
ದೆಹಲಿ: ಕೇಂದ್ರ ತನಿಖಾ ದಳ(ಸಿಬಿಐ) ವಶಕ್ಕೆ ತಮ್ಮ ಮಗ ಸಿಕ್ಕ ಕೆಲ ದಿನಗಳ ಬಳಿಕ ಮಗನೊಂದಿಗೆ ಮಾತನಾಡಿದ ಕೇಂದ್ರದ ಮಾಜಿ ಸಚಿವ ಪಿ ಚಿದಂಬರಮ್ “ನಾನಿದ್ದೇನೆ, ಚಿಂತಿಸಬೇಡ” ಎಂದಿದ್ದಾರೆ.
ಐಎನ್ಎಕ್ಸ್ ಮೀಡಿಯಾದ ಭ್ರಷ್ಟಾಚಾರ ಪ್ರಕರಣದಲ್ಲಿ ಸಿಬಿಐ ಕೋರ್ಟ್ನಲ್ಲಿ ತನಿಖೆ ಎದುರಿಸುತ್ತಿರುವ ಮಗನನ್ನು ಭೇಟಿ ಮಾಡಿದ ಚಿದಂಬರಮ್ ಮೇಲಿನಂತೆ ಹೇಳಿದ್ದಾರೆ.
ಭ್ರಷಷ್ಟಾಚಾರದ ಪ್ರಕರಣದಲ್ಲಿ ಸಿಬಿಐ ಚಿದಂಬರಮ್ರನ್ನು ಪ್ರಶ್ನಿಸಲಿದೆ. ಸಿಬಿಐ ನ್ಯಾಯಾಧೀಶ ಸುನೀಲ್ ರಾಣಾ ಎದುರು ನಡೆದ ವಿಚಾರಣೆಗೆ ಚಿದಂಬರಮ್ ದಂಪತಿ ಸಾಕ್ಷಿಯಾಗಿದ್ದರು. ಕಾರ್ತಿರನ್ನು ಐದು ದಿನಗಳ ಮಟ್ಟಿಗೆ ಸಿಬಿಐ ವಶಕ್ಕೆ ನೀಡುವ ಮುನ್ನ ಮನೆಯಲ್ಲಿ ತಯಾರಿಸಿದ ಆಹಾರ ಕೇಳಿದ ಕಾರ್ತಿ ಕೋರಿಕೆಯನ್ನು ಕೋರ್ಟ್ ತಳ್ಳಿಹಾಕಿದೆ. ಇದೇ ವೇಳೆ ವೈದ್ಯರ ಸೂಚನೆ ಮೇರೆಗೆ ಔಷಧಗಳನ್ನು ಸೇವಿಸಲು ಕಾರ್ತಿಗೆ ಅನುವು ಮಾಡಿಕೊಡಲಾಗಿದೆ.
ಅಕ್ರಮ ಹಣ ಸ್ವೀಕರಿಸಿದ ತಮ್ಮ ಖಾತೆಗಳಿರುವ ವಿದೇಶೀ ಬ್ಯಾಂಕುಗಳಿಗೆ ಕಾರ್ತಿ ಭೇಟಿ ನೀಡಿದ್ದು ಏಕೆ, ಹೇಗೆ, ಯಾವಾಗ ಎಂಬ ಕುರಿತಂತೆ ಬೆಚ್ಚಿ ಬೀಳಿಸುವ ಸಾಕ್ಷಿಗಳು ತಮ್ಮ ಬಳಿ ಇವೆ ಎಂದು ಸಿಬಿಐ ಹೇಳಿದ ಬಳಿಕ ಕಾರ್ತಿಯನ್ನು ಇನ್ನೂ ಐದು ದಿನಗಳ ಮಟ್ಟಿಗೆ ಕಸ್ಟಡಿಯಲ್ಲಿಡಲು ನಿರ್ಧರಿಸಲಾಗಿದೆ.
ಕಾರ್ತಿ ಹಾಗು ಹಲವಾರು ಕಂಪನಿಗಳ ನಡುವೆ ಇದೇ ವಿಚಾರವಾಗಿ ಸಾಕಷ್ಟು ಲಿಂಕ್ಗಳಿರುವುದಾಗಿ ತನಿಖಾ ಸಂಸ್ಥೆ ಹೇಳಿದೆ.
ತನಿಖಾ ಸಂಸ್ಥೆ ಪರ ವಕಾಲತ್ತು ವಹಿಸಿ ಮಾತನಾಡಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ತುಶಾರ್ ಮೆಹ್ತಾ ಇದೇನು ರಾಜಕೀಯ ಸೇಡಿನ ನಡೆಯಲ್ಲ, ಸಂವಿಧಾನದ 21ನೇ ವಿಧಿಯಡಿ ತನಿಖೆಯನ್ನು ನಡೆಸಲಾಗುತ್ತಿದೆ ಎಂದು ಹೇಳಿದ್ದಾರೆ.
