಕವಿದ್ದು ಸೇತುವೆ ಇಲ್ಲದ ಕಾರಣ ಇದ್ದು ಇಲದಂತಾಗಿದೆ. ಪಡುಕೆರೆಯಿಂದ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಅಪಾಯದ ಕಾಲು ಸಂಕದ ಹಿನ್ನೆಲೆ ಸರ್ಕಾರಿ ಶಾಲೆ ತೊರೆದು ದೂರದ ಊರುಗಳ ಖಾಸಗಿ ಶಾಲೆ ಸೇರಿದ್ದಾರೆ. ಕಳೆದ ನಲವತ್ತು ವರ್ಷದಿಂದ ಇದೂವರಗೆ ಹತ್ತಾರು ಬಾರಿ ಲಕ್ಷಾಂತರ ಸುರಿದು ಸೇತುವೆ ದುರಸ್ತಿ ಮಾಡಿದ್ದಾರೆ. ಅದೇ ಹಣ ಇದ್ದಿದ್ದರೆ, ಸುಸಜ್ಜಿತ ಸೇತುವೆ ಮಾಡಬಹುದಿತ್ತು. ಸುಮಾರು ನೂರೈವತ್ತು ಅಡಿ ಉದ್ದ ಎರಡುವರೆ ಅಡಿ ಅಗಲದ ಮರದ ಕಿರುಸೇತುವೆ ಎರಡು ಭಾಗಕ್ಕೆ ಹಿಡಿಯೂ ಇಲ್ಲ. ಕಾಲುಸಂಕದ ಮೂರ್ನಾಲ್ಕು ಕಡೆ ಹಲಗೆ ಕಿತ್ತು ಹೋಗಿದ್ದು, ಕೆಳಭಾಗದ ಪೋಲ್ಸ್ ಶಿಥಿಲಗೊಂಡು ಆಪಾಯಕ್ಕೆ ಆಹ್ವಾನ ನೀಡುತ್ತಿದೆ.
ಒಟ್ಟಿನಲ್ಲಿ ಓಟು ಕೇಳಿ, ಸಮಸ್ಯೆ ಪರಿಹಾರದ ಆಶ್ವಾಸನೆ ನೀಡಿದ ನಮ್ಮ ಜನಪ್ರತಿನಿಧಿಗಳು ಇನ್ನಾದರೂ ಎಚ್ಚೆತ್ತುಕೊಂಡು ಈ ಭಾಗದ ಜನರ ಸಮಸ್ಯೆ ಬಗೆಹರಿಸುವತ್ತ ಪ್ರಾಮಾಣಿಕ ಪ್ರಯತ್ನ ಮಾಡಬೇಕಿದೆ.
ಚಿತ್ರ, ವರದಿ- ಯೋಗೀಶ್ ಕುಂಭಾಸಿ
Comments are closed.