
ಮಂಗಳೂರು, ಜನವರಿ 10 : ಮಾಜಿ ಮುಖ್ಯಮಂತ್ರಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ನ್ಯಾಯಾಲಯದಲ್ಲಿ ಒಂದು ಕೋಟಿ ರೂ. ಮಾನನಷ್ಟ ಮೊಕದ್ದಮೆ ದೂರು ದಾಖಲಿಸಲಾಗಿದೆ ಎಂದು ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ ಅಧ್ಯಕ್ಷ ಡಾ.ವೈ.ಭರತ್ ಶೆಟ್ಟಿ ತಿಳಿಸಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ಕಾರ್ಪೊರೇಟರ್ ಒಬ್ಬರ ಕೈವಾಡ ಇದೆ ಎಂದು ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದರು.

ದೀಪಕ್ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಚ್.ಡಿ.ಕುಮಾರಸ್ವಾಮಿ ಬೇಜವಾಬ್ದಾರಿ ಹೇಳಿಕೆ ಕೊಟ್ಟಿದ್ದು, ಬಿಜೆಪಿ ಇವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದೆ. ಈ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ವಿರುದ್ದ ಒಂದು ಕೋಟಿ ರೂ.ಮಾನನಷ್ಟ ಮೊಕದ್ದಮೆ ಹೂಡಿದ್ದೇವೆ. ಇದಕ್ಕೆ ಬೇಕಾದ ಎಲ್ಲಾ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲಾಗಿದೆ. ಈ ಮೊಕದ್ದಮೆಯನ್ನು ಹಿಂದಕ್ಕೆ ಪಡೆಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಹತ್ಯೆ ಪ್ರಕರಣದಲ್ಲಿ ಸ್ಥಳೀಯ ಬಿಜೆಪಿ ಕಾರ್ಪೋರೇಟರ್ ಕೈವಾಡವಿದೆ ಎಂದು ಸೋಮವಾರ ಮೈಸೂರಿನಲ್ಲಿ ಎಚ್ ಡಿ ಕುಮಾರ ಸ್ವಾಮಿ ಆರೋಪಿಸಿದ್ದರು. ಇದಕ್ಕೆ ಬಿಜೆಪಿ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು.
Comments are closed.