
ಧಾರವಾಡ: ‘ಕಾಂಗ್ರೆಸ್ ನಲ್ಲಿ ಹೆಣ್ಣುಮಕ್ಕಳಿಗೆ ಗೌರವವಿಲ್ಲ. ಪಕ್ಷದಲ್ಲಿ ಮಹಿಳೆಯರನ್ನು ತುಚ್ಛವಾಗಿ ಕಾಣುತ್ತಾರೆ’ ಎಂದು ಕಾಂಗ್ರೆಸ್ ನಾಯಕಿ ಮೋಟಮ್ಮನವರ ಬಳಿ ಕಾರ್ಯಕರ್ತೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಧಾರವಾಡದ ವಿದ್ಯಾವರ್ಧಕ ಸಂಘದಲ್ಲಿ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ ಆಯೋಜಿಸಿದ್ದ ‘ಚುನಾವಣೆ: ಒಳ ಹೊರಗೆ’ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಮೋಟಮ್ಮ ಅವರಿಗೆ ಕಾಂಗ್ರೆಸ್ ಕಾರ್ಯಕರ್ತೆ ಅನಿತಾ ಗುಂಜಾಳ ತಮ್ಮ ಕಷ್ಟವನ್ನು ಹೇಳಿಕೊಂಡಿದ್ದಾರೆ.
ಪಕ್ಷದಲ್ಲಿ ನಮ್ಮ ನಾಯಕರ ಪರವಾಗಿ ಕೆಲಸ ಮಾಡುವಾಗ ಕೀಳಾಗಿ ನೋಡುತ್ತಾರೆ. ನಮ್ಮ ಕಷ್ಟ ಕೇಳೋರಾರು? ಪಕ್ಷಕ್ಕಾಗಿ ನಾವು ಹಗಲು-ರಾತ್ರಿ ದುಡಿದಿದ್ದೇವೆ. ಮನೆ ಕೆಲಸ ಮಾಡಿ, ಬಳಿಕ ಪಕ್ಷದ ಕೆಲಸವನ್ನೂ ಮಾಡುತ್ತೇವೆ. ಇಷ್ಟಾದರೂ ನಮಗೆ ಪಕ್ಷದಲ್ಲಿ ಗೌರವ, ಸ್ಥಾನಮಾನ ಇಲ್ಲಎಂದು ಅಲವತ್ತುಕೊಂಡಿದ್ದಾರೆ.
ನಾಯಕರಿಗೆ ನಮ್ಮ ನೆನಪಾಗೋದು ಪ್ರಚಾರದ ವೇಳೆಯಷ್ಟೇ. ರಾತ್ರಿ ಹನ್ನೆರಡರವರಗೆ ನಾವು ಪ್ರಚಾರ ಮಾಡಿದ್ದೇವೆ. ಈ ಸಂದರ್ಭದಲ್ಲಿ ನಮಗೆ ಸಾಕಷ್ಟು ಸಮಸ್ಯೆಯಾಗಿವೆ. ಹಿಂದೊಮ್ಮೆ ಸಭೆಗೆ ಹೋದಾಗ ಗಂಡು ಮಕ್ಕಳೇ ತುಂಬಿದ್ದ ಹಾಲ್‌ನಲ್ಲಿ ಪಕ್ಷದ ಮುಖಂಡನೊಬ್ಬ ನನ್ನ ಮೈ ಮುಟ್ಟಿ ತಳ್ಳಿ ಬಳಿಕ ಕ್ಷಮೆ ಕೇಳಿದ್ದ. ಅವತ್ತೇ ನಾನು ಅದನ್ನು ಹೊರಗೆ ಹೇಳಿದ್ರೆ ನಮ್ಮ ಪಕ್ಷದ ಅಭ್ಯರ್ಥಿ ಶಾಸಕರಾಗ್ತಿರಲಿಲ್ಲ. ಆದ್ರೆ ಪಕ್ಷಕ್ಕಾಗಿ ನಾವು ಅದನ್ನೆಲ್ಲ ಸಹಿಸಿಕೊಂಡು ನೋವು ಅನುಭವಿಸಿದ್ದೇವೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಲೀಡರ್ಶಿಪ್ ಸಿಗಲು ಗ್ಲಾಮರ್ ಬೇಕಾ?:
