ಕರಾವಳಿ

ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶರತ್ ಮಡಿವಾಳ ಹಾಗೂ ಕಲಾಯಿ ಅಶ್ರಫ್ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ

Pinterest LinkedIn Tumblr

ಮಂಗಳೂರು, ಡಿಸೆಂಬರ್. 14: ಬಂಟ್ವಾಳ ತಾಲೂಕು ವ್ಯಾಪ್ತಿಯಲ್ಲಿ ಕೆಲವು ತಿಂಗಳ ಹಿಂದೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ಶರತ್ ಮಡಿವಾಳ ಹಾಗೂ ಮುಹಮ್ಮದ್ ಅಶ್ರಫ್ ಕುಟುಂಬಕ್ಕೆ ರಾಜ್ಯ ಸರಕಾರ ತಲಾ ಐದು ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ. ಖಾದರ್ ಹೇಳಿದರು.

ಮಂಗಳೂರಿನಲ್ಲಿ ಸರ್ಕ್ಯೂಟ್ ಹೌಸ್‍ನಲ್ಲಿಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, “ಬಂಟ್ವಾಳದಲ್ಲಿ ಇಬ್ಬರು ಯುವಕರ ಹತ್ಯೆ ನಡೆದಾಗ ಪತ್ರಿಕಾಗೋಷ್ಠಿ ಕರೆದು, ಪರಿಹಾರ ಕೊಡಿಸುತ್ತೇನೆ ಎಂದು ಹೇಳಿದ್ದೆ. ಇದೀಗ ಸರಕಾರದ ಜತೆ ಮಾತುಕತೆ ನಡೆಸಿ, ಪರಿಹಾರ ಬಿಡುಗಡೆ ಮಾಡಿಸುವ ಮೂಲಕ, ಕೊಟ್ಟ ಮಾತು ಉಳಿಸಿದ್ದೇನೆ” ಎಂದು ಹೇಳಿದರು.

ಪರಿಹಾರದ ಮೊತ್ತವನ್ನು ಮುಂದಿನ ದಿನಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಮೂಲಕ ಇಬ್ಬರ ಕುಟುಂಬಕ್ಕೂ ವಿತರಿಸಲಾಗುವುದು ಎಂದು ಯು.ಟಿ. ಖಾದರ್ ಹೇಳಿದರು.

ಓರ್ವ ಎಸ್ ಡಿಪಿಐ ಮುಖಂಡ ಹಾಗೂ ಇನ್ನೋರ್ವ ಆರೆಸ್ಸೆಸ್ ಕಾರ್ಯಕರ್ತ :

ಕಳೆದ ಜೂನ್ 21ರಂದು ಬಂಟ್ವಾಳದ ಬೆಂಜನಪದವಿನಲ್ಲಿ ಎಸ್ ಡಿಪಿಐ ಮುಖಂಡ ಕಲಾಯಿ ಅಶ್ರಫ್ ಅವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಕೊಲೆ ಮಾಡಿದ್ದರು. ಜುಲೈ 6ರಂದು ಬಂಟ್ವಾಳದ ಬಿ.ಸಿ. ರೋಡ್ ನಲ್ಲಿ ಬೈಕ್ ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಅವರನ್ನು ಮಾರಕಾಸ್ತ್ರಗಳಿಂದ ಕಡಿದು ಹತ್ಯೆ ಮಾಡಿದ್ದರು.

Comments are closed.