ಕರ್ನಾಟಕ

ಮೌಢ್ಯ ನಿಷೇಧ ವಿಧೇಯಕ ಅಂಗೀಕಾರ

Pinterest LinkedIn Tumblr


ವಿಧಾನಸಭೆ: ಮೂಢನಂಬಿಕೆ ಹಾಗೂ ಅನಾಚಾರಗಳನ್ನು ನಿಷೇಧಿಸುವ ಉದ್ದೇಶದ “ಕರ್ನಾಟಕ ಅಮಾನವೀಯ ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ, ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ-2017’ಕ್ಕೆ ವಿಧಾನಸಭೆಯಲ್ಲಿ ಕೆಲ ತಿದ್ದುಪಡಿಗಳೊಂದಿಗೆ ಗುರುವಾರ ಅಂಗೀಕಾರ ದೊರೆತಿದೆ.

ವಿಧೇಯಕ ಕುರಿತು ಮೂರು ಗಂಟೆಗಳ ಕಾಲ ಸುದೀರ್ಘ‌ ಚರ್ಚೆ ನಡೆದು ಸಾಕಷ್ಟು ವಾಗ್ವಾದ, ಪರ-ವಿರೋಧ ಅಭಿಪ್ರಾಯಗಳ ನಂತರ ಕೆಲವೊಂದು ತಿದ್ದುಪಡಿ ಮಾಡುವುದಾಗಿ ಸಮಾಜ ಕಲ್ಯಾಣ ಸಚಿವ ಆಂಜನೇಯ ಭರವಸೆ ನೀಡಿದರು. ನಂತರ ವಿಧೇಯಕಕ್ಕೆ ಒಪ್ಪಿಗೆ ಸೂಚಿಸಲಾಯಿತು.

ಮಾದ್ವ ಸಂಪ್ರದಾಯದ ಮುದ್ರಾ ಧಾರಣೆಯನ್ನು ಆಚರಿಸಬಹುದಾದ ಪಟ್ಟಿಗೆ ಸೇರಿಸುವುದು, ನಿಷೇಧದ ಪಟ್ಟಿಗೆ ವಶೀಕರಣವನ್ನೂ ಸೇರಿಸಲು ಚರ್ಚೆ ಸಂದರ್ಭದಲ್ಲಿ ಸರ್ಕಾರ ಒಪ್ಪಿಕೊಂಡಿದೆ. ಇನ್ನು ಕೆಂಡ ಹಾಯುವ ವಿಚಾರದಲ್ಲೂ ವೈಯಕ್ತಿಕ ನಂಬಿಕೆಯೊಂದಿಗೆ ಕೆಂಡ ಹಾಯಬಹುದು. ಆದರೆ, ಬಲವಂತವಾಗಿ ಕೆಂಡ ಹಾಯಲು ಪ್ರಚೋದಿಸುವಂತಿಲ್ಲ ಅಥವಾ ಒತ್ತಾಯಿಸುವಂತಿಲ್ಲ ಎಂಬುದನ್ನೂ ಸ್ಪಷ್ಟಪಡಿಸಲಾಯಿತು.

ಮೊಹರಂ ಸಂದರ್ಭದಲ್ಲಿ ದೇಹ ದಂಡಿಸುವುದು, ಮುಸ್ಲಿಂ ಸಮುದಾಯದ ಆಚರಣೆಯಾದ ಸುನ್ನತಿ ನಿಷೇಧ ಮಾಡಬೇಕು ಎಂಬ ಒತ್ತಾಯ ಬಿಜೆಪಿ ಸದಸ್ಯರಿಂದ ಕೇಳಿಬಂದಿತಾದರೂ ಇದಕ್ಕೆ ಆಡಳಿತಾರೂಢ ಕಾಂಗ್ರೆಸ್‌ ಸದಸ್ಯರು ಆಕ್ಷೇಪಿಸಿದರು. ಹೀಗಾಗಿ, ಇದನ್ನು ನಿಷೇಧ ಪಟ್ಟಿಯಲ್ಲಿ ಸೇರಿಸಲು ಸಮಾಜ ಕಲ್ಯಾಣ ಸಚಿವ ಆಂಜನೇಯ ಒಪ್ಪಲಿಲ್ಲ.

