
ಅಮೇಥಿ: ತಮ್ಮ ಲೋಕಸಭಾ ಕ್ಷೇತ್ರವಾದ ಅಮೇಥಿಗೆ ಸೋಮವಾರ ಭೇಟಿ ನೀಡಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಮುಂದಾಗುತ್ತಿದ್ದಂತೆ ಪಟ್ಟಣದ ಅಲ್ಲಲ್ಲಿ ಪೋಸ್ಟರ್ ಜಗಳ ಆರಂಭವಾಗಿದೆ. ಒಂದು ಪೋಸ್ಟರ್ ನಲ್ಲಿ ರಾಹುಲ್ ಅವರನ್ನು ರಾಮನಾಗಿ ಮತ್ತು ಪ್ರಧಾನಿ ಮೋದಿಯವರನ್ನು ರಾವಣನನ್ನಾಗಿ ಚಿತ್ರಿಸಲಾಗಿದ್ದು ರಾಹುಲ್ ಗಾಂಧಿಯವರ ಅಮೇಥಿ ಭೇಟಿ ಸಂದರ್ಭದಲ್ಲಿ ವಿವಾದ ಹುಟ್ಟುಹಾಕಿದೆ.
2019ರ ಲೋಕಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ಪೋಸ್ಟರ್ ವೊಂದರಲ್ಲಿ ರಾಹುಲ್ ರಾಮದೇವರ ಅವತಾರವಾಗಿದ್ದು 2019ರಲ್ಲಿ ರಾಹುಲ್ ರಾಜ್ ನ್ನು ನೋಡಬಹುದು ಎಂದು ಬರೆಯಲಾಗಿದೆ.
ಮತ್ತೊಂದು ಪೋಸ್ಟರ್ ನಲ್ಲಿ ರಾಹುಲ್ ರನ್ನು ಕೃಷ್ಣ ದೇವರಿಗೆ ಹೋಲಿಸಲಾಗಿದ್ದು ಸೈನಿಕ ತನ್ನ ಪ್ರಯಾಣವನ್ನು ಆರಂಭಿಸಿದ್ದಾರೆ ಎಂದು ಬರೆಯಲಾಗಿದೆ.
ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ನಂತರ ರಾಹುಲ್ ಗಾಂಧಿಯವರ ಮೊದಲ ಅಮೇಥಿ ಭೇಟಿ ಇದಾಗಿದೆ. ಅಮೇಥಿಯಲ್ಲಿ ಅವರು ಏಳು ಕಡೆಗಳಲ್ಲಿ ರೋಡ್ ಶೋ ನಡೆಸುವ ಸಾಧ್ಯತೆಯಿದೆ. ಇಂದು ಮಧ್ಯಾಹ್ನ 12.30ಕ್ಕೆ ರಾಯ್ ಬರೇಲಿಗೆ ಆಗಮಿಸಿದ ರಾಹುಲ್ ಗಾಂಧಿ ಸಲೊನ್ ನಗರ್ ಪಂಚಾಯತ್ ನಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. ಅಲ್ಲಿಂದ ಅಮೇಥಿಗೆ ತೆರಳಲಿದ್ದಾರೆ.
ನಾಳೆ ಬೆಳಗ್ಗೆ 10.30ಕ್ಕೆ ಅನೇಕ ಕಡೆಗಳಲ್ಲಿ ಜನತೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರು ಅಮೇಥಿಯಲ್ಲಿ ತಮ್ಮ ನಾಯಕನಿಗೆ ಅದ್ದೂರಿ ಸ್ವಾಗತ ಕೋರಲಿದ್ದಾರೆ.
Comments are closed.