ಕರಾವಳಿ

ಬಿ. ಜನಾರ್ದನ ಪೂಜಾರಿಯವರ ಆತ್ಮಕಥೆ ‘ಸಾಲಮೇಳದ ಸಂಗ್ರಾಮ’ ಲೋಕಾರ್ಪಣೆ : ಸಾವಿರ ಪುಸ್ತಕಗಳು ಕ್ಷಣದಲ್ಲಿ ಮಾರಾಟ

Pinterest LinkedIn Tumblr

ಮಂಗಳೂರು: ಮಾಜಿ ಕೇಂದ್ರ ಸಚಿವ ಹಾಗೂ ಹಿರಿಯ ಕಾಂಗ್ರೆಸ್ ಮುಖಂಡ, ಕುದ್ರೋಳಿ ಶ್ರೀ ಕ್ಷೇತ್ರದ ನವೀಕರಣ ಹಾಗೂ ಮಂಗಳೂರು ದಸರಾ ರೂವಾರಿ ಬಿ. ಜನಾರ್ದನ ಪೂಜಾರಿಯವರ ಆತ್ಮಕಥೆ ‘ಸಾಲಮೇಳದ ಸಂಗ್ರಾಮ’ ಪುಸ್ತಕದ ಬಿಡುಗಡೆ ಸಮಾರಂಭ ಶುಕ್ರವಾರ ಕುದ್ರೋಳಿ ಶ್ರೀ ಗೋಕರ್ಣನಾಥನ ದೇವಸ್ಥಾನದ ಸಂತೋಷಿ ಕಲಾ ಮಂಟಪದಲ್ಲಿ ಜರಗಿತು.

ಸ್ವತಃ ಪೂಜಾರಿಯವರೇ ತಮ್ಮ ಆತ್ಮಕಥೆಯನ್ನು ಲೋಕಾರ್ಪಣೆ ಮಾಡಿದರು. ಬಿಡುಗಡೆಗೂ ಮುನ್ನ ಪುಸ್ತಕವನ್ನು ದೇವರ ಸನ್ನಿಧಿ ಮುಂದಿಟ್ಟು ತೀರ್ಥ ಪ್ರೋಕ್ಷಣೆ ಮಾಡಿ ಬಳಿಕ ಪುಸ್ತಕವನ್ನು ತಲೆ ಮೇಲಿಟ್ಟು ದೇವಾಲಯಕ್ಕೆ ಒಂದು ಸುತ್ತು ಪ್ರದರ್ಶನ ಮಾಡಿದ ಬಳಿಕ ಬಿಡುಗಡೆಗೊಳಿಸಿದರು.

ಬಳಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪೂಜಾರಿಯವರು, ಆತ್ಮಕಥೆಯಲ್ಲಿ ಹಲವಾರು ವಿಷಯಗಳಿವೆ. ನನ್ನ ಬದುಕಿನ ಏರಿಳಿತವನ್ನು ಆತ್ಮಕಥೆಯಲ್ಲಿ ದಾಖಲಿಸಿದ್ದೇನೆ. ನನ್ನ ಬದುಕಿನ ಕುರಿತು ಎಲ್ಲವನ್ನೂ ಈ ಆತ್ಮಕಥೆಯೇ ಮಾತನಾಡುತ್ತದೆ. ನನ್ನ ಚರಿತ್ರೆ ಭೂಗತವಾಗಿ ಹೋಗಬಾರದು ಎಲ್ಲರಿಗೂ ತಿಳಿಯಬೇಕು, ನನ್ನ ಬದುಕಿನ ಏರಿಳಿತಗಳನ್ನು ಆತ್ಮಕಥೆಯಲ್ಲಿ ದಾಖಲಿಸಿದ್ದೇನೆ. ಪುಸ್ತಕವೇ ನನ್ನ ಬಗ್ಗೆ ಜನತೆಗೆ ತಿಳಿಸಲಿದೆ ಎಂದು ಹೇಳಿದರು.

