
ಚೆನ್ನೈ: ಯುವಕನ ತಾಯಿಯ ಆರೋಪದ ಮೇರೆಗೆ ಆಕೆಯ ಪುತ್ರನ ವೈದ್ಯಕೀಯ ಪರೀಕ್ಷೆ ನಡೆಸಲು ಕೇರಳ ಹೈಕೋರ್ಟ್ ಆದೇಶಿಸಿದೆ. ತೃತೀಯ ಲಿಂಗಿಗಳು ತನ್ನ ಪುತ್ರನನ್ನು ಅಕ್ರಮವಾಗಿ ವಶಕ್ಕೆ ಪಡೆದುಕೊಂಡಿದ್ದಾರೆಂದು 25 ವರ್ಷದ ಯುವಕನ ತಾಯಿ ಕೋರ್ಟ್ ಮೊರೆ ಹೋಗಿದ್ದರು. ಅಲ್ಲದೆ, ಅವರ ರೀತಿ ವರ್ತಿಸಲು ತನ್ನ ಪುತ್ರನಿಗೆ ಬಲವಂತಪಡಿಸಲಾಗಿದೆ ಎಂದು ತಾಯಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದರು.
ತನ್ನ ಪುತ್ರನ ಮಾನಸಿಕ ಸ್ಥಿತಿ ಸರಿಯಾಗಿಲ್ಲ. ಅವನಿಗೆ ಸದ್ಯ ಚಿಕಿತ್ಸೆ ನೀಡಲಾಗ್ತಿದೆ. ಆದರೆ, ತೃತೀಯ ಲಿಂಗಿಗಳ ಗ್ಯಾಂಗ್ ತನ್ನ ಪುತ್ರನನ್ನು ಅಕ್ರಮವಾಗಿ ವಶಕ್ಕೆ ಪಡೆದಿದ್ದು, ಅವನನ್ನು ತೃತೀಯ ಲಿಂಗಿಗಳಂತೆಯೇ ವರ್ತಿಸುವ ಹಾಗೆ ಮಾಡುತ್ತಿದ್ದಾರೆಂದು 25 ವರ್ಷದ ಯುವಕನ ತಾಯಿ ಕೇರಳ ಹೈಕೋರ್ಟ್‌ನಲ್ಲಿ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ್ದಾರೆ. ಈ ಹಿನ್ನೆಲೆ ಯುವಕನ ವೈದ್ಯಕೀಯ ಹಾಗೂ ಮಾನಸಿಕ ಪರೀಕ್ಷೆ ನಡೆಸಲು ಹೈಕೋರ್ಟ್ ಆದೇಶಿಸಿದೆ.
ಆದರೆ, ಕೋರ್ಟ್ ಆದೇಶಕ್ಕೆ ಲೈಂಗಿಕ ತಜ್ಙರು ಹಾಗೂ ವೈದ್ಯರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಒಬ್ಬ ವ್ಯಕ್ತಿ ತೃತೀಯ ಲಿಂಗಿಯೋ ಅಲ್ಲವೋ ಎಂಬುದನ್ನು ಪತ್ತೆ ಹಚ್ಚಲು ವೈದ್ಯಕೀಯ ಪರೀಕ್ಷೆಯಾಗಲೀ, ಮಾನಸಿಕ ಸ್ಥಿತಿಯ ಬಗ್ಗೆಯಾಗಲೀ ಸರಿಯಾದ ಪರೀಕ್ಷೆಗಳು ಯಾವುದೇ ಇಲ್ಲ ಎಂದು ತಜ್ಙರು ಅಭಿಪ್ರಾಯ ಪಟ್ಟಿದ್ದಾರೆ. ಒಬ್ಬ ವ್ಯಕ್ತಿ ನೋಡುವುದಕ್ಕೆ ಪುರುಷನೇ ಆಗಿರಬಹುದು. ಅವನ ಜನನಾಂಗಗಳು ಸಹ ಪುರುಷನದೇ ಆಗಿರುತ್ತದೆ. ಆದರೆ, ಆ ವ್ಯಕ್ತಿಗೆ ಮಾತ್ರ ತಾನು ಗಂಡಿನ ದೇಹದಲ್ಲಿರುವ ಹೆಣ್ಣು ಎಂದು ಅನಿಸಿರುತ್ತದೆ. ಅಥವಾ ಗಂಡಾಗಿ ಹುಟ್ಟಿದವ ಹೆಣ್ಣಿನಂತೆ ವರ್ತಿಸುತ್ತಾನೆ. ಇದು ಉಲ್ಟಾ ಕೂಡ ಆಗಬಹುದು ಎಂದು ಡಾ. ರೆಡ್ಡಿ ಎಂಬ ಲೈಂಗಿಕ ತಜ್ಞ ಅಭಿಪ್ರಾಯ ಪಟ್ಟಿದ್ದಾರೆ. ಇನ್ನು, ಕೆಲವರು ತೃತೀಯ ಲಿಂಗಿಗಳಲ್ಲದಿದ್ದರೂ ತಮ್ಮ ಲಿಂಗ ಬದಲಾಯಿಸಿಕೊಳ್ಳಲು ಇಚ್ಛೆ ಪಡುತ್ತಿರುತ್ತಾರೆ. ಇಂತಹವರ ಮಾನಸಿಕ ಸ್ಥಿತಿ ಪರೀಕ್ಷೆಯನ್ನು ಮಾಡಬೇಕಾಗುತ್ತದೆ ಎಂದು ಡಾ. ಉಷಾ ಶಿವರಾಂ ಎಂಬುವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು, ತೃತೀಯ ಲಿಂಗಿಗಳು ತಾವು ಗಂಡೋ ಹೆಣ್ಣೋ ಎಂಬುದನ್ನು ತಾವೇ ಸ್ವತ: ಗುರುತಿಸಿಕೊಳ್ಳಬಹುದು. ಇದಕ್ಕೆ ಯಾವುದೇ ವೈದ್ಯಕೀಯ ಪರೀಕ್ಷೆ
ಅಗತ್ಯವಿಲ್ಲ ಎಂದು 2014ರಲ್ಲಿ ಸುಪ್ರೀಂಕೋರ್ಟ್ ತೀರ್ಪು ನೀಡಿದ್ದು ಗಮನಾರ್ಹ ಎನಿಸಿಕೊಳ್ಳುತ್ತದೆ.
Comments are closed.