ರಾಷ್ಟ್ರೀಯ

ಮನೆಗಳಿಗೆ 11,000 ವೋಲ್ಟ್‌ ವಿದ್ಯುತ್‌ ಹರಿದು ಟಿ.ವಿ, ಫ್ರಿಡ್ಜ್‌ ಸ್ಫೋಟ: ವಿದ್ಯಾರ್ಥಿ ಸಾವು

Pinterest LinkedIn Tumblr


ಮೀರತ್‌: ಮೀರತ್‌ನ ಇಂಚೋಳಿ ಗ್ರಾಮದಲ್ಲಿ ಭಾನುವಾರ 100ಕ್ಕೂ ಹೆಚ್ಚು ಮನೆಗಳಿಗೆ 11,000 ವೋಲ್ಟ್‌ನ ಅಧಿಕ ಶಕ್ತಿಯ ವಿದ್ಯುತ್‌ ಪ್ರವಹಿಸಿ ಮನೆಗಳಲ್ಲಿನ ಟಿವಿ, ಫ್ರಿಜ್‌ ಇತ್ಯಾದಿ ಉಪಕರಣಗಳು ಸ್ಫೋಟಗೊಂಡಿವೆ. ಅಲ್ಲದೆ ಘಟನೆಯಲ್ಲಿ 20 ವರ್ಷದ ಬಿ.ಇ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಒಂದು ಮನೆ ಸಂಪೂರ್ಣವಾಗಿ ಸುಟ್ಟುಹೋಗಿದೆ.

ವಿದ್ಯುತ್ ಪೂರೈಕೆ ಜಾಲದಲ್ಲಿ ಉಂಟಾದ ತಾಂತ್ರಿಕ ದೋಷವೇ ಈ ದುರಂತಕ್ಕೆ ಕಾರಣವೆನ್ನಲಾಗಿದೆ. ಈ ಘಟನೆಯಿಂದ ಆಕ್ರೋಶಗೊಂಡ ನಾಗರಿಕರು ರಾಷ್ಟ್ರೀಯ ಹೆದ್ದಾರಿ 119ರಲ್ಲಿ ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದರು. ಕೂಡಲೇ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಗ್ರಾಮಸ್ಥರನ್ನು ಸಮಾಧಾನಿಸಿದರು.

ಮೃತಪಟ್ಟ ವಿದ್ಯಾರ್ಥಿಯ ಕುಟುಂಬಕ್ಕೆ 5 ಲಕ್ಷ ರೂ.ಗಳ ಪರಿಹಾರವನ್ನೂ ವಿದ್ಯುತ್‌ ಇಲಾಖೆ ಪ್ರಕಟಿಸಿದೆ. ಘಟನೆಯ ಸಂಪೂರ್ಣ ತನಿಖೆಗೆ ಆದೇಶಿಸಲಾಗಿದೆ.

‘ತಾಂತ್ರಿಕ ದೋಷದಿಂದಾಗಿ ಗೃಹಬಳಕೆ ವಿದ್ಯುತ್‌ ಜಾಲದಲ್ಲಿ 11,000 ವೋಲ್ಟ್‌ ವಿದ್ಯುತ್‌ ಪ್ರವಹಿಸಿದಾಗ ಸುಮಾರು 110 ಮನೆಗಳಲ್ಲಿದ್ದ ಉಪಕರಣಗಳೆಲ್ಲ ಸ್ಫೋಟಿಸಿ ಸುಟ್ಟುಹೋದವು. ಒಬ್ಬ ವ್ಯಕ್ತಿ ಮೃತಪಟ್ಟು ಇತರ ನಾಲ್ವರಿಗೆ ಗಾಯಗಳಾಗಿವೆ. ಒಂದು ಮನೆ ಸುಟ್ಟುಹೋಗಿದೆ’ ಎಂದು ಗ್ರಾಮೀಣ ಎಸ್ಪಿ ರಾಜೇಶ್ ಕುಮಾರ್‌ ತಿಳಿಸಿದರು.

