ಕರಾವಳಿ

ಬಿಗಿ ಭದ್ರತೆಯೊಂದಿಗೆ ಶವಯಾತ್ರೆ : ಅಪಾರ ಜನಸ್ತೋಮದ ಸಮ್ಮುಖದಲ್ಲಿ ನೆರವೇರಿದ ದೀಪಕ್ ರಾವ್ ಅಂತ್ಯಕ್ರಿಯೆ

Pinterest LinkedIn Tumblr

ಮಂಗಳೂರು, ಜನವರಿ.4: ಸುರತ್ಕಲ್ ಸಮೀಪದ ಕಾಟಿಪಳ್ಳದಲ್ಲಿ ಬುಧವಾರ ಮಧ್ಯಾಹ್ನ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಅವರ ಮೃತದೇಹದ ಅಂತ್ಯಕ್ರಿಯೆ ಗುರುವಾರ ಮಧ್ಯಾಹ್ನ ಕಾಟಿಪಳ್ಳದ ಜನತಾ ಕಾಲನಿಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ನೆರವೇರಿತು.

ಕಾಟಿಪಳ್ಳದಲ್ಲಿರುವ ದೀಪಕ್ ಅವರ ಮನೆಯಿಂದ ದೀಪಕ್ ರಾವ್ ಅವರ ಮೃತದೇಹವನ್ನು ಹೊತ್ತ ವಾಹನವು ಕಾಟಿಪಪಳ್ಳದ ಜನತಾ ಕಾಲನಿಯಲ್ಲಿರುವ ಹಿಂದೂ ರುದ್ರಭೂಮಿಗೆ ಮೆರವಣಿಗೆಯ ಮೂಲಕ ಸಾಗಿ, ಅಲ್ಲಿ ಅಂತ್ಯ ಸಂಸ್ಕಾರ ನೆರವೇರಿತು.

ಬಿಗಿ ಪೊಲೀಸ್ ಬಂದೋಬಸ್ತಿನೊಂದಿಗೆ ಆರಂಭಗೊಂಡ ಮೃತದೇಹದ ಮೆರವಣಿಗೆಯು ಸುಮಾರು 6 ಕಿ.ಮೀ. ದೂರದವರೆಗೆ ಸಾಗಿ ಅಪರಾಹ್ನ 1:45ರಸುಮಾರಿಗೆ ಕಾಟಿಪಳ್ಳ ಜನತಾ ಕಾಲನಿಯಲ್ಲಿರುವ ಹಿಂದೂ ರುದ್ರಭೂಮಿ ತಲುಪಿತು. ಅಂತಿಮ ಸಂಸ್ಕಾರದ ವಿಧಿವಿಧಾನಗಳು ನಡೆದು ಕ್ಷತ್ರಿಯ ಸಂಪ್ರದಾಯದಂತೆ ಅಂತ್ಯಸಂಸ್ಕಾರ 2:20ರ ಸುಮಾರಿಗೆ ನೆರವೇರಿತು.

ನಗರದ ಎಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಇಡಲಾಗಿದ್ದ ದೀಪಕ್‌ ರಾವ್‌ ಅವರ ಶವವನ್ನು ಮನೆಗೆ ಸಾಗಿಸಲು ಗುರುವಾರ ಬೆಳಿಗ್ಗೆ ಆಸ್ಪತ್ರೆಯ ಮುಂದೆ ಹಾರ ಮತ್ತು ಹೂವಿನಿಂದ ಅಲಂಕರಿಸಿದ್ದ ವಾಹನದೊಂದಿಗೆ ಕಾದಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರಿಗೆ ತಿಳಿಯದಂತೆ ಪೊಲೀಸರು ಗೌಪ್ಯವಾಗಿ ಶವವನ್ನು ಮನೆಗೆ ರವಾನಿಸಿದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶವಾಗಿತ್ತು.

ದೀಪಕ್ ರಾವ್ ಅವರ ಮನೆಯ ಎದುರು ಜಮಾಯಿಸಿದ್ದ ಸಾವಿರಾರು ಮಂದಿ ಅಂಬುಲೆನ್ಸ್‌ ತಡೆದು ಶವವನ್ನು ಆಸ್ಪತ್ರೆಗೆ ವಾಪಾಸ್‌ ತೆಗೆದುಕೊಂಡು ಹೋಗುವಂತೆ ಪಟ್ಟು ಹಿಡಿದಿದ್ದರು.

ಈ ಹಿನ್ನೆಲೆಯಲ್ಲಿ ಇಂದು ಮುಂಜಾನೆಯಿಂದ ಮಧ್ಯಾಹ್ನದವರೆಗೆ ಫೋಷಕರು ಹಾಗೂ ಹಿಂದೂ ಪರ ಸಂಘಟನೆಗಳು ನಡೆಸಿದ ಪ್ರತಿಭಟನೆಯ ಬಳಿಕ ಜಿಲ್ಲಾಧಿಕಾರಿಯ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದು ಕೊನೆಗೆ ದೀಪಕ್ ಕುಟುಂಬ ಸದಸ್ಯರು ಹಾಗೂ ಕಾಟಿಪಳ್ಳ ಗ್ರಾಮಸ್ಥರ ಮನವೊಲಿಸುವಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಹಾಗೂ ಪೊಲೀಸ್ ಆಯುಕ್ತ ಸುರೇಶ್ ಯಶಸ್ವಿಯಾಗಿದ್ದರು.ಇದರಿಂದ ಸಮಸ್ಯೆ ಬಗೆಹರಿದಿತ್ತು.

ಈ ವೇಳೆ ಕಾಟಿಪಳ್ಳದ ಮನೆಯಿಂದ ಸುಮಾರು ಮುಕ್ಕಾಲು ಕಿ.ಮೀ. ದೂರದಲ್ಲಿರುವ ರುದ್ರಭೂಮಿಯವರೆಗೆ ದೀಪಕ್ ಅವರ ಮೃತದೇಹದ ಮೆರವಣಿಗೆ ನಡೆಸಲು ಜಿಲ್ಲಾಧಿಕಾರಿ ಸಸಿಕಾಂತ್ ಸೆಂತಿಲ್ ಅನುಮತಿ ನೀಡಿದ್ದರು. ಈ ಸಂದರ್ಭ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಪೊಲೀಸರು ಮುಂಜಾಗೃತಾ ಕ್ರಮ ಕೈಗೊಂಡಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Comments are closed.