ರಾಷ್ಟ್ರೀಯ

ಯೋಗಿ ಆದಿತ್ಯಾನಾಥ್ ಸ್ವಕ್ಷೇತ್ರ ಗೋರಖ್ ಪುರ ಆಸ್ಪತ್ರೆಯಲ್ಲಿ ಮುಂದುವರೆದ ಸಾವಿನ ಸರಣಿ; 48 ಗಂಟೆಗಳಲ್ಲಿ 30 ಮಕ್ಕಳ ಸಾವು!

Pinterest LinkedIn Tumblr

ಗೋರಖ್‌ಪುರ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್ ಅವರ ಸ್ವಕ್ಷೇತ್ರ ಗೋರಖ್ ಪುರದ ಬಿಆರ್ ಡಿ ಆಸ್ಪತ್ರೆಯಲ್ಲಿ ಮಕ್ಕಳ ಸಾವಿನ ಸರಣಿ ಮತ್ತೆ ಮುಂದುವರೆದಿದ್ದು, ಕೇವಲ 48 ಗಂಟೆಗಳ ಅವಧಿಯಲ್ಲಿ ಮತ್ತೆ 30 ನವಜಾತ ಶಿಶುಗಳು ಸಾವನ್ನಪ್ಪಿವೆ ಎಂದು ತಿಳಿದುಬಂದಿದೆ.

ಮೂರು ತಿಂಗಳ ಹಿಂದೆ ಕೇವಲ ಐದು ದಿನಗಳಲ್ಲಿ 70ಕ್ಕೂ ಅಧಿಕ ಮಕ್ಕಳ ಸಾವಿನೊಂದಿಗೆ ಇಡೀ ರಾಷ್ಟ್ರದ ಗಮನ ಸೆಳೆದಿದ್ದ ಬಿಆರ್ ಡಿ ಆಸ್ಪತ್ರೆ, ದುರಂತದ ಬಳಿಕವೂ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಅದರ ಪರಿಣಾಮವಾಗಿ ಕಳೆದ 48 ಗಂಟೆಗಳಲ್ಲಿ ಮತ್ತೆ 30 ಮಕ್ಕಳು ಸಾವನ್ನಪ್ಪಿವೆ. ಈ ಪೈಕಿ ಆರು ಮಕ್ಕಳು ಮಿದುಳುಜ್ವರಕ್ಕೆ ಬಲಿಯಾಗಿವೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

ಇನ್ನು ಈ ಹಿಂದಿನಂತೆ ಈ ಬಾರಿ ಮಕ್ಕಳ ಸಾವಿಗೆ ಆಮ್ಲಜನಕದ ಕೊರತೆ ಕಾರಣವಲ್ಲ. ಬದಲಿಗೆ ಮೃತ 30 ಮಕ್ಕಳ ಪೈಕಿ 15 ಮಕ್ಕಳಿಗೆ ಇನ್ನೂ ಒಂದು ತಿಂಗಳು ತುಂಬಿರಲಿಲ್ಲ. ಅಷ್ಟು ಸಣ್ಣ ಶಿಶುಗಳಿಗೆ ತಕ್ಷಣವೇ ಚಿಕಿತ್ಸೆ ದೊರೆಯದಿದ್ದರೆ ಸಾವಿನ ಸಾಧ್ಯತೆ ಹೆಚ್ಚಿರುತ್ತದೆ. ಆರು ಮಕ್ಕಳು ಮಿದುಳು ಜ್ವರಕ್ಕೆ ತುತ್ತಾಗಿದ್ದರೆ, ಉಳಿದ ಮಕ್ಕಳು ವಿವಿಧ ಕಾರಣಗಳಿಂದ ಮೃತಪಟ್ಟಿವೆ ಎಂದು ಆಸ್ಪತ್ರೆಯ ಸಮುದಾಯ ಔಷಧಿ ವಿಭಾಗದ ಮುಖ್ಯಸ್ಥ ಡಾ.ಡಿ.ಕೆ.ಶ್ರೀವಾಸ್ತವ ಅವರು ತಿಳಿಸಿದ್ದಾರೆ.

Comments are closed.