ವಿಧೇಯಕ ಜಾರಿಗೊಳಿಸುವುದಾದರೆ ಅದನ್ನು ಹಿಂದೂ ಮಾತ್ರವಲ್ಲ ಕ್ರಿಶ್ಚಿಯನ್‌ ಹಾಗೂ ಮುಸ್ಲಿಂ ಧರ್ಮದವರಿಗೂ ಅನ್ವಯವಾಗುವಂತೆ ಜಾರಿಗೊಳಿಸಬೇಕು ಎಂದು ಬಿಜೆಪಿಯ ಸದಸ್ಯರು ಪಟ್ಟು ಹಿಡಿದರು. ಆದರೆ, ವಿಧೇಯಕದಲ್ಲಿ ಯಾವುದೇ ಒಂದು ಧರ್ಮದ ಹೆಸರು ಉಲ್ಲೇಖೀಸಿಲ್ಲ. ಎಲ್ಲ ರೀತಿಯ ಅನಾಚಾರ, ವಾಮಾಚಾರ, ಮೌಡ್ಯ ನಿಷೇಧಿಸುವುದು ಉದ್ದೇಶ. ಇದು ಎಲ್ಲರಿಗೂ ಅನ್ವಯಿಸುತ್ತದೆ ಎಂದು ಸಚಿವರು ಸಮಜಾಯಿಷಿ ನೀಡಿದರು.

ವಿಧೇಯಕದ ಬಗ್ಗೆ ಆಕ್ರೋಶ:
ಸರ್ಕಾರವು 2013ರಿಂದಲೇ ಮೌಡ್ಯ ನಿಷೇಧ ಜಾರಿಗೆ ತರುವುದಾಗಿ ಹೇಳುತ್ತಾ ಕೊನೆಗೂ ಜೋತಿಷ್ಯ ಕೇಳಿಕೊಂಡು ನಾಲ್ಕೂವರೆ ವರ್ಷಗಳ ಬಳಿಕ ಈ ವಿಧೇಯಕ ಜಾರಿಗೊಳಿಸಲು ಮುಂದಾಗಿದೆ. ಮುಖ್ಯಮಂತ್ರಿಗಳು ತಮ್ಮ ಕಾರಿನ ಮೇಲೆ ಕಾಗೆ ಕುಳಿತ ಕಾರಣಕ್ಕೆ ಕಾರನ್ನೇ ಬದಲಿಸಿದ್ದರು. ಇದು ಮೂಢನಂಬಿಕೆಯಲ್ಲವೇ? ಎಂದು ಬಿಜೆಪಿ ಶಾಸಕ ಸಿ.ಟಿ.ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಲ್ಲದೆ, ಬೆಂಗಳೂರಿಗೆ ಬೆನ್ನಿಹಿನ್‌ ಬಂದಿದ್ದಾಗ ಸಂಪುಟದ ಕೆಲವು ಸದಸ್ಯರೇ ಹೋಗಿ ಕೈಯಾಡಿಸಿಕೊಂಡು ಬಂದಿಲ್ಲವೇ? ಕೆಂಡ ಹಾಯುವುದು, ಕೊಕ್ಕೆಯಿಂದ ನೇತು ಹಾಕುವುದು, ಮಕ್ಕಳನ್ನು ಎತ್ತರದಿಂದ ಎಸೆಯುವುದನ್ನು ನಿಷೇಧಿಸುವುದಾದರೆ, ಮುಸ್ಲಿಂ ಧರ್ಮದ ಮೊಹರಂ ಆಚರಣೆ, ಹಲಾಲ ಹಾಗೂ ಸುನ್ನತಿ ಪದ್ಧತಿಯನ್ನು ಕೂಡ ಸರ್ಕಾರ ಈ ವಿಧೇಯಕದ ನಿಷೇಧ ಆಚರಣೆಗಳ ಪಟ್ಟಿಗೆ ಸೇರಿಸಬೇಕು. ಮಡೆಸ್ನಾನ ಕೂಡ ಅವರವರ ನಂಬಿಕೆ ಮೇಲೆ ಮಾಡುವ ಆಚರಣೆಯಾಗಿರುವುದರಿಂದ ಇಷ್ಟವಿದ್ದವರು ಮಾಡಿಕೊಳ್ಳುತ್ತಾರೆ. ಹೀಗಾಗಿ, ಎಂಜಲು ಎಲೆ ಮೇಲೆ ಹೊರಳಾಡುವುದನ್ನು ನಿಷೇಧಿಸುವ ಅಗತ್ಯವಿಲ್ಲ ಎಂದಿದ್ದಾರೆ.

