ಕರ್ನಾಟಕ

ಈವರೆಗೆ ಕಾಣದಿರುವಂಥ ಹೊಸ ಪ್ರಭೇದದ ಐದು ಹಾವು ಪತ್ತೆ

Pinterest LinkedIn Tumblr


ಹೊಸಪೇಟೆ: ನಗರದ ಸುತ್ತಲಿನ ಪ್ರದೇಶದಲ್ಲಿ ಈವರೆಗೆ ಕಾಣದಿರುವಂಥ ಹೊಸ ಪ್ರಭೇದದ ಐದು ಹಾವುಗಳನ್ನು ಉರುಗ ರಕ್ಷಕ ಎಸ್.ಎಂ. ಅಸ್ಲಾಂ ಅವರು 15 ದಿನಗಳಲ್ಲಿ ಪತ್ತೆ ಹಚ್ಚಿದ್ದಾರೆ.

ಹಳದಿ-ಹಸಿರು ಬೆಕ್ಕು ಹಾವು, ಅಡವಿ ಬೆಕ್ಕು ಹಾವು, ಹಳದಿ ಕತ್ತಿನ ತೋಳ ಹಾವು, ಮರಳು ಹಾವು ಹಾಗೂ ಬೋಲಾತಿ ಶೀಘ್ರಗಾಮಿ ಹಾವು ಪತ್ತೆಯಾಗಿವೆ. ಅಡವಿ ಬೆಕ್ಕು ಹಾವು ಚಪ್ಪರದಹಳ್ಳಿಯ ಅಂಬಾಭವಾನಿ ದೇವಸ್ಥಾನದ ಬಳಿ ಪತ್ತೆಯಾಗಿದ್ದು, ಈ ಜಾತಿಯ ಹಾವುಗಳು ರಾತ್ರಿ ಹೊತ್ತು ಮಾತ್ರ ಚಲಿಸುತ್ತವೆ. ಹಗಲಿನಲ್ಲಿ ಗಿಡ, ಮರಗಳಲ್ಲಿ ಇರುತ್ತವೆ. ಹಳದಿ ಕತ್ತಿನ ಹಾವು ಸಂಕ್ಲಾಪುರ ಗ್ರಾಮದಲ್ಲಿ ಪತ್ತೆಯಾಗಿದ್ದು, ನಗರದ ಭಾಗ್ಯೋದಯ ಶೋರೂಂನಲ್ಲಿ ಮರಳು ಹಾವು ಪತ್ತೆಯಾಗಿದೆ. ಇವು ವಿಷಕಾರಿಯಲ್ಲದ ಉರಗಗಳಾಗಿದ್ದು, ಹಲ್ಲಿ, ಇಲಿ ಸೇರಿ ಇತರೆ ಕ್ರಿಮಿಗಳನ್ನು ತಿನ್ನುತ್ತವೆ. ಈಗ ಪತ್ತೆಯಾಗಿರುವ ಹಳದಿ ಹಸಿರು ಬೆಕ್ಕು ಹಾವು ಮತ್ತು ಅಡವಿ ಬೆಕ್ಕು ಹಾವುಗಳು ಮರದ ಹಾವುಗಳು ಮತ್ತು ಇನ್ನುಳಿದವು ನೆಲದ ಹಾವುಗಳು. ಇವುಗಳು ಕಚ್ಚಿದರೆ ಮನುಷ್ಯರು ಸಾಯುವುದಿಲ್ಲ ಎನ್ನುತ್ತಾರೆ ಅಸ್ಲಾಂ.

ಪತ್ತೆಯಾಗಿರುವ ಪೈಕಿ ಅಡವಿ ಬೆಕ್ಕು ಹಾವು ದೊಡ್ಡದು. ಅದು 4.5 ಅಡಿ ಉದ್ದವಿದೆ. ಹಳದಿ ಹಸಿರು ಬಣ್ಣದ ಹಾವು 3.5 ಅಡಿ, ಮರಳು ಹಾವು 2.5 ಅಡಿ, ಹಳದಿ ಕತ್ತಿನ ತೋಳ ಹಾವು ಒಂದೂಕಾಲು ಅಡಿ ಉದ್ದದ ಹಾವುಗಳನ್ನು ಅಸ್ಲಾಂ ಪತ್ತೆ ಹಚ್ಚಿ ಸಂರಕ್ಷಿಸಿದ್ದಾರೆ. ಹಂಪಿ, ತುಂಗಭದ್ರಾ ಜಲಾಶಯ ಸೇರಿ ಇತರೆಡೆ ಇಂಥ ಹೊಸ ಪ್ರಭೇದದ ಹಾವುಗಳು ಸಿಕ್ಕಿವೆ.

