ರಾಷ್ಟ್ರೀಯ

‘ನಾಪತ್ತೆ’ಯಾಗಿದ್ದ ವಿಹಿಂಪ ವರಿಷ್ಠ ತೊಗಾಡಿಯಾ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆ

Pinterest LinkedIn Tumblr

ಅಹಮದಾಬಾದ್‌: ವಿಶ್ವ ಹಿಂದೂ ಪರಿಷತ್‌ನ ಅಂತಾರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಪ್ರವೀಣ್‌ ತೊಗಾಡಿಯಾ (62) ಅವರು ಸೋಮವಾರ ಬೆಳಗ್ಗೆ ಇದ್ದಕ್ಕಿದ್ದಂತೆ ನಿಗೂಢವಾಗಿ ನಾಪತ್ತೆಯಾಗಿ, ರಾತ್ರಿ ವೇಳೆಗೆ ಶಾಹಿಬಾಗ್‌ ಪ್ರದೇಶ ಉದ್ಯಾನವೊಂದರಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿರುವ ಘಟನೆ ಭಾರಿ ಕುತೂಹಲ ಸೃಷ್ಟಿಸಿದೆ. ಸದ್ಯ ಅವರನ್ನು ಸ್ಥಳೀಯ ಚಂದ್ರಮಣಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಳೆಯ ಪ್ರಕರಣವೊಂದರಲ್ಲಿ ತೊಗಾಡಿಯಾ ಅವರಿಗೆ ಬಂಧನ ವಾರಂಟ್‌ ನೀಡಲು ರಾಜಸ್ಥಾನ ಪೊಲೀಸರು ಸೋಮವಾರ ಅಹಮದಾಬಾದ್‌ಗೆ ಬಂದ ಬೆನ್ನಲ್ಲೇ ಈ ಸಸ್ಪೆನ್ಸ್‌ ಡ್ರಾಮಾ ನಡೆದಿದೆ. ಕಣ್ಮರೆಯಾಗುವ ಮೊದಲು ‘ನಮ್ಮ ನಾಯಕನನ್ನು ರಾಜಸ್ಥಾನ ಪೊಲೀಸರು ಬಂಧಿಸಿ ಕರೆದೊಯ್ದಿದ್ದಾರೆ,’ ಎಂದು ಆರೋಪಿಸಿ ನಗರದ ಸೋಲಾ ಪೊಲೀಸ್‌ ಠಾಣೆ ಬಳಿ ವಿಎಚ್‌ಪಿ ಕಾರ್ಯಕರ್ತರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ ಘಟನೆಗಳೂ ನಡೆದವು. ಆದರೆ ಪೊಲೀಸರು ಇವೆಲ್ಲವನ್ನೂ ನಿರಾಕರಿಸಿದ್ದರಾದರೂ ರಾತ್ರಿ ಹೊತ್ತಿಗೆ ಉದ್ಯಾನದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ತೊಗಾಡಿಯಾ ಪತ್ತೆಯಾಗಿದ್ದು ಸಾಕಷ್ಟು ಕುತೂಹಲ ಸೃಷ್ಟಿಸಿದೆ.

ನಿವಾಸ ಜಾಲಾಡಿದ ಪೊಲೀಸರು: ರಾಜಸ್ಥಾನ ಪೊಲೀಸರ ಜತೆಗೆ ಅಹಮದಾಬಾದ್‌ ಪೊಲೀಸರು ತನಿಖೆಗೆ ಸಹಕರಿಸಿ ತೊಗಾಡಿಯಾ ಬಂಧನಕ್ಕೆ ನಾಲ್ಕು ತಂಡಗಳನ್ನು ರಚಿಸಿದ್ದರು. ನಗರದ ತಹಲ್‌ತೇಜ್‌ ಪ್ರದೇಶದ ನಿವಾಸಿಯಾಗಿರುವ ತೊಗಾಡಿಯಾ ಭಾನುವಾರ ರಾತ್ರಿಯಿಂದಲೇ ಪಹಲ್ದಿಯಲ್ಲಿರುವ ವಿಎಚ್‌ಪಿ ಕೇಂದ್ರ ಕಚೇರಿಯಲ್ಲಿದ್ದರು. ಝಡ್‌ ಪ್ಲಸ್‌ ಭದ್ರತೆ ಹೊಂದಿದ್ದರೂ ಅವರು ಯಾರ ಭದ್ರತಾ ಸಿಬ್ಬಂದಿಯ ನೆರವಿಲ್ಲದೇ ಒಬ್ಬರೇ ಸೋಮವಾರ ಬೆಳಗ್ಗೆ 10.45ರ ಸುಮಾರಿಗೆ ಆಟೋರಿಕ್ಷಾದಲ್ಲಿ ಹೊರಹೋದ ನಂತರ ಅವರು ಎಲ್ಲಿಗೆ ಹೋದರು ಎಂಬುದು ನಿಗೂಢವಾಗಿತ್ತು. ಇತ್ತ ಪೊಲೀಸರ ಒಂದು ತಂಡವು ತಹಲ್‌ತೇಜ್‌ನಲ್ಲಿರುವ ತೊಗಾಡಿಯಾ ಅವರ ನಿವಾಸಕ್ಕೆ ಬಂದು ಜಾಲಾಡಿದರೂ ಅವರನ್ನು ಪತ್ತೆ ಹಚ್ಚಲು ಸಾಧ್ಯವಾಗಿರಲಿಲ್ಲ ಎಂದು ಪೊಲೀಸ್‌ ಮೂಲಗಳು ಹೇಳಿವೆ.

ಇದೆಲ್ಲಕ್ಕೂ ಮೊದಲು ಸೂರತ್‌ ಮತ್ತು ಅಹಮದಾಬಾದ್‌ನಲ್ಲಿ ತೊಗಾಡಿಯಾ ಪತ್ತೆಗೆ ಆಗ್ರಹಿಸಿ ಬೆಂಬಲಿಗರಿಂದ ಪ್ರತಿಭಟನೆಗಳು ನಡೆದವು. ಸೋಲಾ ಪೊಲೀಸ್‌ ಠಾಣೆಯಲ್ಲೂ ಇದೇ ಪರಿಸ್ಥಿತಿ ಇತ್ತು. ಸರ್ಕೇಜ್‌-ಗಾಂಧಿ ನಗರ ಹೆದ್ದಾರಿ ಬಂದ್‌ ನಡೆಸಿದ ಬೆಳವಣಿಗೆಯೂ ನಡೆಯಿತು. ಇದೆಲ್ಲ ಆದ ಬಳಿಕ ಸಂಜೆ ಹೊತ್ತಿಗೆ ಅಹಮದಾಬಾದ್‌ ಜಂಟಿ ಪೊಲೀಸ್‌ ಆಯುಕ್ತ (ಕ್ರೈಮ್‌ ಬ್ರಾಂಚ್‌) ಜೆ.ಕೆ.ಭಟ್‌ ಪತ್ರಿಕಾಗೋಷ್ಠಿ ನಡೆಸಿ, ಸೋಲಾ ಠಾಣೆಯ ಪೊಲೀಸರಾಗಲೀ ಇಲ್ಲವೇ ರಾಜಸ್ಥಾನ ಪೊಲೀಸರಾಗಲಿ ಬಂಧಿಸಿಲ್ಲ. ಅನಗತ್ಯವಾಗಿ ಗೊಂದಲ ಸೃಷ್ಟಿಯಾಗಿದೆ ಎಂದು ಹೇಳುವ ಮೂಲಕ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ಮಾಡಿದರು.

Comments are closed.