
ರುದ್ರಭೂಮಿಯವರೆಗೆ ಶವಯಾತ್ರೆಗೆ ಅವಕಾಶ ನೀಡಿದ ಜಿಲ್ಲಾಡಳಿತ
ಕಾಟಿಪಳ್ಳ, ಜನವರಿ.4: ಕಾಟಿಪಳ್ಳದ ಕೈಕಂಬದಲ್ಲಿ ಬುಧವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್ ಅವರ ಶವವನ್ನು ಮನೆಗೆ ಸಾಗಿಸಲು ಗುರುವಾರ ಬೆಳಿಗ್ಗೆ ಆಸ್ಪತ್ರೆಯ ಮುಂದೆ ಹಾರ ಮತ್ತು ಹೂವಿನಿಂದ ಅಲಂಕರಿಸಿದ್ದ ವಾಹನದೊಂದಿಗೆ ಕಾದಿದ್ದ ಹಿಂದೂ ಸಂಘಟನೆಯ ಕಾರ್ಯಕರ್ತರ ಕಣ್ಣು ತಪ್ಪಿಸಿ ಪೊಲೀಸರು ಗೌಪ್ಯವಾಗಿ ಶವವನ್ನು ಮನೆಗೆ ರವಾನಿಸಿದ ಹಿನ್ನೆಲೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದ ದೀಪಕ್ ಕುಟುಂಬ ಸದಸ್ಯರು ಹಾಗೂ ಕಾಟಿಪಳ್ಳ ಗ್ರಾಮಸ್ಥರನ್ನು ಮನವೊಲಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಹಾಗೂ ಪೊಲೀಸ್ ಆಯುಕ್ತ ಸುರೇಶ್ ಯಶಸ್ವಿಯಾಗಿದ್ದಾರೆ.

(ದುಷ್ಕರ್ಮಿಗಳಿಂದ ಹತ್ಯೆಗೀಡಾದ ದೀಪಕ್ ರಾವ್)

ನಗರದ ಎಜೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿ ಇಡಲಾಗಿದ್ದ ದೀಪಕ್ ರಾವ್ ಅವರ ಮೃತದೇಹವನ್ನು ಇಂದು ಬೆಳಗ್ಗೆಯೇ ಪೊಲೀಸರು ಗೌಪ್ಯವಾಗಿ ಕಾಟಿಪಳ್ಳಕ್ಕೆ ಸಾಗಿಸಿದ್ದಾರೆ. ಆದರೆ ಮನೆಯ ಎದುರು ಜಮಾಯಿಸಿದ್ದ ಸಾವಿರಾರು ಮಂದಿ ಅಂಬುಲೆನ್ಸ್ ತಡೆದು ಶವವನ್ನು ಆಸ್ಪತ್ರೆಗೆ ವಾಪಾಸ್ ತೆಗೆದುಕೊಂಡು ಹೋಗುವಂತೆ ಪಟ್ಟು ಹಿಡಿದರು.

ಸಂಘ ಪರಿವಾರದ ಕಾರ್ಯಕರ್ತರು, ಹಾಗೂ ಪೋಷಕರು ಆಯಂಬುಲೆನ್ಸ್ನಿಂದ ಶವವನ್ನು ಕೆಳಕ್ಕಿಸಲು ಅವಕಾಶ ನೀಡಲಿಲ್ಲ. ಇದರಿಂದ ಸ್ಥಳದಲ್ಲಿ ಸದ್ಯ ಉದ್ವಿಗ್ನ ವಾತಾವರಣ ನೆಲೆಸಿತ್ತು. ಬಿಜೆಪಿ ಕಾರ್ಯಕರ್ತ ದೀಪಕ್ ಅವರ ಮೃತದೇಹವನ್ನು ಸ್ವೀಕರಿಸುವ ಮೊದಲು ಗೃಹ ಸಚಿವರು ಸ್ಥಳಕ್ಕೆ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದರು. ಈ ವೇಳೆ ಪೊಲೀಸ್ ಅಧಿಕಾರಿಗಳು ಮತ್ತು ಗ್ರಾಮಸ್ಥರ ನಡುವೆ ತೀವ್ರ ವಾಗ್ವಾದ ಉಂಟಾಯಿತು. ಮೃತದೇಹವನ್ನು ವಾಪಸ್ ಕೊಂಡೊಯ್ಯುವಂತೆ ಸಂಘ ಪರಿವಾರದ ಕಾರ್ಯಕರ್ತರು ಪೊಲೀಸರ ಮೇಲೆ ಒತ್ತಡ ಹೇರಿದ್ದರು.

ಈ ವೇಳೆ ಸ್ಥಳಕ್ಕೆ ಬಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್ ಹಾಗೂ ಪೊಲೀಸ್ ಆಯುಕ್ತ ಸುರೇಶ್ ಅವರು ಮಾತುಕತೆ ನಡೆಸಿ ದೀಪಕ್ ಕುಟುಂಬ ಸದಸ್ಯರು ಹಾಗೂ ಕಾಟಿಪಳ್ಳ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇದೇ ವೇಳೆ ಮೃತ ದೀಪಕ್ ಅವರ ನಿವಾಸದಿಂದ ರುದ್ರಭೂಮಿಯ ತನಕ ಶವಯಾತ್ರೆ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದೆ. ಮುಕ್ಕಾಲು ಕಿ.ಮೀ. ದೂರ ಮೆರವಣಿಗೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.

ಜಿಲ್ಲಾಧಿಕಾರಿ ಶಸಿಕಾಂತ್ ಸೆಂಥಿಲ್
ಸರಕಾರದ ವತಿಯಿಂದ ಆರಂಭದಲ್ಲಿ 5 ಲಕ್ಷ ರೂ. ಪರಿಹಾರ ಘೋಷಿಸಲಾಗಿತ್ತು. ಬಡ ಕುಟುಂಬದ ದೀಪಕ್ಗೆ 50 ಲಕ್ಷ ರೂ. ಪರಿಹಾರ ನೀಡಬೇಕೆಂಬ ಒತ್ತಾಯ ಕೇಳಿಬಂತು. ಜಿಲ್ಲಾಧಿಕಾರಿ ಅವರು ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಮತ್ತೆ 5 ಲಕ್ಷ ರೂ. ಘೋಷಿಸುವ ಮೂಲಕ ಒಟ್ಟು 10 ಲಕ್ಷ ರೂ. ಪರಿಹಾರ ಘೋಷಿಸಿದರು. ಪರಿಹಾರ ಸರಿಯಾದ ಸಮಯದಲ್ಲಿ ಸಿಗದಿದ್ದರೆ ನನ್ನನ್ನು ನೇರವಾಗಿ ಸಂಪರ್ಕಿಸಬಹುದು ಎಂದು ಜಿಲ್ಲಾಧಿಕಾರಿ ಸೆಂಥಿಲ್ ಭರವಸೆ ನೀಡಿದರು.
Comments are closed.