ಪಕ್ಷದಲ್ಲಿ ಲೀಡರ್ಶಿಪ್ ಸಿಗಲು ಮತ್ತು ಗೆದ್ದು ಬರಲು ಗ್ಲಾಮರಸ್ ಆಗಿರಬೇಕು ಎಂದು ಹಿಂದೊಮ್ಮೆ ಯಾರೋ ಹೇಳಿದ್ದರು. ಗ್ಲಾಮರಸ್ ಅಂದರೆ ಏನರ್ಥ? ಗ್ಲಾಮರಸ್ ಇದ್ದವರು ಗೆಲ್ತಾರೆ ಅಂತ ಹೇಳೋದು ಸರೀನಾ? ಆಗ ನಾನು ನಮ್ಮ ಪಕ್ಷವನ್ನು ಬಿಟ್ಟುಕೊಡದೆ ಇಂದಿರಾಗಾಂಧಿ ಗ್ಲಾಮರಸ್ ಆಗಿದ್ದರಾ?, ಕಿತ್ತೂರು ಚೆನ್ನಮ್ಮ, ಒನಕೆ ಓಬವ್ವ ಗ್ಲಾಮರಸ್ ಆಗಿದ್ದರಾ? ಅಂತ ಮರುಪ್ರಶ್ನೆ ಹಾಕಿದ್ದೆ. ಆದರೆ, ಇವತ್ತು ಪಕ್ಷದಲ್ಲಿ ನಮಗೆ ಬೆಂಬಲವೇ ಇಲ್ಲವಾಗಿದೆ. ಪ್ರಚಾರ ಇದ್ದಾಗ ಮಾತ್ರ ಮಹಿಳಾ ನಾಯಕಿಯರು ಬೇಕಾಗುತ್ತಾರೆ. ಪಕ್ಷದಲ್ಲಿ ಮಹಿಳೆಯರಿಗೆ ಗೌರವ ಕೊಡುವ ಕಾಲ ಬರುವುದು ಯಾವಾಗ? ಎಂದು ಮೋಟಮ್ಮಗೆ ಕೈ ಕಾರ್ಯಕರ್ತೆ ಪ್ರಶ್ನೆ ಹಾಕಿದ್ದಾರೆ.
ಮೋಟಮ್ಮ ಪ್ರತಿಕ್ರಿಯೆ:
ಕಾಂಗ್ರೆಸ್ ಕಾರ್ಯಕರ್ತೆಯ ಆರೋಪ ಮತ್ತು ಅಸಮಾಧಾನಕ್ಕೆ ಪ್ರತಿಕ್ರಿಸಿರುವ ಕಾಂಗ್ರೆಸ್ ನಾಯಕಿ ಮೋಟಮ್ಮ, ರಾಜ್ಯಮಟ್ಟದಲ್ಲೂ ಯಾವುದೇ ಕಾರ್ಯಕ್ರಮ ಮಾಡಿದರೂ ವೇದಿಕೆ ಮೇಲೆ ಹೆಣ್ಣು ಮಕ್ಕಳು ಇರೋದೆ ಇಲ್ಲ. ಎಷ್ಟೋ ಸಲ ನಾನು, ರಾಣಿ ಸತೀಶ್, ಬಿಂಬಾ ನಾಯ್ಕರ್, ಮಾರ್ಗರೇಟ್ ಅಳ್ವಾರಂಥಹ ಹಿರಿಯರಿದ್ದರೂ ವೇದಿಕೆ ಮೇಲೆ ಹಿರಿಯ ಪುರುಷ ನಾಯಕರನ್ನೇ ಕೂರಿಸುತ್ತಾರೆ. ಇನ್ನುಮುಂದೆ ಪಕ್ಷದಲ್ಲಿ ಹೆಣ್ಣುಮಕ್ಕಳಿಗೆ ಗೌರವ ಕೊಡದಿದ್ದರೆ ನೀವು ಪ್ರಚಾರಕ್ಕೆ ಹೋಗುವುದನ್ನೇ ನಿಲ್ಲಿಸಿ ಎಂದು ಮಹಿಳೆಯರಿಗೆ ಸಮಾಧಾನ ಮಾಡಿದರು.
Comments are closed.