ಕರಾವಳಿ

ಕಾಂಗ್ರೆಸ್ ಸಚಿವರು,ಶಾಸಕರಿಗೆ ಕಪ್ಪು ಬಾವುಟ ಪ್ರದರ್ಶನ : ಪೊಲೀಸರು ಮತ್ತು ಬಿಜೆಪಿ ಕಾರ್ಯಕರ್ತರ ಮಧ್ಯೆ ಘರ್ಷಣೆ

Pinterest LinkedIn Tumblr

ಮಂಗಳೂರು, ಡಿಸೆಂಬರ್.22: ವಾಮಂಜೂರು ಜಂಕ್ಷನ್ನಿಂದ ಪಿಲಿಕುಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಮರೀಕಣರ ಮತ್ತಿತರ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಸ್ಥಳೀಯ ಕಾರ್ಪೊರೇಟರ್ ಮತ್ತು ಗ್ರಾಪಂ ಅಧ್ಯಕ್ಷರಿಗೆ ಆಹ್ವಾನ ನೀಡದಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಸಚಿವರು ಮತ್ತು ಶಾಸಕರಿಗೆ ಕಪ್ಪುಬಾವುಟ ಪ್ರದರ್ಶಿಸಿದ ಘಟನೆ ಕೂಡ ಗುರುವಾರ ವಾಮಂಜೂರು ಜಂಕ್ಷನ್ ನಲ್ಲಿ ನಡೆಯಿತು.

ಈ ವೇಳೆ ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ಹೊಯ್ಕೈ-ಮಾತಿನ ಚಕಮಕಿ ಕೂಡ ನಡೆಯಿತು. ಬಿಜೆಪಿಯ ಒಬ್ಬ ಕಾರ್ಯಕರ್ತನಿಗೆ ಪೊಲೀಸ್ ಸಿಬ್ಬಂದಿ ಏಟು ಬಿಗಿದರು ಎನ್ನಲಾಗಿದೆ. ಇದಕ್ಕೆ ಪ್ರತಿಯಾಗಿ ಬಿಜೆಪಿ ಕಾರ್ಯಕರ್ತ ಕೂಡ ಪೊಲೀಸ್ ಸಿಬ್ಬಂದಿಗೆ ತಿರುಗೇಟು ನೀಡಿದರು ಎನ್ನಲಾಗಿದೆ.ಒಟ್ಟಿನಲ್ಲಿ ಒಬ್ಬ ಹಿರಿಯ ಸಚಿವರೊಬ್ಬರ ಸಮ್ಮುಖದಲ್ಲೇ ಈ ಘಟನೆ ನಡೆದಿರುವುದು ಜಿಲ್ಲೆಯ ಕಾನೂನು ಸ್ವವ್ಯವಸ್ಥೆ ಬಗ್ಗೆ ಅನುಮಾನ ಮೂಡುವಂತಾಗಿದೆ.

ವಾಮಂಜೂರು ಜಂಕ್ಷನ್ನಿಂದ ಪಿಲಿಕುಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ಡಾಮರೀಕಣ ಮತ್ತಿತರ ಸುಮಾರು 4.95 ಕೋ.ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗೆ ಗುರುವಾರ ಶಿಲಾನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.. ಯೋಜನೆ, ಸಾಂಖ್ಯಿಕ, ವಿಜ್ಞಾನ, ತಂತ್ರಜ್ಞಾನ ಸಚಿವ ಸಚಿವ ಎಂ.ಆರ್. ಸೀತಾರಾಮ್ ಶಿಲಾನ್ಯಾಸಗೈಯಲು ಆಗಮಿಸಿದ್ದರು.

ಸಚಿವರ ಜೊತೆ ಕಾರ್ಯಕ್ರಮದಲ್ಲಿ ಭಾಗವಹಿಸಿಲು ಶಾಸಕರಾದ ಜೆ.ಆರ್.ಲೋಬೊ, ಬಿ.ಎ.ಮೊಯ್ದಿನ್ ಬಾವಾ, ಮೇಯರ್ ಕವಿತಾ ಸನಿಲ್, ಮನಪಾ ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಜಿಪಂ ಸದಸ್ಯ ಇಬ್ರಾಹೀಂ ಅಡ್ಡೂರು, ಕೆಎಸ್ಸಾರ್ಟಿಸಿ ನಿರ್ದೇಶಕ ಟಿ.ಕೆ. ಸುಧೀರ್, ಬಜ್ಪೆ ಗ್ರಾಪಂ ಮಾಜಿ ಅಧ್ಯಕ್ಷ ಶಾಹುಲ್ ಹಮೀದ್ ಮತ್ತಿತರರು ಆಗಮಿಸಿದ್ದರು.

ಆದರೆ ಕಾರ್ಯಕ್ರಮಕ್ಕೆ ಸ್ಥಳೀಯ ಕಾರ್ಪೊರೇಟರ್ ಮತ್ತು ಗ್ರಾಪಂ ಅಧ್ಯಕ್ಷರಿಗೆ ಅಹ್ವಾನವಿರಲಿಲ್ಲ ಎನ್ನಲಾಗಿದೆ. ಇದರಿಂದ ರೊಚ್ಚಿಗೆದ್ದ ಬಿಜೆಪಿ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಆಗಮಿಸಿಉತ್ತಿದ್ದ ಸಚಿವರು ಮತ್ತು ಶಾಸಕರಿಗೆ ಕಪ್ಪುಬಾವುಟ ಪ್ರದರ್ಶಿಸಿದರು.

  

Comments are closed.