ರಾಷ್ಟ್ರೀಯ

ಸೆಕ್ಸ್‌ ಕ್ರೈಂ ಹೆಚ್ಚಲು ಕಾರಣವೇನು?

Pinterest LinkedIn Tumblr


ಚೆನ್ನೈ: ನಾನಾ ಸಂಸ್ಕೃತಿ, ಧರ್ಮಗಳಲ್ಲಿ ಇರುವ ಕಟ್ಟುಪಾಡುಗಳು ಮತ್ತು ನೈತಿಕ ನಿರ್ಬಂಧಗಳು ಭಾರತದಲ್ಲಿ ಚಾಲ್ತಿಯಲ್ಲಿವೆ. ಹೀಗಾಗಿ ಪುರುಷರಲ್ಲಿ ಹೆಚ್ಚುತ್ತಿರುವ ಲೈಂಗಿಕ ಹಸಿವು ಲೈಂಗಿಕ ಅಪರಾಧಗಳ ಹೆಚ್ಚಳಕ್ಕೆ ಕಾರಣವೇ ಎಂಬುದನ್ನು ಪತ್ತೆ ಮಾಡಿ ಎಂದು ಮದ್ರಾಸ್‌ ಹೈಕೋರ್ಟ್‌ ಕೇಂದ್ರ ಮತ್ತು ತಮಿಳುನಾಡು ಸರಕಾರಕ್ಕೆ ನಿರ್ದೇಶನ ನೀಡಿದೆ.

ಲಿಂಗಾನುಪಾತ ಕುಸಿತದ ಪರಿಣಾಮವಾಗಿ ಇಂಥ ಸನ್ನಿವೇಶ ಸೃಷ್ಟಿಯಾಗುತ್ತಿದೆಯೇ ಎಂಬುದನ್ನೂ ಅರಿತುಕೊಳ್ಳುವಂತೆ ಕೋರ್ಟ್‌ ಸರಕಾರಗಳಿಗೆ ಸೂಚಿಸಿದೆ. ಜನವರಿ ಹತ್ತರೊಳಗೆ ಸೂಕ್ತ ಪ್ರತಿಕ್ರಿಯೆ ಸಲ್ಲಿಸುವಂತೆ ನ್ಯಾಯಾಲಯವು ಸರಕಾರಗಳಿಗೆ ಆದೇಶಿಸಿದೆ.

ಮಹಿಳೆಯರು ಮತ್ತು ಹೆಣ್ಣುಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಇಂಥ ಹೀನಕೃತ್ಯಗಳನ್ನು ತಡೆಯುವಲ್ಲಿ ತುರ್ತು ಕ್ರಮಗಳನ್ನು ಕೈಗೊಳ್ಳಬೇಕಿದೆ ಎಂದು ಕೋರ್ಟ್‌ ಹೇಳಿದೆ. ಈ ನಿಟ್ಟಿನಲ್ಲಿ ನ್ಯಾಯಮೂರ್ತಿ ಎನ್‌. ಕಿರುಬಾಕರನ್‌ ಹಲವು ಪ್ರಶ್ನೆಗಳನ್ನು ರಾಜ್ಯ ಮತ್ತು ಕೇಂದ್ರ ಸರಕಾರ ಹಾಗೂ ಮಹಿಳಾ ಆಯೋಗದ ಮುಂದಿಟ್ಟಿದ್ದಾರೆ.

ಲೈಂಗಿಕ ದೌರ್ಜನ್ಯವು ಮಹಿಳೆಯ ಖಾಸಗಿತನ, ಘನತೆ ಮತ್ತು ಗೌರವದ ಉಲ್ಲಂಘನೆಯಾಗುತ್ತದೆ. ಇದು ಸಂತ್ರಸ್ತರ ಮನಸ್ಸು ಮತ್ತು ಜೀವನದಲ್ಲಿ ಶಾಶ್ವತವಾದ ಗಾಯವುಂಟು ಮಾಡುತ್ತದೆ. ಪ್ರತಿಯೊಬ್ಬರೂ ಅವರವರ ದೇಹದ ಮೇಲೆ ಹಕ್ಕು ಹೊಂದಿರುತ್ತಾರೆ. ಅದನ್ನು ಉಲ್ಲಂಘಿಸುವ ಹಕ್ಕು ಯಾರಿಗೂ ಇಲ್ಲ. ಮಹಿಳೆಯ ಅನುಮತಿ ಇಲ್ಲದೆ ಪ್ರತಿರೋಧವನ್ನು ಉಲ್ಲಂಘಿಸಿ ಬಲವಂತವಾಗಿ ಆಕೆಯ ದೇಹದ ಮೇಲೆ ಹಕ್ಕು ಚಲಾಯಿಸುವಂತಿಲ್ಲ ಎಂದು ನ್ಯಾಯಮೂರ್ತಿ ಕಿರುಬಾಕರನ್‌ ಹೇಳಿದ್ದಾರೆ.

ಅರುವತ್ತು ವರ್ಷದ ಬುದ್ಧಿಮಾಂದ್ಯ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿರುವ ಆರೋಪಿಗಳಿಬ್ಬರು ಸಲ್ಲಿಸಿದ ಜಾಮೀನು ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿತು. ದೋಷಿಗಳು ಮಾನವರೆಂಬುದನ್ನೇ ಮರೆತಿದ್ದಾರೆ, ಪ್ರಾಣಿಗಳಾದರೂ ತಮ್ಮದೇ ಒಂದು ಗೌರವಯುತ ದಾರಿ, ವ್ಯವಸ್ಥೆಯೊಂದಿಗೆ ಬದುಕುತ್ತವೆ. ಆದರೆ ಇವರಿಬ್ಬರು ಪ್ರಾಣಿಗಳಲ್ಲ ಎಂದೂ ನ್ಯಾಯಾಧೀಶರು ಹೇಳಿದರು.

Comments are closed.