
ಗುವಾಹಟಿ: ಗುವಾಹಟಿ ವಿಮಾನನಿಲ್ದಾಣದ ಮೂಲಕ ಚಿನ್ನ ಕಳ್ಳಸಾಗಣೆಗೆ ನೆರವಾದ ಆರೋಪದಲ್ಲಿ ಇಂಡಿಗೊ ಏರ್‌ಲೈನ್ಸ್‌ನ ಹಿರಿಯ ಉದ್ಯೋಗಿಯನ್ನು ಬಂಧಿಸಿರುವುದಾಗಿ ಆದಾಯ ಗುಪ್ತಚರ ಇಲಾಖೆ ಮಹಾನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆಯ ಜಾಲವೊಂದನ್ನು ಅಧಿಕಾರಿಗಳು ಇತ್ತೀಚೆಗೆ ಬೇಧಿಸಿದ್ದರು. ಏರ್‌ಲೈನ್ಸ್‌ನ ಉದ್ಯೋಗಿಗಳು ಈ ಕಾರ್ಯದಲ್ಲಿ ಶಾಮೀಲಾಗಿರುವ ಬಗ್ಗೆ ಅಧಿಕಾರಿಗಳಿಗೆ ಸಂದೇಹವಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದ ಬಳಿಕ ಡಿ.21ರಂದು ಗುವಾಹಟಿ ವಿಮಾನನಿಲ್ದಾಣದಲ್ಲಿ ವಿಜಯ್‌ಕುಮಾರ್ ಅಲಿಯಾಸ್ ವಿಜಯ್‌ಕುಮಾರ್ ಶರ್ಮ ಎಂಬಾತನನ್ನು 2.65 ಕಿ.ಗ್ರಾಂ. ಚಿನ್ನದ ಸಹಿತ ಹಾಗೂ ದಿಲ್ಲಿಯ ಇಂದಿರಾಗಾಂಧಿ ವಿಮಾನನಿಲ್ದಾಣದಲ್ಲಿ ಸನ್ವರ್‌ಲಾಲ್ ಶರ್ಮ ಎಂಬಾತನನ್ನು 2.48 ಕಿ.ಗ್ರಾಂ. ಚಿನ್ನದ ಸಹಿತ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಿಖೆಯ ವೇಳೆ ಇವರಿಬ್ಬರು ಕಳ್ಳಸಾಗಣೆ ಜಾಲದ ಬಗ್ಗೆ ಬಾಯಿಬಿಟ್ಟಿದ್ದಾರೆ. ಇಂಡಿಗೊ ಏರ್‌ಲೈನ್ಸ್‌ನ 6 ಭದ್ರತಾ ಸಿಬ್ಬಂದಿಗಳ ಹೇಳಿಕೆಯನ್ನು ದಾಖಲೀಕರಿಸಿಕೊಳ್ಳಲಾಗಿದ್ದು, ಇಂಡಿಗೊ ಏರ್‌ಲೈನ್ಸ್‌ನ ಹಿರಿಯ ವಿಮಾನನಿಲ್ದಾಣ ವ್ಯವಸ್ಥಾಪಕ ರಾಜೀವ್ ಮೇಧಿಯ ಸೂಚನೆ ಮೇರೆಗೆ ಚಿನ್ನ ತುಂಬಿರುವ ಬ್ಯಾಗಿಗೆ ತಾವು ‘ಕ್ಲಿಯರೆನ್ಸ್’ ನೀಡಿರುವುದಾಗಿ ಇವರೆಲ್ಲ ತಿಳಿಸಿದ್ದಾರೆ.
ಅಲ್ಲದೆ ಓರ್ವ ಆರೋಪಿ ವಿಜಯ್‌ಕುಮಾರ್ ಶರ್ಮ ಕೂಡಾ ಮೇಧಿಯ ಪಾತ್ರವನ್ನು ಒಪ್ಪಿಕೊಂಡಿದ್ದಾನೆ. ‘ಎಕ್ಸ್‌ರೇ’ ಯಂತ್ರದಲ್ಲಿ ಚಿನ್ನ ಪತ್ತೆಯಾದರೂ, ಚಿನ್ನ ತುಂಬಿದ ಬ್ಯಾಗುಗಳನ್ನು ಸೂಕ್ತ ದಾಖಲೆಪತ್ರಗಳಿಲ್ಲದೆ ನಿಲ್ದಾಣದಿಂದ ಹೊರಗೆ ಸಾಗಿಸಲು ಮೇಧಿ ಪ್ರಭಾವ ಬೀರಿದ್ದರು ಎಂದು ಆರೋಪಿ ತಿಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ.
ಅಲ್ಲದೆ ಮೇಧಿಗೆ ಕಳ್ಳಸಾಗಾಣೆ ಜಾಲದ ಇನ್ನೂ ಕೆಲವು ಸದಸ್ಯರ ಸಂಪರ್ಕವಿತ್ತು. ಇಂಡಿಗೊ ಏರ್‌ಲೈನ್ಸ್‌ನ ‘ದೈಹಿಕ ತಪಾಸಣೆ ದಾಖಲೆ ಪುಸ್ತಕ’ದ ಉಲ್ಲೇಖಗಳನ್ನು ತಿರುಚಿರುವುದೂ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ರಾಜೀವ್ ಮೇಧಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Comments are closed.