
ಮಂಗಳೂರು, ನ.1: ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಆಚರಣೆ ಕಾರ್ಯಕ್ರಮ ಮಂಗಳೂರಿನ ನೆಹರೂ ಮೈದಾನದಲ್ಲಿ ಬುಧವಾರ ಬೆಳಗ್ಗೆ ಜರಗಿತು.
ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದ ಬಳಿಕ ರಾಜ್ಯಂತ್ಸವ ಸಂದೇಶ ನೀಡಿದರು. ಕನ್ನಡ ತಂತ್ರಾಂಶಗಳ ವ್ಯಾಪಕ ಬಳಕೆ ಹಾಗೂ ಪ್ರಾಥಮಿಕ ಶಾಲೆಗಳಿಂದಲೇ ಕನ್ನಡ ಕಡ್ಡಾಯಕ್ಕೆ ಕನ್ನಡಿಗರ ಇಚ್ಛಾಶಕ್ತಿ ಅಗತ್ಯ ಎಂದು ಹೇಳಿದರು.

ಕನ್ನಡನಾಡಿನ ಅಭಿವೃದ್ಧಿಗೆ ರಾಜಮಹಾರಾಜರು ವಿಶಿಷ್ಟ ಕೊಡುಗೆ ನೀಡಿದ್ದಾರೆ. ಕನ್ನಡ ನಾಡು ನುಡಿ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ನಾಡು ನುಡಿಯ ಅಭಿವೃದ್ಧಿಯಾಗಬೇಕಾದರೆ ನೆಲದ, ಜನರ ಅಭಿವೃದ್ಧಿಯಾಗಬೇಕು ಎಂದರು.
ಇದೇ ಸಂದರ್ಭ ಸಚಿವರು ವಿವಿಧ ಪೊಲೀಸ್ ಪ್ಲಟೂನ್ ಗಳಿಂದ ಗೌರವ ವಂದನೆ ಸ್ವೀಕರಿಸಿದರು.

ಸಮಾರಂಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ, ಮೇಯರ್ ಕವಿತಾ ಸನಿಲ್, ಉಪಮೇಯರ್, ರಜನೀಶ್, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಚ್.ಖಾದರ್, ಕಸಾಪ ದ.ಕ. ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಪಶ್ಚಿಮ ವಲಯ ಐಜಿಪಿ ಹೇಮಂತ್ ನಿಂಬಾಳ್ಕರ್, ಮಂಗಳೂರು ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್, ಎಸ್ಪಿ ಸುಧೀರ್ ಕುಮಾರ್ ರೆಡ್ಡಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಮುಹಮ್ಮದ್ ಹನೀಫ್, ಮನಪಾ ಸದಸ್ಯ ಶಶಿಧರ್ ಹೆಗ್ಡೆ ಮೊದಲಾದವರು ಉಪಸ್ಥಿತರಿದ್ದರು.

ವಿವಿಧ ಸಾಧಕರಿಗೆ ಪ್ರಶಸ್ತಿ ಪ್ರಧಾನ:
ಕಾರ್ಯಕ್ರಮದಲ್ಲಿ ಹಾಜಿ ಎಸ್.ಎಂ.ರಶೀದ್ ಮಂಗಳೂರು(ಶಿಕ್ಷಣ), ಡಾ.ನಂದಕಿಶೋರ್ ಬಿ.(ವೈದ್ಯಕೀಯ), ವೈ.ಕೃಷ್ಣ ಸಾಲ್ಯಾನ್ ಏಳಿಂಜೆ(ಕೃಷಿ), ಕೇಶವ ಕುಂದರ್(ಪತ್ರಿಕೋದ್ಯಮ), ಬೆಂಗ್ರೆ ಜಯ ಸುವರ್ಣ(ಕ್ರೀಡೆ-ಕಬಡ್ಡಿ), ಕೋಟಿ ಪರವ ಮಾಡಾವು(ಭೂತಾರಾಧನೆ), ಶ್ರೀಧರ ಹೊಳ್ಳ ಕೊಟ್ಟಾರ(ನೃತ್ಯ), ಕಲಾಯಿ ಈಶ್ವರ ಪೂಜಾರಿ(ನಾಟಿ ವೈದ್ಯ), ಕೆ.ಆರ್.ನಾಥ್ ಕೊಂಚಾಡಿ(ಸಮಾಜಸೇವೆ), ದೇವಿಪ್ರಸಾದ್ ಬೆಳ್ತಂಗಡಿ(ಸಂಪಾದಕ-ಬರಹಗಾರರು-ಸಣ್ಣ ಪತ್ರಿಕಾ ಕ್ಷೇತ್ರ), ಕೆ. ದೇವದಾಸ್ ಭಂಡಾರಿ ದೊಂಬಡ್ಡೆಗುತ್ತು (ಸಮಾಜ ಸೇವೆ), ರಾಮಕೃಷ್ಣ ಕುದ್ರೋಳಿ(ದೇಹದಾರ್ಢ್ಯ), ಬಿ.ಕೆ. ಮೋನಪ್ಪಆಚಾರ್ಯ ಬೈದಗುತ್ತು (ಶಿಲ್ಪಶಾಸ್ತ್ರ), ಅಶೋಕ್ ಭಟ್ ಎನ್. ಉಜಿರೆ(ಯಕ್ಷಗಾನ) ಹಾಗೂ ವಿನ್ನಿ ಫೆರ್ನಾಂಡಿಸ್ ಮಂಗಳೂರು(ಸಿನೆಮಾ) ಅವರಿಗೆ ಮತ್ತು ಸಮಾಜ ಸೇವೆಗಾಗಿ 4 ಸಂಘಟನೆಗಳಾದ ಮಂಗಳೂರಿನ ಯುವವಾಹಿನಿ ಮತ್ತು ಅಖಿಲ ಭಾರತ ಮುಂಡಾಲ ಯುವ ವೇದಿಕೆ ಹಾಗೂ ಚಿಲಿಂಬಿಯ ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್, ಸುಳ್ಯದ ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
Comments are closed.