ದ್ವಿತೀಯ ವರ್ಷದ ಬಿ.ಟೆಕ್‌ ವಿದ್ಯಾರ್ಥಿ ಸತ್ಯೇಂದ್ರ ದಾಸ್‌ ತಮ್ಮ ಮೊಬೈಲ್‌ಗೆ ಚಾರ್ಜರ್‌ ಸಿಕ್ಕಿಸುವಾಗ ಕರೆಂಟ್‌ ಪ್ರವಹಿಸಿ ಮೃತಪಟ್ಟಿದ್ದಾರೆ. ಮೂವರು ಮಹಿಳೆಯರು- ಬಿಜ್ಜೂ (50), ಸಾಹಿಬಾ (32), ಅಂಜುಂ (35) ಮತ್ತು ಮೊಹಮ್ಮದ್‌ ಶಾಕಿರ್‌ (38) ಅವರಿಗೆ ಸುಟ್ಟ ಗಾಯಗಳಾಗಿವೆ. ಬಿಜ್ಜೋ ಅವರಿಗೆ ಶೇ 70ರಷ್ಟು ಸುಟ್ಟ ಗಾಯಗಳಾಗಿವೆ. ಉಳಿದವರಿಗೆ ಶೇ 30ರಷ್ಟು ಸುಟ್ಟ ಗಾಯಗಳಾಗಿವೆ. ಶಾತಿರ್ ಅಹ್ಮದ್‌ ಎಂಬವರ ಮನೆಯಲ್ಲಿ ಟಿವಿ ಸ್ಫೋಟಗೊಂಡ ಬಳಿಕ ಇಡೀ ಮನೆಗೆ ಬೆಂಕಿ ಹಬ್ಬಿತು.

‘ಘಟನೆಯ ನಿರ್ದಿಷ್ಟ ಕಾರಣವೇನೆಂಬುದು ಇನ್ನೂ ಗೊತ್ತಾಗಿಲ್ಲ. ತನಿಖೆಗೆ ಆದೇಶಿಸಲಾಗಿದೆ. ಸತ್ಯೇಂದ್ರ ಅವರ ಕುಟುಂಬಕ್ಕೆ 5 ಲಕ್ಷ ರೂ ಪರಿಹಾರ ಘೋಷಿಸಲಾಗಿದೆ. ಗಂಭೀರ ಗಾಯಗೊಂಡ ಮೂವರು ಮಹಿಳೆಯರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಪಶ್ಚಿಮಾಂಚಲ ವಿದ್ಯುತ್‌ ವಿತರಣ ನಿಗಮದ (ಪಿವಿವಿಎನ್‌ಎಲ್‌) ಮುಖ್ಯ ಎಂಜಿನಿಯರ್‌ ಎಸ್‌. ಬಿ ಯಾದವ್‌ ತಿಳಿಸಿದರು.

ದುರಂತದ ಬಳಿಕ ಸ್ಥಳೀಯರು ಮೃತಪಟ್ಟ ವಿದ್ಯಾರ್ಥಿಯ ಶವವನ್ನು ರಾಷ್ಟ್ರೀಯ ಹೆದ್ದಾರಿ 119ರಲ್ಲಿ ಇರಿಸಿ ಹಲವು ಗಂಟೆಗಳ ಕಾಲ ರಸ್ತೆ ತಡೆ ನಡೆಸಿದರು. ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಮುಕೇಶ್‌ ಚಂದ್ರ, ಗ್ರಾಮೀಣ ಎಸ್‌ಪಿ ರಾಜೇಶ್ ಕುಮಾರ್‌ ನೇತೃತ್ವದ ಪೊಲೀಸ್‌ ಪಡೆ ಸ್ಥಳಕ್ಕೆ ಧಾವಿಸಿ ಪ್ರತಿಭಟನಾಕಾರರನ್ನು ಸಮಾಧಾನಪಡಿಸುತ್ತಿದ್ದಾರೆ.

Comments are closed.