
ಶಿವರಾಜ್ ಕರ್ಕೇರ
ಮಂಗಳೂರು, ಜನವರಿ. 23: ನಗರದ ತಣೀರು ಬಾವಿ ಸಮೀಪದ ಬೆಂಗ್ರೆಯಲ್ಲಿ ಸೋಮವಾರ ಮುಂಜಾನೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶಿವರಾಜ್ ಕರ್ಕೇರ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ತಣ್ಣೀರುಬಾವಿ ನಿವಾಸಿಗಳಾದ ಸುನಿಲ್ ಪೂಜಾರಿ (32), ಧೀರಜ್ (25) ಹಾಗೂ ಗದಗ ಜಿಲ್ಲೆಯ ಪ್ರಸ್ತುತ ತಣ್ಣೀರುಬಾವಿಯಲ್ಲಿರುವ ಮಲ್ಲೇಶ ಯಾನೆ ಮಾದೇಶ (23) ಎಂದು ಗುರುತಿಸಲಾಗಿದೆ.
ಆರೋಪಿಗಳು ಹಳೆಯ ವೈಯಕ್ತಿಕ ದ್ವೇಷಕ್ಕಾಗಿ ಈ ಕೊಲೆ ನಡೆಸಿದ್ದಾರೆ. ಕೊಲೆ ಪ್ರಕರಣದಲ್ಲಿ ಇತರ ಕೆಲವರು ಭಾಗಿಯಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ಪೆಕ್ಟರ್ ಶಾಂತರಾಮ್, ಪಿಎಸ್ಐ ಶ್ಯಾಮ್ಸುಂದರ್, ಎಎಸ್ಐ ಶಶಿಧರ್ ಶೆಟ್ಟಿ ಹಾಗೂ ಸಿಬ್ಬಂದಿಗಳಾದ ರಾಮಪೂಜಾರಿ, ಗಣೇಶ್, ಚಂದ್ರಶೇಖರ, ಶೀನಪ್ಪ, ಚಂದ್ರ, ಸುಬ್ರಹ್ಮಣ್ಯ, ಚಂದ್ರಹಾಸ, ಯೋಗೀಶ್, ರಾಜೇಂದ್ರ ಪ್ರಸಾದ್, ಅಬ್ದುಲ್ ಜಬ್ಬಾರ್, ಮಣಿ, ಪ್ರಶಾಂತ್ ಶೆಟ್ಟಿ, ಅಶಿತ್ ಡಿಸೋಜಾ, ತೇಜಕುಮಾರ್ ಹಾಗೂ ರಿತೇಶ್ ಪಾಲ್ಗೊಂಡಿದ್ದರು.
ತಮ್ಮನ ಮೇಲಿನ ದ್ವೇಷಕ್ಕೆ ಅಣ್ಣ ಬಲಿ..?
ರೌಡಿ ಶೀಟರ್ ಭರತೇಶ್ ಎಂಬಾತನ ಸಹೋದರನಾಗಿರುವ ಅಮಯಾಕ ಶಿವರಾಜ್ ಕರ್ಕೇರ ತಣ್ಣೀರು ಬಾವಿಯಲ್ಲಿರುವ ತಮ್ಮ ಮನೆಯ ಟೆರೇಸ್ ಮೇಲೆ ಮಲಗಿದ್ದ (ಸೋಮವಾರ ಮುಂಜಾನೆ) ಸಂದರ್ಭ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದರು.
ತಣ್ಣೀರುಬಾವಿಯಲ್ಲಿ ಸೋಮವಾರ ಮುಂಜಾನೆ ದುಷ್ಕರ್ಮಿಗಳಿಂದ ಹತ್ಯೆಯಾದ ಶಿವರಾಜ್ರನ್ನು ತಮ್ಮನ ಮೇಲಿನ ದ್ವೇಷಕ್ಕೆ ಸಾಯಿಸಲಾಗಿದೆ ಎಂಬ ಮಾತು ಕೇಳಿ ಬಂದಿದೆ.
ಶಿವರಾಜ್ ಸಹೋದರ ಕುಖ್ಯಾತ ರೌಡಿ ಪ್ರದೀಪ್ ಮೆಂಡನ್ ಗ್ಯಾಂಗ್ನ ರೌಡಿ ಶೀಟರ್ ಭರತೇಶ್ ಬಿಜೈ ರಾಜ ಕೊಲೆ ಪ್ರಕರಣದ ಆರೋಪಿಯಾಗಿದ್ದಾನೆ. ಭರತೇಶ್ ಮೇಲಿನ ದ್ವೇಷಕ್ಕೆ, ಯಾವುದೇ ಅಪರಾಧ ಪ್ರಕರಣಗಳಲ್ಲೂ ಕಾಣಿಸಿಕೊಳ್ಳದ, ಅಮಾಯಕ ಶಿವರಾಜ್ ನನ್ನು ಕೊಲೆ ಮಾಡಲಾಗಿದೆ ಎಂದು ಹೇಳಲಾಗಿದೆ.
Comments are closed.