
ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿ ವಿರುದ್ಧ ಮಹದಾಯಿ ಅಸ್ತ್ರವನ್ನು ಬಳಸಿಕೊಂಡಿತ್ತು. ಇದೀಗ ಕಾಂಗ್ರೆಸ್ಗೆ ತಿರುಗೇಟು ನೀಡಲು ಮುಂದಾಗಿರುವ ಬಿಜೆಪಿ, ಲೋಕಸಭಾ ಚುನಾವಣೆಯಲ್ಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಅಸ್ತ್ರವನ್ನು ಬಳಸಿಕೊಳ್ಳಲು ಮಾಸ್ಟರ್ ಪ್ಲಾನ್ ಮಾಡಿದೆ.
ಬಿಜೆಪಿಯನ್ನು ಸೋಲಿಸಲು ಪಣತೊಟ್ಟಿದ್ದ ಕಾಂಗ್ರೆಸ್ ರಾಜ್ಯಕ್ಕೆ ಪ್ರತ್ಯೇಕ ಕನ್ನಡ ಬಾವುಟ, ಲಿಂಗಾಯತ ಪ್ರತ್ಯೇಕ ಧರ್ಮ, ಮಹದಾಯಿ ಸೇರಿದಂತೆ ಹಲವು ರೀತಿಯ ಸ್ತ್ರಗಳನ್ನು ಪ್ರಯೋಗಿಸಿತ್ತು. ಇದೀಗ ಅದೇ ಮಾದರಿಯಲ್ಲಿ ಬಿಜೆಪಿಯೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸನ್ನು ಮಕಾಡೆ ಮಲಗಿಸಲು ಪ್ರತ್ಯೇಕ ರಾಜ್ಯದ ಅಸ್ತ್ರವನ್ನು ಬಳಸಲು ಮುಂದಾಗಿದೆ.
ಸಿಎಂ ವಿವಾದಾತ್ಮಕ ಹೇಳಿಕೆಯನ್ನು ಬಳಸಿಕೊಂಡು ಬಿಜೆಪಿ ಪ್ರತ್ಯೇಕ ರಾಜ್ಯದ ಹೋರಾಟಕ್ಕೆ ಸಮ್ಮಿಶ್ರ ಸರ್ಕಾರವೇ ಕಾರಣವೆಂದು ಬಿಂಬಿಸುತ್ತಿದೆ. ಈ ಮೂಲಕ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಕೂಗನ್ನು ಲೋಕಸಭಾ ಚುನಾವಣೆಯವರೆಗೂ ಜೀವಂತವಾಗಿಸಲು ಬಿಜೆಪಿ ನಿರ್ಧರಿಸಿದೆ ಎನ್ನಲಾಗಿದೆ.
ಪ್ರತ್ಯೇಕ ರಾಜ್ಯದ ಹೋರಾಟ ಜೆಡಿಎಸ್ಗಿಂತಲೂ ಕಾಂಗ್ರೆಸ್ಗೆ ಹೆಚ್ಚು ಹೊಡೆತ. ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ಕೂಡಲೇ ಪ್ರತ್ಯೇಕ ರಾಜ್ಯದ ಕೂಗಿಗೆ ಬಿಜೆಪಿ ಜೀವ ತುಂಬಿತು. ಬಹಿರಂಗವಾಗಿ ಅಖಂಡ ಕರ್ನಾಟಕದ ಪರವಾಗಿದ್ದೇವೆ ಎಂದರೂ ಕಮಲ ಪಡೆ ಆಂತರಿಕಾವಗಿ ಪ್ರತ್ಯೆಕ ರಾಜ್ಯದ ಅಸ್ತ್ರವನ್ನು ಕಾಂಗ್ರೆಸ್ ವಿರುದ್ಧ ಬಳಸುತ್ತಿದೆ.
ಜೆಡಿಎಸ್ ಪಕ್ಷ ಹಳೇ ಮೈಸೂರು ಭಾಗದಲ್ಲಿ ಮಾತ್ರ ಅಸ್ತಿತ್ವದಲ್ಲಿದೆ. ಆದರೆ, ಕಾಂಗ್ರೆಸ್ ಶಕ್ರಿ ಕೇಂದ್ರವೇ ಉತ್ತರ ಕರ್ನಾಟಕ. ಜೆಡಿಎಸ್ ಕಾಂಗ್ರೆಸ್ ಮೈತ್ರಿ ಮೂಲಕ ಬಿಜೆಪಿಯನ್ನು ಎದುರಿಸಲು ಮುಂದಾಗಿದೆ. ಈ ಹಿನ್ನಲ್ಲೆಯಲ್ಲಿ ಮಿತ್ರ ಪಕ್ಷಗಳಿಗೆ ಸೆಡ್ಡು ಹೊಡೆಯಲು ತಂತ್ರ ರೂಪಿಸಿರುವ ಬಿಜೆಪಿ, ಪ್ರತ್ಯೇಕ ರಾಜ್ಯದ ಭಾವನಾತ್ಮಕ ವಿಚಾರವನ್ನೇ ಅಸ್ತ್ರವಾಗಿಸಿ ಲೋಕಸಭಾ ಚುನಾವಣೆಯವರೆಗೂ ಜೀವಂತವಾಗಿರಿಸಲು ಮಾಸ್ಟರ್ ಪ್ಲಾನ್ ಮಾಡಿದೆ ಎನ್ನುತ್ತಿವೆ ಮೂಲಗಳು.
Comments are closed.