ಮುಂಬೈ

ಬೇರ್ಪಟ್ಟ ಸಯಾಮಿ ಅವಳಿಗಳಿಗೆ ಈಗ ಐವರು ತಾಯಂದಿರು

Pinterest LinkedIn Tumblr


ಮುಂಬಯಿ: ಐದು ವರ್ಷಗಳ ಹಿಂದೆ ಸಯಾಮಿ ಅವಳಿಗಳಾಗಿದ್ದ ಇಬ್ಬರು ಕಂದಮ್ಮಗಳು ಈಗ ಐವರು ತಾಯಂದಿರ ಆರೈಕೆಯಲ್ಲಿ ಬೆಳೆಯುತ್ತಿದೆ.

ಈ ಕಥೆ ಏನೆಂದು ನೋಡಿ.

ರಿದ್ದಿ ಮತ್ತು ಸಿದ್ದಿ ಎಂಬ ಮಕ್ಕಳು ಐದು ವರ್ಷದ ಹಿಂದೆ ಸಯಾಮಿ ಅವಳಿಗಳಾಗಿದ್ದರು. ಮುಂಬಯಿಯ ವಾಡಿಯಾ ಆಸ್ಪತ್ರೆಯ ವೈದ್ಯರು ಅಪರೂಪದ ಶಸ್ತ್ರ ಚಿಕಿತ್ಸೆ ಮಾಡಿ ಇಬ್ಬರನ್ನೂ ಬೇರ್ಪಡಿಸಿದರು. ಸುಮಾರು 20 ತಜ್ಞರ ವೈದ್ಯರ ತಂಡ 24 ಗಂಟೆಗಳ ಕಾಲ ಆಪರೇಷನ್‌ ಮಾಡಿ ಯಶಸ್ಸು ಪಡೆದಿದ್ದರು. ಮೇ 6, 2013ರಂದು ಸಯಾಮಿ ಅವಳಿಯ ಚಿಕಿತ್ಸೆ ನಡೆಸಲಾಗಿತ್ತು.

ಪನ್ವೇಲ್‌ನ ಒಲ್ವೆ ಗ್ರಾಮದ ಶೋಭಾ ಮತ್ತು ಅರುಣ್‌ ಎಂಬ ದಂಪತಿಯ ಪುತ್ರಿಯರಾಗಿ ಇಬ್ಬರೂ ಜನಿಸಿದ್ದರು. ಈ ಸಯಾಮಿ ಅವಳಿಗಳು ದೇವರು ಕೊಟ್ಟ ಶಾಪ ಎಂದು ಇವರನ್ನು ಬಲಿ ಕೊಡಲು ದಂಪತಿ ನಿರ್ಧರಿಸಿದ್ದರು.

ಆದರೆ ಸ್ವಯಂ ಸೇವಾ ಸಂಸ್ಥೆಯೊಂದು ಮಧ್ಯ ಪ್ರವೇಶಿಸಿ ಸಯಾಮಿ ಅವಳಿಗಳನ್ನು ಬೇರ್ಪಡಿಸುವ ಶಸ್ತ್ರಚಿಕಿತ್ಸೆಗೆ ಅನುವು ಮಾಡಿಕೊಟ್ಟರು. ಈ ಸಯಾಮಿ ಅವಳಿಗಳಿಗೆ ಒಂದೇ ಗರ್ಭಕೋಶ, ಒಂದೇ ಮೂತ್ರಕೋಶ ಇದ್ದು ಇದು ತೀರಾ ಅಪರೂಪದಲ್ಲಿ ಅಪರೂಪ ಎಂದು ವೈದ್ಯರು ತಿಳಿಸಿದ್ದರು.

ಈ ಆಪರೇಷನ್‌ ನಂತರ ರಿದ್ದಿ-ಸಿದ್ದಿಯನ್ನು 72 ಗಂಟೆಗಳ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು.

ಕೆಲವು ದಿನಗಳ ನಂತರ ಈ ಮಕ್ಕಳನ್ನು ಬಿಟ್ಟು ಶೋಭಾ-ಅರುಣ್‌ ದಂಪತಿ ಪರಾರಿಯಾದರು. ಪನ್ವೇಲ್‌ನ ತಮ್ಮ ಮನೆಯನ್ನು ಬಿಟ್ಟು ಎಲ್ಲೋ ಹೋದರು.

ಅಂದಿನಿಂದ ಇಂದಿನವರೆಗೂ ರಿದ್ದಿ-ಸಿದ್ದಿಯನ್ನು ಆಸ್ಪತ್ರೆಯ ನರ್ಸ್‌ಗಳೇ ಆರೈಕೆ ಮಾಡುತ್ತಿದ್ದಾರೆ.