ಬುಧವಾರದಂದು ವಿದೇಶದಿಂದ ಮರಳಿದ ಕಾರ್ತಿರನ್ನು ಚೆನ್ನೈ ವಿಮಾನ ನಿಲ್ದಾಣದಲ್ಲಿ ಸಿನಿಮೀಯವಾಗಿ ಬಂಧಿಸಲಾಗಿತ್ತು. ಬಳಿಕ ಕಾರ್ತಿರನ್ನು ಒಂದು ದಿನದ ಮಟ್ಟಿಗೆ ಕಸ್ಟಡಿಯಲ್ಲಿ ಇಡಬೇಕೆಂದು ದೆಹಲಿ ಕೋರ್ಟ್ ಆದೇಶ ನೀಡಿತ್ತು.
ಅಪರಾಧಕ್ಕೆ ಸಂಚು ರೂಪಿಸಿದ್ದ ಆರೋಪದಲ್ಲಿ ಕಾರ್ತಿ ವಿರುದ್ಧ ಎಫ್ಐಆರ್ ಸಲ್ಲಿಸಿದ್ದ ಒಂಬತ್ತು ತಿಂಗಳ ಬಳಿಕ ಅವರನ್ನು ಬಂಧಿಸಲಾಗಿತ್ತು.ವಂಚನೆ, ಅನಧಿಕೃತ ಮೂಲಗಳಿಂದ ಲಂಚ ಸ್ವೀಕಾರ ಹಾಗು ಉದ್ದೇಶಪೂರ್ವಕ ಪ್ರಮಾದವೆಸಗಲು ಸಾರ್ವಜನಿಕ ಅಧಿಕಾರಿಗಳ ಮೇಲೆ ಪ್ರಭಾವ ಬೀರಲು ಪ್ರಚೋದನೆ ನೀಡಿದ್ದ ಆರೋಪದ ಮೇಲೆ ಕಾರ್ತಿ ವಿರುದ್ಧ ಆರೋಪಪಟ್ಟಿ ಸಲ್ಲಿಸಲಾಗಿದೆ.
ಬಂಧನದ ಬಳಿಕ ಕಾರ್ತಿರನ್ನು ದೆಹಲಿಯಲ್ಲಿರುವ ಸಿಬಿಐ ಪ್ರಧಾನ ಕಚೇರಿಗೆ ಕರೆದೊಯ್ಯಲಾಗಿದ್ದು ಅಲ್ಲಿನ ಉಪ ಮ್ಯಾಜಿಸ್ಟ್ರೇಟ್ ಬಳಿ ಕಾರ್ತಿರನ್ನು ಹಾಜರು ಪಡಿಸಲಾಗಿದೆ.
ಶೀನಾ ಬೋರಾ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಪೀಟರ್ ಹಾಗು ಇಂದ್ರಾಣಿ ಮುಖರ್ಜಿ ಒಡೆತನದ ಐಎನ್ಎಕ್ಸ್ ಮೀಡಿಯಾಗೆ ವಿದೇಶೀ ಹೋಡಿಕೆ ಉತ್ತೇಜನ ಮಂಡಳಿಯ ಪರವಾನಿಗೆ ಪಡೆಯಲು 2007ರಲ್ಲಿ ಕಾರ್ತಿ 3.5 ಕೋಟಿ ರುನಷ್ಟು ಹಣ ಪಡೆದಿದ್ದರು ಎಂದು ತಿಳಿದುಬಂದಿದೆ.
ಈ ಸಂಬಂಧ 4.62 ಕೋಟಿ ರುಗಳ ಮೊತ್ತದ ವಿದೇಶೀ ಹೂಡಿಕೆಗೆ ಕ್ಲಿಯರೆನ್ಸ್ ಪಡೆಯಲು ಚಿದಂಬರಮ್ ಅನುಮತಿ ನೀಡಿರುವುದನ್ನು ಎಫ್ಐಆರ್ ನಲ್ಲಿ ಹೇಳಲಾಗಿಲ್ಲ.
ಪದೇ ಪದೇ ವಿದೇಶಕ್ಕೆ ತೆರಳುತ್ತಿದ್ದ ಕಾರ್ತಿ ತನಿಖೆಗೆ ಸಹಕಾರ ನೀಡುತ್ತಿಲ್ಲ ಎಂದು ಉಪ ಮ್ಯಾಜಿಸ್ಟ್ರೇಟ್ ಬಳಿ ದೂರು ನೀಡಿತ್ತು.
Comments are closed.