ಮೌಡ್ಯ ಆಚರಣೆಗಳಿಂದ ಮನುಷ್ಯನಿಗೆ ಆಗುತ್ತಿರುವ ಶೋಷಣೆ, ತೊಂದರೆಗಳನ್ನು ತಡೆಗಟ್ಟುವ ಉದ್ದೇಶದಿಂದ ಈ ವಿಧೇಯಕ ರೂಪಿಸಲಾಗಿದೆ. ನಂಬಿಕೆಗಳಿಗೆ ಧಕ್ಕೆ ತರಬೇಕೆನ್ನುವ ಉದ್ದೇಶವಿಲ್ಲ. ಸಮಾಜದಲ್ಲಿ ಜನರಿಗೂ ನಂಬಿಕೆ ಯಾವುದು, ಮೂಢನಂಬಿಕೆಗಳು ಯಾವುದು ಎನ್ನುವ ತಿಳವಳಿಕೆ ಬಂದಿದೆ. ಯಾವುದೇ ಆಚರಣೆಗಳು ಮನುಕುಲಕ್ಕೆ ಅನಾನುಕೂಲವಾಗುವುದಾದರೆ ಅದನ್ನು ಬಿಟ್ಟು ಬಿಡೋಣ.
– ಸಿದ್ದರಾಮಯ್ಯ, ಮುಖ್ಯಮಂತ್ರಿ

ಸರ್ಕಾರ ಕೇವಲ ಮೂಢನಂಬಿಕೆ ಅಥವಾ ಅನಾಚಾರಗಳನ್ನು ನಿಷೇಧಿಸುವ ಕಾಯ್ದೆ ಜಾರಿಗೆ ತಂದ ಮಾತ್ರಕ್ಕೆ ಸಮಾಜದಿಂದ ಇಂಥ ಅನಾಚಾರ ಪದ್ಧತಿಗಳು ದೂರವಾಗುವುದಿಲ್ಲ. ಅದರ ಜತೆಗೆ ಇಂತಹ ಮೌಡ್ಯ ವಿಚಾರಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಹಾಗೂ ಅದರಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸುವ ಕೆಲಸವನ್ನೂ ಮಾಡಬೇಕು.
– ಜಗದೀಶ್‌ ಶೆಟ್ಟರ್‌, ವಿಧಾನಸಭೆ ಪ್ರತಿಪಕ್ಷದ ನಾಯಕ

ಸಮಾಜದಲ್ಲಿರುವ ಮೂಢನಂಬಿಕೆ, ಅಮಾನವೀಯ ಪದ್ಧತಿಗಳನ್ನು ನಿಷೇಧಿಸುವ ಉದ್ದೇಶದಿಂದ ಈ ವಿಧೇಯಕ ತರಲಾಗಿದೆೆ. ಶೋಷಿತ ಸಮಾಜದಲ್ಲಿ ಹುಟ್ಟಿ ಇಂಥಹ ಹಲವು ಅನಾಚಾರಗಳಿಂದ ಮಾನಸಿಕವಾಗಿ ನಾನೂ ತುಂಬಾ ನೋವು ಅನುಭವಿಸಿದ್ದೇನೆ. ಮೌಢಾÂಚರಣೆಗಳನ್ನು ನಿಷೇಧಿಸುವ ವಿಧೇಯಕ ಮಂಡಿಸುವ ಅವಕಾಶ ನನ್ನ ಪಾಲಿಗೆ ಬಂದಿರುವುದು ನಿಜಕ್ಕೂ ತುಂಬಾ ಖುಷಿ ತಂದಿದೆ.
– ಎಚ್‌.ಆಂಜನೇಯ, ಸಮಾಜ ಕಲ್ಯಾಣ ಸಚಿವ

ಸರ್ಕಾರವು ಹೋಮ-ಹವನಕ್ಕೆ ಬ್ರೇಕ್‌ ಹಾಕುವುದಾದರೆ ಸಮಾಜದಲ್ಲಿರುವ ಎಲ್ಲ ಮೂಢನಂಬಿಕೆಗಳನ್ನು ನಿಷೇಧಿಸಬೇಕು. ಹಾಗಾದರೆ, ಸರ್ಕಾರದ ವತಿಯಿಂದಲೇ ನಡೆಯುವ ಮಹಾಮಸ್ತಕಾಭಿಷೇಕದಲ್ಲಿಯೂ ಸಾವಿರಾರು ಲೀಟರ್‌ ಹಾಲು, ಹೋಮಾಧಿಗಳನ್ನು ಮಾಡಲಾಗುತ್ತದೆ. ಈ ಬಗ್ಗೆ ಏನು ಹೇಳುತ್ತೀರಿ? ಇದಕ್ಕೂ ಬ್ರೇಕ್‌ ಹಾಕಿ.
– ವೈ.ಎಸ್‌.ವಿ.ದತ್ತ, ಜೆಡಿಎಸ್‌ ಶಾಸಕ

