ಕರಾವಳಿ

ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವೇ ಬಿಜೆಪಿಯ ಮುಖ್ಯ ಗುರಿ : ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್

Pinterest LinkedIn Tumblr

ಮಂಗಳೂರು, ಡಿಸೆಂಬರ್. 30: ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣವೇ ಬಿಜೆಪಿಯ ಮುಖ್ಯ ಗುರಿಯಾಗಿದ್ದು, ಈ ಹಿನ್ನೆಲೆಯಲ್ಲಿ ಈಗಾಗಲೇ ದೇಶದ 19 ರಾಜ್ಯಗಳಲ್ಲಿ ಕಾಂಗ್ರೆಸನ್ನು ಮುಕ್ತಗೊಳಿಸಲಾಗಿದ್ದರೆ, ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಸಮ್ಮಿಶ್ರ ಸರಕಾರ ಆಡಳಿತದಲ್ಲಿದೆ. ಮುಂದಿನ ಚುನಾವಣೆಯಲ್ಲಿ ಕರ್ನಾಟಕ ಕೂಡ ಕಾಂಗ್ರೆಸ್ ಮುಕ್ತ ರಾಜ್ಯವಾಗಲಿದೆ ಎಂದು ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಮಂಗಳೂರಿನಲ್ಲಿ ದ.ಕ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.ರಾಜ್ಯದಲ್ಲಿ ಬಿಜೆಪಿ ಆಯೋಜಿಸಿರುವ ಪರಿವರ್ತನಾ ಯಾತ್ರೆಗೆ ರಾಜ್ಯದ ಜನತೆ ಉತ್ತಮ ಸ್ಪಂದನೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ನ ಭ್ರಷ್ಟ ಆಡಳಿತಕ್ಕೆ ಮುಕ್ತಿ ನೀಡಲು ಜನತೆ ನಿರ್ಧರಿಸಿದ್ದಾರೆ ಎಂದು ಹೇಳಿದರು.

ಉಡುಪಿ- ದ.ಕ.ದ 2 ಕಾಲೇಜುಗಳಲ್ಲಿ ಅಟಲ್ ಟಿಂಕರಿಂಗ್ ಲ್ಯಾಬ್

ಭಾರತದ ನೀತಿ ಆಯೋಗವು ಅಟಲ್ ಇನ್ನೋವೇಶನ್ ಮಿಶನ್ನಡಿ ಪ್ರಸಕ್ತ ಅಟಲ್ ಟಿಂಕರಿಂಗ್ ಲ್ಯಾಬ್ಗಳನ್ನು ಆರಂಭಿಸಲು ಕರ್ನಾಟಕ ಕರಾವಳಿಯ 55 ಶಾಲೆಗಳನ್ನು ಆಯ್ಕೆ ಮಾಡಲಾಗಿದ್ದು, ಮುಂದಿನ ಹಂತದಲ್ಲಿ ಈ ಲ್ಯಾಬ್ಗಳನ್ನು ಕಾಲೇಜುಗಳಿಗೆ ವಿಸ್ತರಿಸಲು ಚಿಂತಿಸಲಾಗಿದೆ.ದ.ಕ. ಮತ್ತು ಉಡುಪಿ ಜಿಲ್ಲೆಯ ಎರಡು ಕಾಲೇಜುಗಳನ್ನು ಆಯ್ಕೆ ಮಾಡಲಾಗಿದೆ. ಇದೇ ವೇಳೆ ಎನ್‌ಐಟಿಕೆ ಮತ್ತು ನಿಟ್ಟೆಯಲ್ಲಿ ಇನ್ನೋವೇಶನ್ ಹಬ್ ಈಗಾಗಲೇ ಆರಂಭಗೊಂಡಿದೆ. ಶಿಕ್ಷಣ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ದ.ಕ. ಜಿಲ್ಲೆಯ ವಿದ್ಯಾವಂತರು ಮುಂದೆ ವಿವಿಧ ಕ್ಷೇತ್ರಗಳ ಉದ್ಯಮಗಳಲ್ಲಿ ನಿಪುಣತೆಯನ್ನು ಪಡೆಯುವಲ್ಲಿ ಇವೆಲ್ಲಾ ಪೂರಕ ಅಂಶಗಳಾಗಿವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದರು.

