ಕರಾವಳಿ

ಪಣಂಬೂರು ಹೆದ್ದಾರಿಯಲ್ಲಿ ದರೋಡೆಗೆ ಸಂಚು :ಕುಖ್ಯಾತ ರೌಡಿ ಪ್ರದೀಪ್ ಮೆಂಡನ್ ಸಹಿತಾ ಮೂವರ ಸೆರೆ

Pinterest LinkedIn Tumblr

ಮಂಗಳೂರು, ಫೆಬ್ರವರಿ 17: ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ದರೋಡೆಗೆ ಸಂಚು ನಡೆಸುತ್ತಿದ್ದ ಆರೋಪದ ಮೇಲೆ ಕುಖ್ಯಾತ ರೌಡಿ ಪ್ರದೀಪ್ ಮೆಂಡನ್ ಸಹಿತಾ ಮೂವರು ಆರೋಪಿಗಳನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ.

ಪಣಂಬೂರು ಕುದುರೆಮುಖ ಜಂಕ್ಷನ್ ಬಳಿ ಹೆದ್ದಾರಿಯಲ್ಲಿ ಸಾಗುವ ವಾಹನಗಳನ್ನು ತಡೆದು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಸಿ, ಹಣ ಹಾಗೂ ಚಿನ್ನಾಭರಣ ದರೋಡೆಗೆ ಸಂಚು ರೂಪಿಸುತ್ತಿದ್ದ ಕುಖ್ಯಾತ ರೌಡಿ ಉಡುಪಿ ಅಂಬಲಪಾಡಿಯ ಪ್ರದೀಪ್ ಕುಮಾರ್ ಯಾನೆ ಪ್ರದೀಪ್ ಮೆಂಡನ್ (47), ಕುದ್ರೋಳಿ ಬೆಂಗ್ರೆಯ ಸುನೀಲ್ (20), ಬೋಳಾರದ ಚರಣ್ ಶೇಟ್ (32) ಎಂಬವರನ್ನು ಶುಕ್ರವಾರ ಮುಂಜಾನೆ ಬಂಧಿಸಲಾಗಿದೆ. ಬಂಧಿತರಿಂದ ತಲವಾರು, ಮೆಣಸಿನ ಹುಡಿ, ರೋಪ್ ಹಾಗೂ ಆರೋಪಿಗಳು ಬಂದಿದ್ದ ಹೊಂಡಾ ಯಾಕ್ಟೀವ್ ದ್ವಿಚಕ್ರ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿ ಮೇರೆಗೆ ಪಣಂಬೂರು ಪೊಲೀಸರು ನಡೆಸಿದ ದಾಳಿ ಕಾರ್ಯಾಚರಣೆ ವೇಳೆ ಬಂಧಿತ ಆರೋಪಿಗಳೊಂದಿಗಿದ್ದ ಇನ್ನಿಬ್ಬರು ಆರೋಪಿಗಳಾದ ಭರತ್ ಮತ್ತು ನವೀನ್ ಎಂಬವರು ತಪ್ಪಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಣ್ಣೀರುಬಾವಿಯಲ್ಲಿ ಇತ್ತೀಚೆಗೆ ನಡೆದ ಭರತೇಶ್ ಅಣ್ಣ ಶಿವರಾಜ್ ನನ್ನು ಅನೀಶ್ ಹಾಗೂ ಸಹಚರರು ಕೊಲೆ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಅನೀಶ್ ಕಡೆಯವರನ್ನು ಕೊಲೆ ಮಾಡಿದ ಬಳಿಕ ಹೊರ ರಾಜ್ಯಕ್ಕೆ ಪರಾರಿಯಾಗಲು ಸಂಚು ರೂಪಿಸಿದ್ದು, ಅದಕ್ಕಾಗಿ ಹಣದ ಅವಶ್ಯಕತೆ ಇದ್ದುದರಿಂದ ಹೆದ್ದಾರಿ ದರೋಡೆ ನಡೆಸಲು ನಿಂತಿರುವುದಾಗಿ ವಿಚಾರಣೆ ವೇಳೆ ಆರೋಪಿಗಳು ಬಾಯಿ ಬಿಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪಣಂಬೂರು ಗ್ರಾಮದ ಕುದ್ರೆಮುಖ ಜಂಕ್ಷನ್ ಹತ್ತಿರ ರಾಷ್ಟ್ರೀಯ ಹೆದ್ದಾರಿಯಿಂದ ತಣ್ಣಿರುಬಾವಿ ಕಡೆಗೆ ಹಾದು ಹೋಗುವ ರಸ್ತೆಯ ಎಡ ಬದಿಯ ಮೋರಿಯ ಬಳಿ ಸುಮಾರು 4-5 ಜನ ಯುವಕರು ಮೋಟಾರು ಸೈಕಲ್ ನಲ್ಲಿ ಬಂದು ರಾಷ್ಟ್ರೀಯ ಹೆದ್ದಾರಿಯಲ್ಲಿ ಹಾದು ಹೋಗುವ ವಾಹನಗಳನ್ನು ತಡೆದು ನಿಲ್ಲಿಸಿ ಚಾಲಕರನ್ನ ಮತ್ತು ಪ್ರಯಾಣಿಕರನ್ನ ಮಾರಕಾಯುಧ ತಲುವಾರುಗಳನ್ನು ತೋರಿಸಿ ಬೆದರಿಸಿ ದರೋಡೆ ಮಾಡಲು ಯತ್ನಿಸುತ್ತಿರುವುದಾಗಿ ಬೆಳಗ್ಗಿನ ಜಾವ 3.30ಕ್ಕೆ ಪಿ.ಎಸ್.ಐ ಉಮೇಶ್ ಕುಮಾರ್ ರವರಿಗೆ ಲಭಿಸಿದ ಖಚಿತ ಮಾಹಿತಿ ಮೇರೆಗೆ 4.10ಕ್ಕೆ ಪಿಎಸ್‌ಐ ಉಮೇಶ್ ಕುಮಾರ್, ಪಣಂಬೂರು ಠಾಣೆ ಸಿಬ್ಬಂದಿ ಹಾಗೂ ಮಂಗಳೂರು ಉತ್ತರ ವಿಭಾಗ ರೌಡಿ ನಿಗ್ರಹ ದಳದ ಸಿಬ್ಬಂದಿಗಳನ್ನೊಳಗೊಂಡ ತಂಡ ಕಾರ್ಯಾಚರಣೆ ನಡೆಸಿದಾಗ ಐವರು ಆರೋಪಿಗಳು ದ್ವಿಚಕ್ರ ವಾಹನದೊಂದಿಗೆ ದುಷ್ಕೃತ್ಯ ನಡೆಸಲು ನಿಂತಿರುವುದು ಗಮನಕ್ಕೆ ಬಂದಿದೆ. ಪೊಲೀಸರನ್ನು ಕಂಡಾಗ ಆರೋಪಿಗಳು ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಈ ಸಂದರ್ಭ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Comments are closed.