ರಾಷ್ಟ್ರೀಯ

ಒನ್‌ ವೇ ಲವರ್‌ ಓರ್ವ ತರುಣಿಯ ಇರಿದು ಕೊಂದು ಆತ್ಮಹತ್ಯೆಗೆ ಯತ್ನ!

Pinterest LinkedIn Tumblr


ನೋಯ್ಡಾ : ಒನ್‌ ವೇ ಲವರ್‌ ಓರ್ವ 18 ವರ್ಷ ಪ್ರಾಯದ ತರುಣಿಯನ್ನು ಇರಿದು ಕೊಂದು ಬಳಿಕ ತನ್ನನ್ನು ತಾನೇ ಇರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ.

ಆರೋಪಿ ಕುಲದೀಪ್‌ ಸಿಂಗ್‌ನನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದ್ದು ಆತನ ಸ್ಥಿತಿ ಗಂಭೀರವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ ಕುಲದೀಪ್‌ ಶುಕ್ರವಾರ ಬೆಳಗ್ಗೆ 11.30ರ ಹೊತ್ತಿಗೆ ಮಾಲ್‌ ಗೆ ಬಂದಿದ್ದ. ಆತ ಏಕಮುಖವಾಗಿ ಪ್ರೀತಿಸುತ್ತಿದ್ದ ತರುಣಿಯು ಮಾಲ್‌ನ ಒಂದು ಶಾಪ್‌ನಲ್ಲಿ ಕೆಲಸ ಮಾಡಿಕೊಂಡಿದ್ದಳು. ಒಂದನೇ ಮಹಡಿಯಲ್ಲಿರುವ ಶೌಚಾಲಯಕ್ಕೆ ತರುಣಿಯು ಹೋಗುತ್ತಿದ್ದಂತೆಯೇ ಆಕೆಯನ್ನು ತನ್ನತ್ತ ಬಲವಂತದಿಂದ ಎಳೆದುಕೊಂಡ ಆರೋಪಿ ಒಡನೆಯೇ ಆಕೆಗೆ ಹಲವು ಬಾರಿ ಚೂರಿಯಿಂದ ಇರಿದ.

ಬಳಿಕ ಅಲ್ಲಿಂದ ಓಡಿ ಹೋಗಲು ಯತ್ನಿಸಿದ ಆತ ಪೊಲೀಸರು ತನ್ನತ್ತ ಬರುವುದನ್ನು ಕಂಡು ಮೇಲಿನ ಮಹಡಿಗೆ ಹೋಗಿ ಅಲ್ಲಿ ತನ್ನನ್ನು ತಾನು ಇರಿದುಕೊಂಡ. ಒಡನೆಯೇ ಆತನನ್ನು ಆಸ್ಪತ್ರೆಗೆ ಒಯ್ಯಲಾಯಿತು. ಆತನ ಸ್ಥಿತಿ ಗಂಭೀರವಿದೆ ಎಂದು ಗೊತ್ತಾಗಿದೆ ಎಂಬುದಾಗಿ ಕಸ್ನಾ ಪೊಲೀಸ್‌ ಠಾಣೆಯ ಅಧಿಕಾರಿ ಶಲೇಂದ್ರ ಪ್ರತಾಪ್‌ ಸಿಂಗ್‌ ಹೇಳಿದರು.

ಆರೋಪಿ ಕುಲದೀಪ್‌ ಈ ಹುಡುಗಿಯನ್ನು ಕಳೆದ ಕೆಲವು ತಿಂಗಳಿಂದ ಹಿಂಬಾಲಿಸಿ ಪೀಡಿಸುತ್ತಿದ್ದ.ಆಕೆಯ ಹೆತ್ತವರು ಆಕೆಗೆ ಮಾಲ್‌ಗೆ ಹೋಗಲು ಬಾಡಿಗೆ ರಿಕ್ಷಾ ಗೊತ್ತುಪಡಿಸಿದ್ದರು. ಈ ತರುಣಿ ತನ್ನ ಮನೆಯವರೊಂದಿಗೆ ದದ್ರಿಯಲ್ಲಿ ವಾಸವಾಗಿದ್ದಳು.

ಆರೋಪಿ ಕುಲದೀಪ್‌ ದದ್ರಿಯ ಗೌತಮ್‌ಪುರಿ ನಿವಾಸಿ ಎಂದು ತಿಳಿದು ಬಂದಿದೆ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.