ಭಾರತೀಯ ಸೇನಾ ಪಡೆ ಬಲಿಷ್ಠ :

ಭಾರತೀಯ ಸೇನೆಯ ಹಿರಿಮೆ, ಗರಿಮೆಗೆ ಯಾವತ್ತೂ ಕೂಡ ಧಕ್ಕೆ ಆಗದಂತೆ ಕೇಂದ್ರದ ನರೇಂದ್ರ ಮೋದಿ ಸರಕಾರ ಅತ್ಯಂತ ಎಚ್ಚರಿಕೆ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಬಂದಿದ್ದು, ಭಾರತೀಯ ಸೇನಾ ಪಡೆ ಬಲಿಷ್ಠವಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು. ನಿವೃತ್ತ ಯೋಧರಿಗೆ ಏಕರೂಪದ ಪಿಂಚಣಿ ಪದ್ಧತಿಯನ್ನು ಜಾರಿಗೆ ತರಲಾಗುತ್ತಿದೆ. ಸೇನಾ ಸಶಕ್ತೀಕರಣವೇ ನಮ್ಮ ಉದ್ದೇಶವಾಗಿದ್ದು, ಪ್ರತಿಪಕ್ಷಗಳು ಇದನ್ನು ಅರ್ಥಮಾಡಿಕೊಳ್ಳಬೇಕು ಎಂದವರು ಹೇಳಿದರು.

ಅಲ್ಪಸಂಖ್ಯಾತರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಆಯೋಗ ಇರುವಂತೆ ಒಬಿಸಿಗೂ ಪ್ರತ್ಯೇಕ ಆಯೋಗ ರಚಿಸುವ ಅಗತ್ಯವಿದೆ. ಒಬಿಸಿ ವರ್ಗದ ಅಭಿವೃದ್ಧಿಯ ದೃಷ್ಟಿಯಿಂದ ಪ್ರತ್ಯೇಕ ಆಯೋಗದ ಅಗತ್ಯವಿದೆ. ಈ ನೆಲೆಯಲ್ಲಿ ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆಸುತ್ತಿದೆ. ಈಗಾಗಲೇ ಸುಪ್ರೀಂ ಕೋರ್ಟ್ನ ಸೂಚನೆ ಹಾಗೂ ಕಾನೂನು ಆಯೋಗದ ಶಿಫಾರಸಿನ ಮೇರೆಗೆ ಕೇಂದ್ರ ಸರಕಾರ ತ್ರಿವಳಿ ತಲಾಖ್ಗೆ ನಿಷೇಧ ಹೇರಿದೆ. ಇದೊಂದು ಐತಿಹಾಸಿಕ ನಿರ್ಧಾರವೂ ಹೌದು. ದೇಶದಲ್ಲಿ ಅಗತ್ಯ ಬದಲಾವಣೆಗಳು ಆಗಬೇಕಾದದ್ದು ಅನಿವಾರ್ಯವಾಗಿದೆ ಎಂದು ಹೇಳಿದ ಅವರು, ದೇಶದ ಸಮಗ್ರ ದೃಷ್ಟಿಯನ್ನಿಟ್ಟು ಕೇಂದ್ರ ಸರಕಾರ ಹಲವು ಬಿಲ್ ಜಾರಿ ಮಾಡಲು ಮುಂದಾದರೂ, ಪ್ರತಿಪಕ್ಷದವರು ಅದರಲ್ಲಿ ರಾಜಕೀಯ ಹುಡುಕುವ ಮೂಲಕ ಅಭಿವೃದ್ದಿ ಕ್ರಮಾಂಕಕ್ಕೆ ಹೊಡೆತ ನೀಡುತ್ತಿರುವುದು ಖಂಡನೀಯ ಎಂದರು.

ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಗೀತೋಪದೇಶದ ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕ ಗಣೇಶ್ ಕಾರ್ಣಿಕ್, ಬಿಜೆಪಿ ವಿಭಾಗ ಪ್ರಭಾರಿ ಉದಯ ಕುಮಾರ್ ಶೆಟ್ಟಿ, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು ಉಪಸ್ಥಿತರಿದ್ದರು. ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ಸ್ವಾಗತಿಸಿದರು.

Comments are closed.