ಈ ವಿಧೇಯಕ ಮೇಲ್ನೋಟಕ್ಕೆ ಹಲ್ಲಿಲ್ಲದ ಹಾವಿನಂತಿದೆ. ಸರ್ಕಾರಕ್ಕೆ ಮೂಢನಂಬಿಕೆಗಳನ್ನು ನಿಷೇಧಿಸುವ ಬಗ್ಗೆ ನಿಜವಾದ ಕಾಳಜಿಯಿದ್ದರೆ ಸಾರ್ವಜನಿಕ ಕಚೇರಿಗಳಲ್ಲಿ ದೇವರ, ಮನೆಯವರ ಫೋಟೊ ಪ್ರದರ್ಶಿಸಿ ಪೂಜೆ ಮಾಡುವುದಕ್ಕೂ ಕಡಿವಾಣ ಹಾಕಬೇಕು. ಜತೆಗೆ, ಟಿವಿ ಮಾಧ್ಯಮದಲ್ಲಿ ಪ್ರಸಾರವಾಗುವ ಜ್ಯೋತಿಷ್ಯ, ಪತ್ರಿಕೆಗಳಲ್ಲಿ ಬರುವ ವಶೀಕರಣದಂತಹ ಜಾಹೀರಾತುಗಳಿಗೂ ಕಡಿವಾಣ ಹಾಕಬೇಕು.
– ಬಿ.ಆರ್‌. ಪಾಟೀಲ್‌, ಕೆಜೆಪಿ ಶಾಸಕ

ನಮ್ಮಲ್ಲಿ ನಂಬಿಕೆ ಅಂದರೆ ಏನು ಎನ್ನುವುದು ಮೊದಲು ಸ್ಪಷ್ಟವಾಗಬೇಕು. ಈ ರೀತಿಯ ವಿಧೇಯಕವನ್ನು ಸಿದ್ಧಪಡಿಸಬೇಕಾದರೆ, ಅದಕ್ಕೆ ಸಂಬಂಧಪಟ್ಟ ಪರಿಣಿತರ ಜತೆಗೆ ಸಮಗ್ರ ಚರ್ಚಿಸಿ ಸಾಧಕ-ಬಾಧಕಗಳನ್ನು ಗಮನದಲ್ಲಿಟ್ಟುಕೊಂಡು ಕಾಯ್ದೆ ತರಬೇಕು. ಅಲ್ಲದೆ, ಮುದ್ರೆ ಹಾಕಿಸಿಕೊಳ್ಳುವುದು ನಿಷೇಧಿಸುವುದಾದರೆ, ಸುನ್ನತಿಯನ್ನು ಕೂಡ ನಿಲ್ಲಿಸಬೇಕು.
– ವಿಶ್ವೇಶ್ವರ ಹೆಗಡೆ ಕಾಗೇರಿ, ಬಿಜೆಪಿ ಶಾಸಕ

ದೇವರು-ಧರ್ಮದ ಹೆಸರಿನಲ್ಲಿ ಜನರಿಗೆ ಮೋಸ ಮಾಡುವ ಆಚರಣೆಗಳನ್ನು ಸರ್ಕಾರ ನಿಷೇಧಿಸಬೇಕು. ಯಾವುದೇ ನಂಬಿಕೆಗಳು ಜನರ ಭಾವನೆ ಅಥವಾ ನಂಬಿಕೆಗಳಿಗೆ ಬಿಟ್ಟಿರುವ ವಿಚಾರ. ಆದರೆ, ಅನಾಚಾರ, ಮೂಢನಂಬಿಕೆಗಳನ್ನು ನಿಷೆೇಧಿಸುವ ಜತೆಗೆ, ಅವುಗಳ ಬಗ್ಗೆ ಮುಗ್ಧ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು.
– ಕೆ.ಎಸ್‌. ಪುಟ್ಟಣ್ಣಯ್ಯ, ರೈತ ಸಂಘದ ಶಾಸಕ

ನಮ್ಮಲ್ಲಿ ಇಂಥಹ ಮೂಢನಂಬಿಕೆಗಳು ಹಾಗೂ ಅನಾಚಾರ ಪದ್ಧತಿಗಳಿಂದ ಅತಿಹೆಚ್ಚಿನ ರೀತಿಯಲ್ಲಿ ತುಳಿತ, ಶೋಷಣೆಗೆ ಒಳಗಾಗುತ್ತಿರುವವರು ಕೆಳ ವರ್ಗದ ಜನರು. ಹೀಗಿರುವಾಗ, ಈ ರೀತಿಯ ವಿಧೇಯಕ ಜಾರಿಗೊಳಿಸುವ ಜತೆಗೆ ಅಮಾಯಕ ಶೋಷಿತ ವರ್ಗದ ಜನರಲ್ಲಿಯೂ ಜಾಗೃತಿ ಮೂಡಿಸುವ ಕೆಲಸವನ್ನು ಸರ್ಕಾರ ಮಾಡಬೇಕು.
– ಗೋವಿಂದ ಕಾರಜೋಳ, ಬಿಜೆಪಿ ಶಾಸಕ

-ಉದಯವಾಣಿ

Comments are closed.