
ಲಾಹೋರ್: ಬಂಧನದ ಭೀತಿ ಎದುರಿಸುತ್ತಿರುವ 26/11 ರ ಮುಂಬೈ ದಾಳಿಯ ಪ್ರಮುಖ ರೂವಾರಿ ಹಫೀಜ್ ಸಯೀದ್ ಯುಎನ್‌ಎಸ್‌ಸಿ ತಂಡದ ಭೇಟಿಗೂ ಮೊದಲೇ ಬಂಧನದಿಂದ ತಪ್ಪಿಸಿಕೊಳ್ಳಲು ಲಾಹೋರ್ ಹೈಕೋರ್ಟ್‌ನ ಮೊರೆ ಹೋಗಿದ್ದಾನೆ.
ಜಮಾತ್ ಉದ್ ದವಾ(ಜೆಡಿಯು) ಮುಖ್ಯಸ್ಥ ಹಫೀಜ್ ಸಯೀದ್, ಲಾಹೋರ್ ಹೈಕೋರ್ಟ್‌ಗೆ ಮಂಗಳವಾರ ಅರ್ಜಿ ಸಲ್ಲಿಸಿದ್ದು, ವಿಶ್ವಸಂಸ್ಥೆ ಭದ್ರತಾ ಮಂಡಳಿ (ಯುಎನ್‌ಎಸ್‌ಸಿ) ನಿರ್ಬಂಧಗಳ ಮೇಲುಸ್ತುವಾರಿ ತಂಡ ಭೇಟಿಯ ಹಿನ್ನೆಲೆಯಲ್ಲಿ ಮತ್ತೊಮ್ಮೆ ಬಂಧನಕ್ಕೊಳಗಾಗದಂತೆ ತಡೆಯಬೇಕು ಎಂದು ತನ್ನ ಮನವಿಯಲ್ಲಿ ಹೇಳಿದ್ದಾನೆ.
ಉಗ್ರ ಸಯೀದ್, ಗೃಹಬಂಧನದಿಂದ ಬಿಡುಗಡೆ ಮಾಡಿದ ಕ್ರಮವನ್ನು ಸಮರ್ಥಿಸಿಕೊಳ್ಳುವಲ್ಲಿ ಅಧಿಕಾರಿಗಳು ವಿಫಲವಾಗಿದ್ದು, ಸರ್ಕಾರವು ಕೂಡ ಅಮೆರಿಕ ಮತ್ತು ಭಾರತ ಸರ್ಕಾರಗಳ ಒತ್ತಡದಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಾನೂನು ಜಾರಿ ಸಂಸ್ಥೆಗಳು ತನ್ನ ವಿರುದ್ಧ ಕಾನೂನುಬಾಹಿರ ಕ್ರಮ ಕೈಗೊಳ್ಳುವುದನ್ನು ನಿರ್ಬಂಧಿಸಲು ಮತ್ತು ಆತನ ಮೂಲಭೂತ ಹಕ್ಕುಗಳನ್ನು ಗೌರವಿಸುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾನೆ.
90 ದಿನಗಳ ಬಂಧನದಿಂದ ಇತ್ತೀಚೆಗಷ್ಟೇ ಬಿಡುಗಡೆಯಾಗಿದ್ದ ಸಯೀದ್, ಪಾಕಿಸ್ತಾನದಲ್ಲಿ 2018 ಸಾರ್ವತ್ರಿಕ ಚುನಾವಣೆಯಲ್ಲಿ ಸ್ಫರ್ಧಿಸಲು ಪ್ರಯತ್ನಿಸುತ್ತಿದ್ದು, ಅದಕ್ಕಾಗಿ ಮಿಲ್ಲಿ ಮುಸ್ಲಿಂ ಲೀಗ್ ಎನ್ನುವ ಹೊಸ ಪಕ್ಷವನ್ನು ರಚಿಸಿದ್ದಾನೆ.
ಜಮಾತ್ ಉದ್ ದವಾ ಕಚೇರಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆಯೇ ಇಲ್ಲವೇ ಎನ್ನುವುದನ್ನು ಪರಿಶೀಲಿಸುವಂತೆಯೂ ವಿಶ್ವಸಂಸ್ಥೆಗೆ ಉಗ್ರ ಹಫೀಜ್ ಸಯೀದ್ ಕೋರಿದ್ದಾನೆ. ಈಗಾಗಲೇ ವಿಶ್ವಸಂಸ್ಥೆ ತಂಡ ಇಸ್ಲಾಮಾಬಾದ್ ತಲುಪಿದೆ.
Comments are closed.