ಆ ನಂತರ ವೈದ್ಯರೇ ವಾಡಿಯಾ ಆಸ್ಪತ್ರೆಯ ಎರಡನೇ ಮಹಡಿಯಲ್ಲಿ ವಿಶೇಷ ಕೋಣೆ ಮಾಡಿಕೊಟ್ಟಿದ್ದಾರೆ. ಅಲ್ಲಿಯೇ ಇವರಿಗೆ ಎಲ್ಲ ಸೌಲಭ್ಯ ಒದಗಿಸಲಾಗಿದೆ.

ಈ ಇಬ್ಬರೂ ಆಸ್ಪತ್ರೆಗೆ ಬಂದ ದಿನವನ್ನೇ ನರ್ಸ್‌ಗಳು ಜನ್ಮದಿನ ಎಂದು ಪರಿಗಣಿಸಿದ್ದಾರೆ. ಈಗ ಐದನೇ ಜನ್ಮದಿನ ಆಚರಿಸಲು ಸಜ್ಜಾಗುತ್ತಿದ್ದಾರೆ.

ಇತ್ತೀಚೆಗೆ ಈ ಮಕ್ಕಳನ್ನು ನಿಮ್ಮ ಅಮ್ಮ ಯಾರು ಎಂದು ಕೇಳಿದಾಗ ಚೋಟಿ ಮಾಮಾ, ಬಡಿ ಮಾಮಾ, ಮೀನಾ ಮಾಮ, ಹೆಲೆನ್‌ ಮಾಮ, ಮಿನ್ನಿ ಮಾಮ ಎಂದು ಜೋರಾಗಿ ಹೇಳುತ್ತಾರೆ.

ಇದನ್ನು ಕೇಳಿ ಈ ಐವರಿಗೂ ಕಣ್ಣೀರು ಬಂದಿದೆ. ಈ ಮಕ್ಕಳನ್ನು ಎಲ್ಲಿಯೂ ಹೋಗಲು ಬಿಡುವುದಿಲ್ಲ. ನಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತೇವೆ ಎಂದು ಈ ಐವರು ಅಮ್ಮಂದಿರು ಸಂಕಲ್ಪ ತೊಟ್ಟಿದ್ದಾರೆ.

ಬೆಳಗ್ಗೆ ಎದ್ದ ಕೂಡಲೇ ಸ್ನಾನ ಮಾಡಿಸಿದ ನಂತರ ಫಿಸಿಯೋಥೆರಪಿ ಮಾಡಿಸಿ ತಿಂಡಿ ತಿನ್ನಿಸಿ ಸಮೀಪದಲ್ಲೇ ಇರುವ ಶಾಲೆಗೆ ಬಿಟ್ಟು ಬರಲಾಗುತ್ತದೆ. ನಂತರ ಮಧ್ಯಾಹ್ನ ಮತ್ತೊಬ್ಬರು ಇಬ್ಬರನ್ನೂ ಕರೆದುಕೊಂಡು ಬಂದು ಆರೈರೆ ಮಾಡುತ್ತಾರೆ. ಕಳೆದ ಐದು ವರ್ಷದಿಂದಲೂ ಇದೇ ರೀತಿ ಸಾಗುತ್ತಿದೆ ಎಂದು ಆಸ್ಪತ್ರೆ ವೈದ್ಯರಾದ ಡಾ. ಬೋಧನ್‌ವಾಲಾ ತಿಳಿಸಿದ್ದಾರೆ.

ರಿದ್ದಿ-ಸಿದ್ದಿ ಇಬ್ಬರೂ ಈಗ ಆರೋಗ್ಯವಾಗಿದ್ದಾರೆ. ಮುಂದಿನ ದಿನಗಳಲ್ಲಿ ಒಂದೆರಡು ಸಣ್ಣ ಶಸ್ತ್ರ ಚಿಕಿತ್ಸೆ ಅಗತ್ಯವಿದೆ. ಅದಾದ ನಂತರ ಇಬ್ಬರೂ ಆರೋಗ್ಯವಾಗಿರಲಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಇಬ್ಬರನ್ನೂ ನಮ್ಮ ಸ್ವಂತ ಮಕ್ಕಳಂತೆ ನೋಡಿಕೊಳ್ಳುತ್ತೇವೆ ಎಂದು ಹೇಳಿರುವ ನರ್ಸ್‌ಗಳು ಹಾಗೂ ವೈದ್ಯರು 18 ವರ್ಷದವರೆಗೂ ಇಲ್ಲಿಯೇ ಆರೈಕೆ ಮಾಡುತ್ತೇವೆ. ಆ ನಂತರ ಅವರು ನಿರ್ಧಾರ ಕೈಗೊಳ್ಳಬಹುದು ಎಂದು ತಿಳಿಸಿದ್ದಾರೆ.

Comments are closed.