ಮನೋರಂಜನೆ

ಪುನೀತ್‌ ಹೊಸ ಚಿತ್ರ ಶುರುವಾಯಿತು

Pinterest LinkedIn Tumblr


ಪುನೀತ್‌ ರಾಜಕುಮಾರ್‌ ಅವರ ಯಾವ ಚಿತ್ರ ಮೊದಲು ಆರಂಭವಾಗುತ್ತದೆ ಎಂಬ ಗೊಂದಲಕ್ಕೆ ತೆರೆಬಿದ್ದಿದ್ದು, ರಾಕ್‌ಲೈನ್‌ ನಿರ್ಮಾಣದಲ್ಲಿ ಅವರು ನಟಿಸಲಿರುವುದು ನಿಮಗೆ ಗೊತ್ತೇ ಇದೆ. ರಾಕ್‌ಲೈನ್‌ ವೆಂಕಟೇಶ್‌ ನಿರ್ಮಾಣದ ಸಿನಿಮಾವನ್ನು ಪವನ್‌ ಒಡೆಯರ್‌ ನಿರ್ದೇಶನ ಮಾಡುತ್ತಿದ್ದಾರೆ. ಚಿತ್ರದ ಮುಹೂರ್ತ ಸೋಮವಾರ ರಾಕ್‌ಲೈನ್‌ ಸ್ಟುಡಿಯೋದಲ್ಲಿ ನಡೆಯಿತು. ಮಾರ್ಚ್‌ 8ರಿಂದ ಚಿತ್ರೀಕರಣ ಆರಂಭವಾಗಲಿದೆ.

ಚಿತ್ರಕ್ಕೆ ನಾಯಕಿ ಹಾಗೂ ಟೈಟಲ್‌ ಇನ್ನಷ್ಟೇ ಅಂತಿಮವಾಗಬೇಕಿದೆ. ಈ ಚಿತ್ರ ರಾಕ್‌ಲೈನ್‌ ಎಂಟರ್‌ಟೈನ್‌ಮೆಂಟ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿರುವ 9ನೇ ಸಿನಿಮಾ. ನಿರ್ದೇಶಕ ಪವನ್‌ ಒಡೆಯರ್‌ ಹೇಳುವಂತೆ, ಇದೊಂದು ಔಟ್‌ ಅಂಡ್‌ ಔಟ್‌ ಫ್ಯಾಮಿಲಿ ಎಂಟರ್‌ಟೈನರ್‌. “ಕಥೆಯೇ ತುಂಬಾ ಮಜಾವಾಗಿದೆ. ಪುನೀತ್‌ ಅವರಿಂದ ಅಭಿಮಾನಿಗಳು, ಫ್ಯಾಮಿಲಿ ಆಡಿಯನ್ಸ್‌ ಏನು ಬಯಸುತ್ತಾರೋ ಆ ಎಲ್ಲಾ ಅಂಶಗಳು ಈ ಸಿನಿಮಾದಲ್ಲಿವೆ’ ಎನ್ನುವುದು ಪವನ್‌ ಒಡೆಯರ್‌ ಮಾತು.

ಚಿತ್ರದಲ್ಲಿ ರವಿಶಂಕರ್‌, ಚಿಕ್ಕಣ್ಣ, ಅಚ್ಯುತ್‌ ಕುಮಾರ್‌ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಇನ್ನು ಚಿತ್ರದಲ್ಲಿ ಹಿರಿಯ ನಟಿ ಬಿ.ಸರೋಜಾದೇವಿ ಕೂಡಾ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ತುಂಬಾ ವರ್ಷಗಳ ನಂತರ ಅವರು ಸಿನಿಮಾದಲ್ಲಿ ನಟಿಸುತ್ತಿದ್ದು, ಈ ಚಿತ್ರದಲ್ಲಿ ಅವರ ಪಾತ್ರ ಕೂಡಾ ಪ್ರಮುಖವಾಗಿದೆಯಂತೆ. ಚಿತ್ರಕ್ಕೆ ಡಿ ಇಮಾನ್‌ ಸಂಗೀತ ನೀಡುತ್ತಿದ್ದು, ವೈದಿ ಛಾಯಾಗ್ರಹಣವಿದೆ.

ಈ ಹಿಂದೆ ಪವನ್‌ ಒಡೆಯರ್‌ ಅವರ “ಗೂಗ್ಲಿ’ ಹಾಗೂ “ರಣವಿಕ್ರಮ’ ಚಿತ್ರಗಳಿಗೂ ವೈದಿ ಛಾಯಾಗ್ರಹಣವಿತ್ತು. ಈಗ ಮತ್ತೆ ಜೊತೆಯಾಗಿದ್ದಾರೆ. ಬೆಂಗಳೂರು, ಮೈಸೂರು ಹಾಗೂ ಬಳ್ಳಾರಿಯಲ್ಲಿ ಚಿತ್ರೀಕರಣ ನಡೆಯಲಿದೆ. ಈ ಹಿಂದೆ “ರಣವಿಕ್ರಮ’ ಚಿತ್ರದ ಬಹುತೇಕ ಚಿತ್ರೀಕರಣ ಕೂಡಾ ಬಳ್ಳಾರಿ ಸುತ್ತಮುತ್ತ ನಡೆದಿತ್ತು. ಈಗ ಈ ಚಿತ್ರ ಕೂಡಾ ಬಳ್ಳಾರಿಯಲ್ಲಿ ನಡೆಯಲಿದೆ. “ಚಿತ್ರದ ಕಥೆಗೆ ಆ ಲೊಕೇಶನ್‌ ಕೂಡಾ ಬೇಕಾಗುತ್ತದೆ. ಆ ಕಾರಣದಿಂದ ಮತ್ತೆ ಅಲ್ಲಿಗೆ ಹೋಗುತ್ತಿದ್ದೇವೆ’ ಎನ್ನುವುದು ಪವನ್‌ ಮಾತು.

-ಉದಯವಾಣಿ

Comments are closed.