
ಬೆಂಗಳೂರು: ನೀಲಿಚಿತ್ರ ತೋರಿಸಿ ತನ್ನ ಪತಿ ಅಸಹಜ ಲೈಂಗಿಕ ಕ್ರಿಯೆಗೆ ಬಲವಂತ ಮಾಡಿದ್ದಾನೆಂದು ಆರೋಪಿಸಿ ಮಹಿಳೆಯೊಬ್ಬರು ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರು ನೀಡಿದ ಕವಿತಾ ಹಾಗೂ ಆರೋಪಿ ಸರವಣ (ಎರಡು ಹೆಸರು ಬದಲಿಸಲಾಗಿದೆ) ನಡುವೆ 2015ರ ನ.30ರಂದು ವಿವಾಹವಾಗಿತ್ತು. ಮದುವೆ ನಂತರ ಪತಿಯ ಕುಟುಂಬ ಸದಸ್ಯರು ವರದಕ್ಷಿಣಿ ಕಿರುಕುಳ ನೀಡಲು ಆರಂಭಿಸಿದರು. ವರದಕ್ಷಿಣೆಗಾಗಿ ಮೆಜೆಸ್ಟಿಕ್‌ನಲ್ಲಿರುವ ನಿನ್ನ ತಂದೆ ಹೆಸರಿನಲ್ಲಿರುವ ಆಸ್ತಿ ಮಾರಿ ಹಣ ತರುವಂತೆ ಪೀಡಿಸುತ್ತಿದ್ದರು. ಹಣ ತರುವವರೆಗೆ ಮನೆ ಕೆಲಸದಾಳು ರೀತಿಯಲ್ಲಿ ದುಡಿಯಬೇಕು ಎಂದು ದೈಹಿಕ ಹಿಂಸೆ ನೀಡಿದ್ದಾರೆ. ಪತಿ ಸರವಣ, ನೀಲಿಚಿತ್ರ ತೋರಿಸಿ ಅದರಂತೆ ಅಸಹಜ ಲೈಂಗಿಕ ಕ್ರಿಯೆಗೆ ಬಲವಂತ ಮಾಡುತ್ತಿದ್ದರು. ಇದಕ್ಕೆ ಒಪ್ಪದೇ ಇದ್ದಾಗ ಹಿಂಸೆ ನೀಡಿದ್ದಾರೆ. ಇದರಿಂದ ನೊಂದು ಆತ್ಮಹತ್ಯೆಗೆ ಯತ್ನಿಸಿದ್ದೆ. ಹನಿಮೂನ್‌ಗೆ ಕರೆದೊಯ್ದಾಗ ಅಲ್ಲಿಯೂ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಕವಿತಾ ಆರೋಪಿಸಿದ್ದಾರೆ.
ಬಳಿಕ ಪತಿ, ಅತ್ತೆ-ಮಾವ ಸೇರಿದಂತೆ ಆತನ ಕುಟುಂಬ ಸದಸ್ಯರು, ಮೂರು ತಿಂಗಳಾದರೂ ಗರ್ಭ ಧರಿಸಿಲ್ಲವೆಂದು ನಿಂದಿಸಿ ಅವಮಾನಕಾರಿಯಾಗಿ ಮಾತನಾಡಿದ್ದಾರೆ. ಲೈಂಗಿಕ ಕ್ರಿಯೆಯ ವಿಡಿಯೋವನ್ನ ಜಾಲತಾಣಗಳಿಗೆ ಹಾಕಿ ಮಾನ ಕಳೆಯುವುದಾಗಿ ತನ್ನ ಪತಿಯೇ ಬೆದರಿಕೆ ಹಾಕಿದ್ದಾನೆ. ಹೀಗೆ, ವರದಕ್ಷಿಣೆ ಮತ್ತು ಲೈಂಗಿಕ ಕಿರುಕುಳ ನೀಡಿದ ಪತಿ ಹಾಗೂ ಆತನ ಕುಟುಂಬ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಫೆ.5ರಂದು ಕವಿತಾ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Comments are closed.