ಹೊಸಪೇಟೆ ಸೇರಿ ಸುತ್ತಿನ ಪ್ರದೇಶದಲ್ಲಿ ಈವರೆಗೆ 26 ಪ್ರಭೇದದ ಹಾವುಗಳು ಕಂಡು ಬಂದಿದ್ದು, ಈಗ ಹೊಸ ಜಾತಿಯ 5 ಸೇರಿ ಒಟ್ಟು 31 ಪ್ರಭೇದದ ಹಾವುಗಳಿವೆ. ಪರಿಸರ ಸಮತೋಲನಕ್ಕೆ ಉರಗ ಸೇರಿ ಜೀವ ಸಂಕುಲದ ಸಂರಕ್ಷಣೆ ಅಗತ್ಯ ಎನ್ನುತ್ತಾರೆ ಉರಗ ರಕ್ಷಕ ಅಸ್ಲಾಂ.

ಈ ಹಿಂದೆ ಹಂಪಿ, ತುಂಗಭದ್ರಾ ನದಿ ಪ್ರದೇಶದಲ್ಲಿ ಕರಡಿ, ಚಿರತೆ, ನೀರು ನಾಯಿ ಸೇರಿ ವೈವಿಧ್ಯಮಯ ಪ್ರಾಣಿ, ಪಕ್ಷಿಗಳ ಸಂರಕ್ಷಿಸಿದ್ದು, ಈಗ ಪತ್ತೆ ಹಚ್ಚಿರುವ ಹೊಸ ಪ್ರಭೇದದ 5 ಹಾವುಗಳ ರಕ್ಷಣೆಯೂ ಸೇರಿದಂತಾಗಿದೆ.

ಇದೇ ಮೊದಲ ಬಾರಿಗೆ ಹೊಸಪೇಟೆ ಸುತ್ತಲಿನ ಪ್ರದೇಶದಲ್ಲಿ ಹೊಸ ಪ್ರಭೇದದ 5 ಹಾವುಗಳನ್ನು ಪತ್ತೆಯಾಗಿವೆ. ಈವರೆಗೆ ಇಂಥ ಹಾವುಗಳು ಕಂಡಿರಲಿಲ್ಲ. 2 ವರ್ಷಗಳ ಹಿಂದೆ ಸಂಡೂರಿನ ಅರಣ್ಯದಲ್ಲಿ ಅಲ್ಲಿನ ಉರಗ ರಕ್ಷಕರೊಬ್ಬರು ಅಡವಿ ಬೆಕ್ಕು ಹಾವನ್ನು ಪತ್ತೆ ಹಚ್ಚಿದ್ದರು. ಈಗ ನಮ್ಮ ಭಾಗದಲ್ಲ ಪತ್ತೆಯಾಗಿರುವುದು ವಿಶೇಷ. ಹೊಸ ಜಾತಿಯ ಹಾವುಗಳು ವಿಷಕಾರಿಯಲ್ಲ. ಬೋಲನಾತಿ ಶೀಘ್ರಗಾಮಿ ಹಾವು ವಿಷಕಾರಿ. ಕಾಡು ನಾಶದಿಂದ ಜೀವಸಂಕುಲಕ್ಕೆ ನೆಮ್ಮದಿ ತಾಣ ಇಲ್ಲವಾಗಿರುವುದು ಬೇಸರದ ಸಂಗತಿ.

| ಎಸ್.ಎಂ. ಅಸ್ಲಾಂ ಉರಗ ರಕ್ಷಕ, ಹೊಸಪೇಟೆ

Comments are closed.