ಪುಸ್ತಕ ಗೋಡೌನ್ ಸೇರಬಾರದು ಆದರೆ ಎಲ್ಲರೂ ಕೊಂಡು ಓದಬೇಕು, ಪುಸ್ತಕದ ಬೆಲೆಯನ್ನು ಮುಖಬೆಲೆಗಿಂತ ಕಡಿಮೆಯಲ್ಲಿ ವಿತರಿಸುವುದಾಗಿ ತಿಳಿಸಿ ಬಿಡುಗಡೆಯ ದಿನ 300 ರೂ. ಮುಖ ಬೆಲೆಯ ಪುಸ್ತವನ್ನು 50 ರೂ.ಗೆ ಕೊಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಕೃತಿಯನ್ನು ಸಿದ್ಧಪಡಿಸಲು ನೆರವಾದ ಪತ್ರಕರ್ತ ಲಕ್ಷ್ಮಣ ಕೊಡಸೆ, ಹರಿಕೃಷ್ಣ ಬಂಟ್ವಾಳ ಸಹಿತ ಪೂಜಾರಿಯವರು ತಮ್ಮ ಒಡನಾಡಿಗಳನ್ನು ಸನ್ಮಾನಿಸಿದರು.

ಪುಸ್ತಕದಲ್ಲಿ ಹಿರಿಯ ಪತ್ರಕರ್ತ ಲಕ್ಷ್ಮಣ ಕೊಡಸೆ ಜನಾರ್ದನ ಪೂಜಾರಿಯವರ ಮಾತುಗಳನ್ನು ದಾಖಲಿಸಿದ್ದಾರೆ. ಪೂಜಾರಿ ಪುತ್ರರಾದ ಸಂತೋಷ್ ಪೂಜಾರಿ ಮತ್ತು ದೀಪಕ್ ಪುಜಾರಿ ಈ ಪುಸ್ತಕದ ಪ್ರಕಾಶಕರಾಗಿದ್ದಾರೆ. 210 ಪುಟಗಳ ಆತ್ಮಕಥೆಯಲ್ಲಿ ಒಟ್ಟು ವರ್ಣರಂಜಿತ 210 ಪುಟಗಳಿವೆ. 11 ಅಧ್ಯಾಗಳಿವೆ. ಪುಸ್ತಕದ ಬೆಲೆ 300 ರೂ. ಆದರೆ ಇಂದು 50 ರೂ.ಗೆ ನೀಡಲಾಯಿತು. ಪುಸ್ತಕ ಬಿಡುಗಡೆಯಾಗುತ್ತಿದ್ದಂತೆ ತಂದಿದ್ದ ಸಾವಿರ ಪುಸ್ತಕಗಳು ತಕ್ಷಣ ಮಾರಾಟವಾದವು. ಸೇರಿದ್ದ ನೂರಾರು ಮಂದಿಗೆ ಪುಸ್ತಕ ದೊರೆಯಲಿಲ್ಲ. ಶಿವರಾತ್ರಿ ವೇಳೆಗೆ ಇನ್ನಷ್ಟು ಪುಸ್ತಕ ಮುದ್ರಿಸಿ ಎಲ್ಲರಿಗೂ ದೊರೆಯುವಂತೆ ಮಾಡಲಾಗುವುದು ಎಂದು ಪೂಜಾರಿ ತಿಳಿಸಿದರು

ಪುಸ್ತಕದಲ್ಲಿ ತಮ್ಮ ಬಾಲ್ಯದಲ್ಲಿ ಸ್ಫೂರ್ತಿ ನೀಡಿದ ಬಾಬು ಮಾಸ್ಟರ್ ರ ಪ್ರಸ್ತಾಪ, ಇಂದಿರಾ ಗಾಂಧಿಯವರು ಕೈಗೊಂಡ ಬ್ಯಾಂಕ್ ರಾಷ್ಟ್ರೀಕರಣದಂತಹ ದಿಟ್ಟ ನಿಲುವುಗಳ ಬಗ್ಗೆ ವಕೀಲರ ಮುಂದೆ ತಾನು ಒಂಟಿ ಧ್ವನಿಯಾಗಿ ಸಮರ್ಥಿಸುತ್ತಿದ್ದ ದಿನಗಳನ್ನು ಪೂಜಾರಿಯವರು ಮೆಲುಕು ಹಾಕಿದ್ದಾರೆ.

ಬಾಲ್ಯದ ತಮ್ಮ ಕಷ್ಟದ ದಿನಗಳು, ಶಿಕ್ಷಣಕ್ಕಾಗಿ ಎದುರಿಸಿದ ಸವಾಲುಗಳು, ವಕೀಲ ವೃತ್ತಿಗೆ ಬಂದ ಮೇಲಿನ ಅನುಭವ, ಜೀವನ ಪಾಠ, ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರಿಗೆ ಕೊಟ್ಟ ಮಾತನ್ನು ತಿರಸ್ಕರಿಸಲಾಗದೆ ಆಕಸ್ಮಿಕವಾಗಿ ರಾಜಕೀಯ ರಂಗಕ್ಕೆ ಪ್ರವೇಶ ಮಾಡಿದ ದಿನಗಳು, ಆನಂತರ ರಾಜಕೀಯ ಚದುರಂಗದಾಟದಲ್ಲಿ ಬೆಳೆದು ಬಂದು ನಿಂತ ಪರಿ.ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಹಾಗೂ ನರಸಿಂಹ ರಾವ್ ಅವರ ಜೊತೆಯಲ್ಲಿ ಕೆಲಸ ಮಾಡಿದಾಗಿನ ರಾಜಕೀಯ ಅನುಭವಗಳು ಪುಸ್ತಕದಲ್ಲಿ ಯಥಾವತ್ತಾಗಿ ದಾಖಲಾಗಿವೆ.

