ಕುಂದಾಪುರ: ಕಳೆದ ನಾಲ್ಕು ವರ್ಷಗಳ ಹಿಂದೆ ಕುಂದಾಪುರದ ಖಾರ್ವಿಕೇರಿಯಲ್ಲಿ ನಡೆದ ಮೀನುಗಾರ ಪ್ರಮೋದ್ ಖಾರ್ವಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಹೊರಿಸಲಾದ ಆರೋಪಗಳು ಸಾಭೀತಾಗಿದ್ದು ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 40 ಸಾವಿರ ದಂಡ ವಿಧಿಸಿ ಕುಂದಾಪುರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಪ್ರಕಾಶ ಖಂಡೇರಿ ತೀರ್ಪು ನೀಡಿದ್ದಾರೆ. ಪ್ರಾಸಿಕ್ಯೂಷನ್ ಪರವಾಗಿ ಜಿಲ್ಲಾ ಸರಕಾರಿ ಅಭಿಯೋಜಕ ಪ್ರಕಾಶ್ಚಂದ್ರ ಶೆಟ್ಟಿ ವಾದಿಸಿದ್ದರು.
ಜೀವನ್ (34), ಹರ್ಬಟ್ ಕುಮಾರ್ ಬರೆಟ್ಟೋ (38), ಜೋಸೆಫ್ (47), ರೋಶನ್ ವಿಲ್ಪ್ರೆಡ್ ಬೆರೆಟ್ಟೋ (46) ಎನ್ನುವವರು ಶಿಕ್ಷೆಗೊಳಗಾದವರು. ಸಾಕ್ಷಿ ನಾಶ ಪಡಿಸಿದ್ದಕ್ಕಾಗಿ 3 ವರ್ಷ ಕಠಿಣ ಸಜೆ ಹಾಗೂ ತಲಾ 10 ಸಾವಿರ ದಂಡ ವಿಧಿಸಲಾಗಿದೆ.

(ಪ್ರಮೋದ್ ಖಾರ್ವಿ)
ಕುಂದಾಪುರದ ಖಾರ್ವಿಕೇರಿಯ ನಿವಾಸಿ ಪ್ರಮೋದ್ ಖಾರ್ವಿ ಮೀನುಗಾರಿಕೆ, ಚಿಪ್ಪು ತೆಗೆಯುವ ಕಾಯಕ ಮಾಡಿಕೊಂಡಿದ್ದು 2014 ಅಕ್ಟೋಬರ್ ತಿಂಗಳಿನಲ್ಲಿನಿಗೂಢವಾಗಿ ಸಾವನ್ನಪ್ಪಿದ್ದು ತಾನು ವಾಸಿಸುತ್ತಿದ್ದರು. ತಾನು ಕೆಲಸ ಮಾಡುತ್ತಿದ್ದ ಸ್ಥಳದ ಸಮೀಪ ನಡೆಯುತ್ತಿದ್ದ ಅನೈತಿಕ ಚಟುವಟಿಕೆಗಳ ಬೆನ್ನತ್ತಿದ್ದ ಪ್ರಮೋದನನ್ನು ಕೊಲೆ ಮಾಡಲಾಗಿದೆಯೆಂದು ಕುಟುಂಬದವರು ಹಾಗೂ ಸ್ಥಳೀಯರು ಆರೋಪಿಸಿದ್ದು ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಶವವಿಟ್ಟು ಪ್ರತಿಭಟನೆ ನಡೆಸಿದ್ದರು. ಈ ಪ್ರಕರಣದ ಬಗ್ಗೆ ಪೊಲಿಸರು ತನಿಖೆ ನಡೆಸಿದ್ದು ಅಂದಿನ ಕುಂದಾಪುರ ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್ ಪಿ.ಎಂ. ಚಾರ್ಜ್‌ಶೀಟ್ ಸಲ್ಲಿಸಿದ್ದರು.
ಸುಮಾರು 23 ಮಂದಿ ಸಾಕ್ಷ್ಯಾಧಾರಗಳ ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪಿಗಳು ದೋಷಿಗಳೆಂದು ತೀರ್ಪು ನೀಡಿದೆ.
ಕೊಲೆಯಾದ ಪ್ರಮೋದ್ ಖಾರ್ವಿ ಕೊಲೆಯಾಗುವ ವೇಳೆ ಆರೋಪಿಗಳ ಜೊತೆಯಿದ್ದಿದ್ದು ಆತನನ್ನು ಅಟ್ಟಿಸಿಕೊಂಡು ಹೋದ ಬಗ್ಗೆ ಹಾಗೂ ಹಲ್ಲೆ ನಡೆಸಿದ ಬಗ್ಗೆ ಸಾಕ್ಷಿಗಳಿತ್ತು. ಅಂತೆಯೇ ಮರಣೋತ್ತರ ಪರಿಕ್ಷೆ ವರದಿಯಲ್ಲಿಯೂ ಆತ ಹಲ್ಲೆಗೊಳಗಾಗಿ ಸಾವನ್ನಪ್ಪಿದ್ದರ ಬಗ್ಗೆ ದಾಖಲಾಗಿತ್ತು. ಇದೆರಡೂ ಅಂಶಗಳು ತಾಳೆಯಾದ ಕಾರಣ ಇದೊಂದು ಪೂರ್ವಯೋಜಿತ ಕೊಲೆಯೆಂಬುದು ನ್ಯಾಯಾಲಯದಲ್ಲಿ ಸಾಭೀತಾಗಿದ್ದು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆಯಾಗಿದೆ.
Comments are closed.