ಕರೆ ಬಂತು ದೇಶ ಸೇವೆ, ಕಡು ಬಡತನದ ಬಾಲ್ಯ, ರಾಜಕೀಯದ ಗರಡಿಯಲ್ಲಿ, ಸಾಲ ಮೇಳ ಬದಲಾವಣೆಯ ಕ್ರಾಂತಿ, ನಾಲ್ಕು ಬಾರಿ ಒಲಿದ ಮುಖ್ಯ ಮಂತ್ರಿ ಪದವಿ ತಿರಸ್ಕರಿಸಿದ ಬಗ್ಗೆ ಒಂದು ಅಧ್ಯಾಯದಲ್ಲಿ ಹೇಳುತ್ತಾರೆ. ದೇವಾಲಯದಿಂದ ಪರಿವರ್ತನೆ, ಸಂಸಾರ ಸಾಗರದೊಳಗೆ ಎಂಬ ಅಧ್ಯಾಯಗಳಿವೆ.

ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್, ಶಾಸಕರಾದ ಜೆ.ಆರ್.ಲೋಬೊ, ಮೊಯ್ದಿನ್ ಬಾವ, ಶಕುಂತಳಾ ಶೆಟ್ಟಿ, ಐವನ್ ಡಿಸೋಜ, ಗಣೇಶ್ ಕಾರ್ನಿಕ್, ಮೇಯರ್ ಕವಿತಾ ಸನಿಲ್, ಮಾಜಿ ಶಾಸಕ ವಿಜಯ ಕುಮಾರ್ ಶೆಟ್ಟಿ, ಕೆ.ಎಸ್. ಮುಹಮ್ಮದ್ ಮಸೂದ್, ವಿಜಯ ಬ್ಯಾಂಕ್ನ ಮಾಜಿ ಅಧ್ಯಕ್ಷ ಸದಾನಂದ ಶೆಟ್ಟಿ, ಯೆನೆಪೋಯ ವಿಶ್ವ ವಿದ್ಯಾನಿಲಯದ ಕುಲಪತಿ ಯೆನೆಪೋಯ ಅಬ್ದುಲ್ಲಾ ಕುಂಞಿ, ಜಿಲ್ಲಾ ವಕ್ಫ್ ಮಂಡಳಿಯ ಅಧ್ಯಕ್ಷ ಕಣಚೂರು ಮೋನು, ರಾಜ್ಯ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎ.ಗಫೂರ್, ಎ.ಜೆ.ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ.ಶೆಟ್ಟಿ, ಕಲ್ಲಡ್ಕ ಶ್ರಿರಾಮ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಗೂ ಆರೆಸ್ಸೆಸ್ ಮುಖಂಡ ಪ್ರಭಾಕರ ಭಟ್, ಜಿ.ಶಂಕರ್, ಲಕ್ಷ್ಮಣ್ ಕೊಡಸೆ, ಕುದ್ರೋಳಿ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಡಾ.ಬಿ.ಜಿ.ಸುವರ್ಣ, ದೇವದಾಸ್, ಹರಿಕೃಷ್ಣ ಬಂಟ್ವಾಳ, ಡಿ.ಡಿ. ಕಟ್ಟೆಮಾರ್, ಅನಸೂಯ, ಶೇಖರ ಪೂಜಾರಿ, ಪದ್ಮ ರಾಜ, ಊರ್ಮಿಳಾ ರಮೇಶ್, ಪುರುಷೋತ್ತಮ ಚಿತ್ರಾಪುರ, ಬಿ.ಟಿ.ಸಾಲ್ಯಾನ್, ದೇವೇಂದ್ರ ಪುಜಾರಿ,ಮಾಧವ ಸುವರ್ಣ, ರಾಧಾಕೃಷ್ಣ, ಬಿ.ಕೆ. ತಾರಾನಾಥ್ ಮೊದಲಾದವರು ಉಪಸ್ಥಿತರಿದ್ದರು.

Comments are closed.